ರೈತರು ರಾಸು ವಿಮೆ ಮಾಡಿಸಿ ಆರ್ಥಿಕ ನಷ್ಟ ತಪ್ಪಿಸಿಕೊಳ್ಳಿ : ಬಸವರಾಜು

ಚಾಮುಲ್ ಹಾಗೂ ಕರಿನಂಜನಪುರ ಡೇರಿಯಿಂದ ರಾಸುಗಳ ವಿಮೆ ನೋಂದಾಣಿಗೆ ಚಾಲನೆ
ಚಾಮರಾಜನಗರ: ರೈತರು ತಮ್ಮ ರಾಸುಗಳಿಗೆ ವಿಮೆಯನ್ನು ಮಾಡಿಸಿಕೊಳ್ಳುವ ಮೂಲಕ ಆರ್ಥಿಕ ನಷ್ಟವನ್ನು ತಪ್ಪಿಸಿಕೊಳ್ಳಲು ಒಕ್ಕೂಟ ಹಾಗೂ ಡೇರಿ ನೀಡುವ ಯೋಜನೆಗಳ ಪ್ರಯೋಜವನ್ನು ಪಡೆದುಕೊಳ್ಳಬೇಕು ಎಂದು ಚಾಮುಲ್ ನಿರ್ದೇಶಕ ಎಚ್.ಎಸ್. ಬಸವರಾಜು ತಿಳಿಸಿದರು.

ನಗರದ ಸಮೀಪದ ಕರಿನಂಜನಪುರ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರ ರಾಸುಗಳಿಗೆ ಚಾಮುಲ್ ಹಾಗೂ ಭಾರತೀಯ ಬಿಮಾ ಕಂಪನಿ ಸಹಯೋಗದಲ್ಲಿ ವಿಮೆ ಪಾಲಿಸಿ ನೊಂದಾಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿ ವರ್ಷವು ಜಿಲ್ಲಾ ಹಾಲು ಒಕ್ಕೂಟವು ರಾಸುಗಳ ವಿಮೆ ನೊಂದಾಣಿಗಾಗಿ ಶೇ. ೫೦ ರಷ್ಟು ಹಣವನ್ನು ಭರಿಸಿ, ರೈತರಿಂದ ಶೇ. ೫೦ ರಷ್ಟು ಅನುದಾನವನ್ನು ಪಡೆದುಕೊಂಡು ತಪ್ಪದೇ ವಿಮೆ ಪಾಲಿಸಿ ಮಾಡಿಸಿಕೊಡಲಾಗುತ್ತದೆ. ಈ ಅಭಿಯಾನವು ಜಿಲ್ಲಾದ್ಯಂತ ಎಲ್ಲಾ ಡೇರಿಗಳಲ್ಲಿ ಇಂದಿನಿಂದ ಆರಂಭವಾಗುತ್ತಿದೆ. ತಾಲೂಕಿನ ವ್ಯಾಪ್ತಿಯಲ್ಲಿ ಕರಿನಂಜನಪುರ ಡೇರಿಯಿಂದ ಆರಂಭಿಸಲಾಗಿದೆ.

ಕಳೆದ ವರ್ಷ ರೈತರು ವಿಮೆ ಕಲ್ಪಿಸಿಕೊಂಡಿದ್ದ ರಾಸುಗಳಿಗೆ ಆಕಸ್ಮಿಕವಾಗಿ ಸಾವೀಡಾಗಿದ್ದರೆ ಕನಿಷ್ಟ ೩೦ ಸಾವಿರದಿಂದ ಪರಿಹಾರವನ್ನು ವಿಮೆ ಕಂಪನಿ ನೀಡುತ್ತಿದೆ. ಇದರಿಂದ ರೈತರಿಗೆ ಹೆಚ್ಚಿನ ಲಾಭವಿದೆ. ಅಲ್ಲದೇ ನೆಮ್ಮದಿಯಿಂದ ರಾಸುಗಳ ವಿಮೆ ಮಾಡಿಸಿ, ಜೀವನ ನಡೆಸಲು ಸಾಧ್ಯವಿದೆ ಎಂದರು.

ಮತ್ತೋರ್ವ ನಿರ್ದೇಶಕ ಸದಾಶಿವಮೂರ್ತಿ ಹಸುವಿಗೆ ಒಲೆ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯಲ್ಲಿರುವ ೨.೨೫ ಲಕ್ಷ ರಾಸುಗಳಿಗೆ ವಿಮೆ ಕಲ್ಪಿಸಲು ಅಭಿಯಾನ ಆರಂಭಿಸಲಾಗಿದೆ. ಹೊಸದಾಗಿ ಭಾರತೀಯ ಬಿಮಾ ಕಂಪನಿಯೊಂದಿಗೆ ಒಕ್ಕೂಟ ಒಡಂಬಡಿಕೆ ಮಾಡಿಕೊಂಡಿದೆ. ಹೀಗಾಗಿ ರೈತರು ತಮ್ಮ ಪಾಲಿನ ಹಣವನ್ನು ಪಾವತಿ ಮಾಡಿ, ವಿಮೆ ನೊಂದಣಿ ಮಾಡಿಕೊಳ್ಳಬೇಕು. ಅಲ್ಲದೇ ಹಸುವನ್ನು ಸಹ ಸಮರ್ಪಕವಾಗಿ ನಿರ್ವಹಣೆ ಮಾಡುವ ಜವಾಬ್ಧಾರಿಯು ಸಹ ನಿಮ್ಮದಾಗಿದೆ. ಯಾವುದೇ ಕಾರಣಕ್ಕೆ ಹಸುವಿನ ಕಿವಿಗೆ ಹಾಕಿರುವ ಒಲೆಯನ್ನು ಕಳೆದುಕೊಳ್ಳಬಾರದು ಎಂದರು.

ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ. ಅಮರ್ ಮಾತನಾಡಿ, ರೈತರು ಈ ವಿಮೆ ಸೌಲಭ್ಯವನ್ನು ಪಡೆದುಕೊಂಡರೆ ಹೆಚ್ಚಿನ ಲಾಭ ವಿದೆ. ಪ್ರತಿ ರಾಸುವಿಗೆ ವಿಮೆ ಮಾಡಿಸುವುದರಿಂದ ಅಕಸ್ಮಿಕ ಅವಘಡಗಳು ಸಂಭವಿಸಿದಾಗ ಅನುಕೂಲವಾಗುತ್ತದೆ. ೩೦ ಸಾವಿರ ಮೌಲ್ಯದ ಹಸುವಿಗೆ ೧೩೮೮ ರೂ. ಆಗಿದ್ದು ರೈತರು ತಮ್ಮ ಬಾಬ್ತು ೬೯೪ ರೂ. ಪಾವತಿಸಿದರೆ ವಿಮೆ ಸೌಲಭ್ಯ ದೊರೆಯಲಿದೆ. ಆದೇ ರೀತಿ ೪೦ ಸಾವಿರಕ್ಕೆ ೧೭೮೪ ರೂ., ರೈತರಿಂದ ೮೩೨ ರೂ., ೫೦ ಸಾವಿರಕ್ಕೆ ೨೨೩೦ ರೂ. ರೈತರಿಂದ ೫೫೭ ರೂ. ೬೦ ಸಾವಿರಕ್ಕೆ ೨೬೭೬ ರೂ. ರೈತರಿಂದ ೧೩೮೮ ರೂ.ಗಳನ್ನು ಪಡೆದುಕೊಳ್ಳಲಾಗುತ್ತಿದೆ. ಈ ಬಾರಿ ಹೊಸ ಕಂಪನಿಯಾಗಿರುವುದರಿಂದ ವಿಮೆ ನೊಂದಾಣಿ ಹೆಚ್ಚಿನ ಷರತ್ತುಗಳನ್ನು ವಿಧಿಸಲಾಗಿದೆ. ಇದನ್ನು ಸಮರ್ಪಕವಾಗಿ ಪೊರೈಸಿದರೆ ಮಾತ್ರ ವಿಮೆ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಿದೆ. ರೈತರಿಗೆ ಒಕ್ಕೂಟ ಹಾಗೂ ರೈತ ಕಲ್ಯಾಣ ಟ್ರಸ್ಟ್ ಶೇ. ೫೦ ರಷ್ಟು ವಿಮೆ ಕಂತು ಪಾವತಿ ಮಾಡಿ ಒಂದು ವರ್ಷದ ಅವಧಿಗೆ ವಿಮೆ ಮಾಡಿಸಿಕೊಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಸಿದ್ದವೀರಪ್ಪ, ಕರಿನಂಜನಪುರ ಪಿಎಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಪ್ಪ, ವಿಸ್ತರಣಾಧಿಕಾರಿ ಪಿ.ಎಂ. ಭಾಗ್ಯರಾಜ್, ಸಂಘದ ಉಪಾಧ್ಯಕ್ಷ ಮಹದೇವೇಗೌಡ, ನಿರ್ದೇಶಕರಾದ ಗುರುಸ್ವಾಮಿ, ಪಿ. ಬಸವಣ್ಣ, ಕೆ.ಎಸ್. ಶಶಿಕಿರಣ್, ಕೆ.ಎಂ. ನಾಗಮಲ್ಲಪ್ಪ, ಕೆ.ಪಿ. ನಾಗೇಂದ್ರ, ಮಹದೇವಪ್ಪ, ಕೆ.ಸಿ. ಸೋಮಣ್ಣ, ಕೆ. ಪುಟ್ಟಸ್ವಾಮಿ, ರತ್ಮಮ್ಮ, ಚಂದ್ರಮ್ಮ, ಡೇರಿ ಮುಖ್ಯ ಕಾರ್ಯನಿರ್ವಾಹಕ ವೃಷಭೆಂದ್ರಪ್ಪ, ನೌಕರರ ನಂಜುಂಡ, ಮಹೇಂದ್ರ ಹಾಗೂ ಸದಸ್ಯರು ಇದ್ದರು.

Leave a Reply

Your email address will not be published. Required fields are marked *