ರೈತ ಮುಖಂಡರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸಭೆ : ವಿವಿಧ ಸಮಸ್ಯೆಗಳ ಕುರಿತು ವಿಸೃತ ಚರ್ಚೆ

ಚಾಮರಾಜನಗರ: ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಇಂದು ರೈತ ಮುಖಂಡರು, ಪ್ರತಿನಿಧಿಗಳೊಂದಿಗೆ ಜಿಲ್ಲೆಯ ರೈತರ ವಿವಿಧ ಬೇಡಿಕೆಗಳು ಹಾಗೂ ಸಮಸ್ಯೆಗಳ ಕುರಿತು ಸಭೆ ನಡೆಸಿದರು.

ನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾ ಉಸ್ತುವಾರಿ ಸಚಿವರು ಸುಧೀರ್ಘವಾಗಿ ರೈತ ಮುಖಂಡರು ಪ್ರತಿನಿಧಿಗಳಿಂದ ಅಹವಾಲು, ಸಮಸ್ಯೆಗಳನ್ನು ಆಲಿಸಿದರು.

ರೈತರ ಕೃಷಿ ಪಂಪ್ ಸೆಟ್ ಗಳಿಗೆ ನಿರಂತರ ವಿದ್ಯುತ್ ಪೂರೈಸಬೇಕು. ಕಬ್ಬು ಬೆಳೆಗಾರರ ಬಾಕಿ ಸೇರಿದಂತೆ ಇತರೆ ಸಮಸ್ಯೆಗಳನ್ನು ಪರಿಹರಿಸಬೇಕು. ಗಣಿಗಾರಿಕೆಯಿಂದ ರಸ್ತೆ, ಇತರೆ ಮೂಲ ಸೌಕರ್ಯಗಳು ಹಾನಿಯಾಗುವುದನ್ನು ತಪ್ಪಿಸಬೇಕು. ಸೂರ್ಯಕಾಂತಿ ಬೆಳೆಗೆ ಸಕಾಲದಲ್ಲಿ ಕನಿಷ್ಠ ಬೆಂಬಲ ಬೆಲೆ ಸಿಗುವ ಪ್ರಕ್ರಿಯೆ ನಡೆಯಬೇಕು. ಬೆಳೆ ನಷ್ಟ ಪರಿಹಾರ ನೀಡಬೇಕು. ಕಾಡು ಪ್ರಾಣಿಗಳಿಂದ ಬೆಳೆ ನಾಶ ತಪ್ಪಿಸಬೇಕು. ಎಲ್ಲ ಕೆರೆಗಳಿಗೆ ನೀರು ತುಂಬಿಸಬೇಕು. ಕೆರೆಗಳ ನೀರು ಪೂರೈಸುವಿಕೆಯಲ್ಲಿ ನಿರ್ವಹಣೆ ಉತ್ತಮವಾಗಿರಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಹಾಗೂ ಅನುಭವಿಸುತ್ತಿರುವ ತೊಂದರೆಗಳ ಕುರಿತು ರೈತ ಮುಖಂಡರು ಸಭೆಯಲ್ಲಿ ಪ್ರಸ್ತಾಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಮಾತನಾಡಿ ರೈತರ ಪಂಪ್ ಸೆಟ್ ಗಳಿಗೆ ಪ್ರತಿನಿತ್ಯ ಕನಿಷ್ಠ 5 ಗಂಟೆಗಳ ಕಾಲ ವಿದ್ಯುತ್ ಪೂರೈಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ. ಹೊರ ರಾಜ್ಯದಿಂದ ಸರ್ಕಾರ ವಿದ್ಯುತ್ ಖರೀದಿಗೆ ಮುಂದಾಗಿದೆ. ಹೀಗಾಗಿ ಹೆಚ್ಚು ಅವಧಿಗಳ ಕಾಲ ವಿದ್ಯುತ್ ನೀಡಲು ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದರು.

ರಾಜ್ಯ ಸರ್ಕಾರ ರೈತರ ಪರವಾಗಿದೆ. ರೈತರ ಹಿತಕಾಯುವ ತೀರ್ಮಾನಗಳನ್ನು ತೆಗೆದುಕೊಂಡಿದೆ. ವಿದ್ಯುತ್ ಸೇರಿದಂತೆ ಎಲ್ಲ ರೀತಿಯ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಕಬ್ಬು ಬೆಳೆಗಾರರ ಸಮಸ್ಯೆ ಸೇರಿದಂತೆ ಇಂದಿನ ಸಭೆಯಲ್ಲಿ ಮಂಡಿಸಿರುವ ಎಲ್ಲ ಅಭಿಪ್ರಾಯ ಸಮಸ್ಯೆಗಳನ್ನು ಸಂಬಂಧಪಟ್ಟ ಸಚಿವರು ಹಾಗೂ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಪರಿಹರಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಯಾವುದೇ ಸಮಸ್ಯೆಗಳಿರಲಿ ಅದಕ್ಕೆ ಪರಿಹರಿಸುವ ನಿಟ್ಟಿನಲ್ಲಿ ನಾನು ಮುಂದಾಗುತ್ತೇನೆ. ರೈತ ಮುಖಂಡರು ಯಾವುದೇ ತೊಂದರೆಗಳಿದ್ದರೂ ನನ್ನ ಗಮನಕ್ಕೆ ತರಬೇಕು. ಜಿಲ್ಲೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ಆಗಬಹುದಾದ ತಾಂತ್ರಿಕ ಲೋಪ ದೋಷಗಳನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿದ್ಯುತ್ ಸಂಬಂಧ ಯಾವುದೇ ಸಮಸ್ಯೆಗಳಿದ್ದರೂ ತುರ್ತಾಗಿ ಕ್ರಮವಹಿಸಲು ತಿಳಿಸಲಾಗಿದೆ. ರೈತರ ಬೆಳೆ ಉಳಿಸಲು ಸರ್ಕಾರ ಕ್ರಮವಹಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ತಿಳಿಸಿದರು.

ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎಚ್.ಎಂ. ಗಣೇಶ್ ಪ್ರಸಾದ್, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧೀಕ್ಷಕ ಎಂಜಿನಿಯರ್ ಸೋಮಶೇಖರ್, ರೈತ ಮುಖಂಡರಾದ ಮಹೇಶ್ ಪ್ರಭು, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕಾಳನಹುಂಡಿ ಗುರುಸ್ವಾಮಿ, ಹೊನ್ನೂರು ಬಸವಣ್ಣ, ಪೃಥ್ವಿ, ಮಹೇಶ್ ಕುಮಾರ್, ವೆಂಕಟರಮಣ ಪಾಪು, ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *