275 ಮಂದಿ ತಪಾಸಣೆ, 129 ಮಂದಿ ಶಸ್ತ್ರಚಿಕಿತ್ಸೆಗೆ ಆಯ್ಕೆ
ಚಾಮರಾಜನಗರ: ರೋಟರಿ ಸಂಸ್ಥೆ ವತಿಯಿಂದ ನಗರದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಬಹಳ ಯಶಸ್ವಿಯಾಗಿ ನಡೆಯಿತು.
ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ರೋಟರಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮ, ಅರವಿಂದ ಕಣ್ಣಿನ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ 275 ಮಂದಿ ತಪಾಸಣೆ ಮಾಡಿಸಿಕೊಂಡರು. 129 ಮಂದಿ ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದು, ಅವರನ್ನು ಕೊಯಂಬತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಶಿಬಿರದಲ್ಲಿ ವ್ಯವಸ್ಥೆ ಮಾಡಲಾಯಿತು.
ರೋಟರಿ ಸಂಸ್ಥೆ ಅಧ್ಯಕ್ಷ ಸಿ.ಎಸ್.ಚಂದ್ರಪ್ರಭಜೈನ್ ಮಾತನಾಡಿ, ಕಣ್ಣಿನ ದೃಷ್ಠಿ ಎಲ್ಲರಿಗೂ ಮಹತ್ವದ್ದು, ಅದರಲ್ಲೂ ವಿಶೇಷವಾಗಿ ಮಹಿಳೆಯರು, ವಯೋವೃದ್ದರೇ ಹೆಚ್ಚಿನ ಸಂಖ್ಯೆಯಲ್ಲಿ ಕಣ್ಣಿನ ಪೊರೆಗೆ ತುತ್ತಾಗುತ್ತಿದ್ದಾರೆ. ಆರ್ಥಿಕವಾಗಿ ದುರ್ಬಲರಾಗಿದ್ದು ದಿನನಿತ್ಯ ಜೀವನದಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅವರಿಗೆ ಅನುಕೂಲ ಕಲ್ಪಿಸಲು ರೋಟರಿ ಸಂಸ್ಥೆಯು ಪ್ರತಿ ತಿಂಗಳು ಮೊದಲನೆಯ ಭಾನುವಾರ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಅಯೋಜಿಸಿದ್ದು, ಇದರ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥಾಪಕ ಸದಸ್ಯ ಶ್ರೀನಿವಾಸಶೆಟ್ಟಿ, ಕಾರ್ಯದರ್ಶಿ ಅಬ್ದುಲ್ ಅಜೀಜ್( ದೀನಾ), ಖಜಾಂಚಿ ಆರ್.ಎಂ.ಸೋಮಣ್ಣ, ಉಪಾಧ್ಯಕ್ಷ ಕಾಗಲವಾಡಿಚಂದ್ರು, ಮುಂದಿನ ಸಾಲಿನ ಅಧ್ಯಕ್ಷ ರಾಮಸಮುದ್ರ ನಾಗರಾಜು, , ಸುರೇಶ್, ಕಮಲ್ ರಾಜ್, ಸಿದ್ದರಾಜು, ಎಸ್ ಆರ್ ಎಸ್ ಶ್ರೀನಿವಾಸ್, ಶ್ರೀನಿವಾಸನ್, ಶಿಬಿರ ಪಿಆರ್ ಓ ವಿಜಯಕಾಂತ್ , ಡಾ.ಪರಮೇಶ್ವರಪ್ಪ ಇತರರು ಭಾಗವಹಿಸಿದ್ದರು.