ವರ್ತಕರ ಸೌಹಾರ್ದ ಸಹಕಾರಿ ಸಂಘ 33.28 ಲಕ್ಷ ನಿವ್ವಳ; ಶೇ. 20ರಷ್ಟು ಸದಸ್ಯರಿಗೆ ಡಿವಿಡೆಂಟು ವಿತರಣೆ : ಪದ್ಮ ಪ್ರಸಾದ್

ಚಾಮರಾಜನಗರ ವರ್ತಕರ ಸೌಹಾರ್ದ ಸಹಕಾರಿ ಸಂಘದ ೮ನೇ ವಾರ್ಷಿಕ ಸಾಮಾನ್ಯ ಸಭೆ
ಚಾಮರಾಜನಗರ: ವರ್ತಕರ ಸೌರ್ಹಾದ ಸಹಕಾರಿ ಸಂಘವು ಪ್ರಸ್ತುತ ವರ್ಷದಲ್ಲಿ ಉತ್ತಮ ವಹಿವಾಟು ನಡೆಸಿ ೩೩.೮೭ ಲಕ್ಷ ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ. ೨೦ ರಷ್ಟು ಡಿವಿಡೆಂಟು ಅನ್ನು ಅವರ ಉಳಿತಾಯ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ಚಾಮರಾಜನಗರ ವರ್ತಕರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಪದ್ಮ ಪ್ರಸಾದ್ ತಿಳಿಸಿದರು.

ನಗರದ ವರ್ತಕರ ಭವನದಲ್ಲಿ ನಡೆದ ಚಾಮರಾಜನಗರ ವರ್ತಕರ ಸೌಹಾರ್ದ ಸಹಕಾರಿ ಸಂಘದ ೮ನೇ ವಾರ್ಷಿಕ ಸಾಮನ್ಯ ಸಭೆಯನ್ನು ಉದ್ಗಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ೨೦೧೬ ರಲ್ಲಿ ೫೭೦ ಸದಸ್ಯರ ೧೫.೭೦ ಲಕ್ಷ ಷೇರು ಬಂಡವಾಳದೊಂದಿಗೆ ಪ್ರಾರಂಭವಾದ ಸಹಕಾರಿ ಇಂದು ಏಳು ವರ್ಷಗಳಲ್ಲಿ ೯೩೫ ಸದಸ್ಯರನ್ನು ಹೊಂದಿದೆ. ೧.೨೪ ಕೋಟಿ ರೂ. ಷೇರು ಬಂಡವಾಳ ಮತ್ತು ೨.೨೭ ಕೋಟಿ ರೂ. ಡೆಪಾಸಿಟ್ ಹೊಂದಿದೆ. ಇದೆಲ್ಲವು ಸದಸ್ಯರು ಸಂಘದ ಮೇಲೆ ವಿಶ್ವಾಸವಿಟ್ಟು ವ್ಯವಹಾರ ಮಾಡಿದ ಫಲವಾಗಿದೆ ಎಂದರು.

ಷೇರು ದಾರರಿಗೆ ಅನುಕೂಲಕ್ಕೆ ತಕ್ಕಂತೆ ವಿವಿಧ ರೀತಿಯ ಯೋಜನೆಗಳಲ್ಲಿ ೪.೧೪ ಕೋಟಿ ರೂ. ಸಾಲ ನೀಡಲಾಗಿದೆ. ಸುಮಾರು ೧೫.೫ ಕೋಟಿ ವಾರ್ಷಿಕ ವಹಿವಾಟು ಮಾಡಲಾಗಿದೆ. ಸಹಕಾರಿಯು ಆರ್ಥಿಕ ವ್ಯವಹಾರಗಳು ಅತ್ಯಂತ ಪಾರದರ್ಶಕತೆಯಿಂದ ಕೂಡಿದ್ದು ಸಾಲ ನೀಡುವಿಕೆ, ಠೇವಣಿ ಸಂಗ್ರಹಿಸುವಿಕೆ ಯಲ್ಲಿ ಪರಿಣಾಮಕಾರಿಯಾದ ನೀತಿಯನ್ನು ಅನುಸರಿಸಲಾಗುತ್ತಿದೆ. ಇದರ ಪರಿಣಾಮ ಈ ಭಾರಿಯು ಸಹ ಸಹಕಾರಿಗೆ ಲೆಕ್ಕ ಪರಿಶೋಧನೆ ಯಲ್ಲಿ ‘ಎ’ ಗ್ರೇಡ್ ಪಡೆದುಕೊಂಡಿರುತ್ತೇವೆ. ಸಹಕಾರಿ ಬೆಳವಣಿಗೆ ಆರ್ಥಿಕ ಭದ್ರತೆ ಹಿತ ದೃಷ್ಠಿಯಿಂದ ಭದ್ರತಾ ಸಾಲಗಳಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.

ಸಹಕಾರಿಯ ಬೆಳವಣಿಗೆ ದೃಷ್ಟಿಯಿಂದ ಸಹಕಾರಿಯ ಆಡಳಿತ ಮಂಡಳಿ ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿನ ಸಹಕಾರಿಗಳ ಅಧ್ಯಯನಕ್ಕೆ ಹೋಗಿದ್ದು ಅಲ್ಲಿನ ಸೌಹಾರ್ದ ಸಹಕಾರಿ ಸಂಘಗಳ ಬಗ್ಗೆ ತಿಳಿದು ನಮ್ಮ ಸದಸ್ಯರಿಗೆ ಅನುಕೂಲ ವಾಗುವಂತೆ ಮುಂದಿನ ದಿನಗಳಲ್ಲಿ ಸದಸ್ಯರಿಗಾಗಿ ಕರೆಂಟ್ ಅಕೌಂಟ್, ಓಡಿ ಅಕೌಂಟ್, ಆರ್‌ಟಿಜಿಎಸ್, ನೇಪ್ಟ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ನೀಡಲಾಗುತ್ತಿದೆ. ಅಲ್ಲದೇ ಗ್ರಾಹಕ ವ್ಯವಹಾರದ ಕುರಿತು ಎಸ್‌ಎಂಎಸ್ ಸೇವೆಗಳನ್ನು ಒದಗಿಸಲು ಉದ್ದೇಶೀಸಲಾಗಿದೆ ಎಂದು ಪದ್ಮ ಪ್ರಸಾದ್ ತಿಳಿಸಿದರು.

ಸಂಘದಿಂದ ಆರ್ಥಿಕ ಚಟುವಟಿಕೆ ಅಷ್ಟೇ ಅಲ್ಲದೆ ಸೇವಾ ಮನೋಭಾವನೆಯಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಈ ಸಾಲಿನಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಿಇಟಿ ತರಬೇತಿ ನೀಡಲು ಯೋಜನೆ ರೂಪಿಸಲಾಗುತ್ತಿದೆ. ಮತ್ತು ಸಮಾಜದಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ನಮ್ಮ ಸಹಕಾರಿಯ ವತಿಯಿಂದ ಸನ್ಮಾನಿಸುವ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.

ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್. ಬಾಲಸುಬ್ರಮಣ್ಯ, ಉಪಾಧ್ಯಕ್ಷ ಬಿ.ವಿ. ವೆಂಕಟನಾಗಪ್ಪಶೆಟ್ಟಿ ಮಾತನಾಡಿ, ಸಂಘದ ಬೆಳವಣಿಗೆ ಕಾರಣಕರ್ತರಾದ ಸದಸ್ಯರು ಹಾಗು ಆಡಳಿತ ಮಂಡಲಿಯ ನಿಸ್ವಾರ್ಥ ಸೇವೆಯಿಂದ ಅಭಿವೃದ್ದಿಯತ್ತ ಸಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿತ್ತಿರುವ ವೇಣುಗೋಪಾಲ್. ಕ್ರೀಡಾ ಕ್ಷೇತ್ರದಲ್ಲಿ ಶಿವು, ಸಂಘದ ಕಾನೂನು ಸಲಹೆಗಾರ ಎ.ಎಸ್.ವಿಜಯಕುಮಾರ್, ಲೆಕ್ಕ ಪರಿಶೋಧಕ ಕೆ ಕೇಶವಡೋಂಗ್ರೆ ಅವರನ್ನು ಸನ್ಮಾನಿಸಲಾಯಿತು. ಸಂಘದ ಮುಖ್ಯನಿರ್ವಾಹಕ ಬಿ.ಜಿ. ಸಂಕೀರ್ತನ್ ವಾರ್ಷಿಕ ವರದಿಯನ್ನು ಮಂಡಿಸಿ ಅನುಮೋದನೆ ಪಡೆದುಕೊಂಡರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಬಿ.ವಿ. ವೆಂಕಟನಾಗಪ್ಪಶೆಟ್ಟಿ, ನಿರ್ದೇಶಕರಾದ ಸಿ.ಎಸ್. ಮಹೇಶ್‌ಕುಮಾರ್, ಎಸ್. ಬಾಲಸುಬ್ರಮಣ್ಯ, ಕೆ.ಎಸ್. ಚಿದಾನಂದಗಣೇಶ್, ಸಿ.ಎ. ನಾರಾಯಣ್, ಸಿ.ವಿ. ಶ್ರೀನಿವಾಸ್, ವರ್ತಕರ ಸಂಘದ ಅಧ್ಯಕ್ಷ ಎಚ್.ಬಿ. ರಾಜಶೇಖರ್, ಎನ್. ಶ್ರೀಕಂಠಮೂರ್ತಿ, ಎಂ. ಕಮಲ್‌ರಾಜ್, ಎಂ. ರಾಜಣ್ಣ, ಸಿ.ಎಸ್. ಮಹೇಶ್‌ಕುಮಾರ್, ಡಿ.ಎಸ್.ರಾಘವೇಂದ್ರ, ರಾಮಚಂದ್ರ, ಎಸ್.ವಿ. ಗಣೇಶ್, ಸಿ.ಪಿ. ಗಣೇಶ್, ಸಿ.ಪಿ. ಮಧುಸೂಧನ್, ಜಿ.ಆರ್. ರೇಖಾ ಶ್ರೀಧರ್, ಎಸ್. ಪುಷ್ಪ ಶ್ರೀನಿವಾಸ್, ಪಿಗ್ನಿ ಕಲೆಕ್ಟರ್ ಸಿ.ಬಿ. ಪ್ರಭುಸ್ವಾಮಿ, ಸಂಘದ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *