ವಿಕಲಚೇತನರಿಗೆ ಅನುಕಂಪ ಬೇಡ, ಅವಕಾಶ ನೀಡಿ ಮೂಂಚೂಣಿಗೆ ತನ್ನಿ : ಜಿಲ್ಲಾಧಿಕಾರಿ ಶಿಲ್ಪಾನಾಗ್

ಚಾಮರಾಜನಗರ: ವಿಕಲಚೇತನರಿಗೆ ಕರುಣೆ, ಅನುಕಂಪ ತೋರುವುದು ಬೇಡ, ಸಮಾಜದಲ್ಲಿ ಸಮಾನ ಅವಕಾಶಗಳನ್ನು ನೀಡಿ ಮುಂಚೂಣಿಗೆ ತರಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಇಲಾಖೆಗಳು, ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಮಿತಿ ಮತ್ತು ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.



ವಿಕಲಚೇತನರ ಜೀವನ, ಹಾದಿ ಸವಾಲಿನಿಂದ ಕೂಡಿದೆ. ವಿಕಲಚೇತನರಿಗೆ ಕರುಣೆ ತೋರಿದರೇ ಸಾಲದು, ಸಮಾಜದಲ್ಲಿ ಅವರಿಗೂ ಎಲ್ಲರಂತೆ ಬದುಕುವ ಹಕ್ಕು, ಅವಕಾಶಗಳಿವೆ. ಸರ್ಕಾರಿ ಯೋಜನೆ, ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಿ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವುದೇ ನಾವೆಲ್ಲರೂ ಅವರಿಗೆ ನೀಡುವ ಗೌರವವಾಗಿದೆ. ಅದು ನಮ್ಮೆಲ್ಲರ ಆದ್ಯ ಕರ್ತವ್ಯವೂ ಆಗಿದೆ ಎಂದರು.

ಜಿಲ್ಲೆಯಲ್ಲಿ ಶಾಲೆ ತೊರೆದ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಸೋಲಿಗ, ಬೆಟ್ಟಕುರುಬ ಹಾಗೂ ಕಾಡುಕುರುಬರ ಮಕ್ಕಳನ್ನು ಗುರುತಿಸಿ ಅವರಿಗೆ ಬುಡಕಟ್ಟು ವಿದ್ಯಾರ್ಥಿನಿಲಯದಲ್ಲಿ ವಸತಿಯುಕ್ತ ವ್ಯವಸ್ಥೆ ಮಾಡಿ, ಮತ್ತೊಮ್ಮೆ ಪರೀಕ್ಷೆ ಎದುರಿಸಲು 3 ತಿಂಗಳ ಕಾಲ ನುರಿತ ಶಿಕ್ಷಕರಿಂದ ತರಬೇತಿಯನ್ನು ಈಗಾಗಲೇ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ಶಾಲೆ ತೊರೆದ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿಕಲಚೇತನ ಮಕ್ಕಳನ್ನು ಗುರುತಿಸಿ ತರಬೇತಿ ನೀಡಲು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಸರ್ಕಾರವು ಸಾಕಷ್ಟು ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ವಿಕಲಚೇತನರಿಗೆ ಗುರುತಿನ ಚೀಟಿ(ಯುಡಿಐಡಿ ಕಾರ್ಡ್)ಯನ್ನು ಪ್ರತಿ ಗ್ರಾಮಪಂಚಾಯತ್ ಮಟ್ಟದಲ್ಲಿ ಅವರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಇದರಿಂದ ಹಲವು ಸೌಲಭ್ಯ, ಸವಲತ್ತುಗಳನ್ನು ಅಂಗವಿಕಲರು ಪಡೆದು ಉತ್ತಮ ಜೀವನ ನಡೆಸಲು ಸಹಕಾರಿಯಾಗಿದೆ. ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಉನ್ನತ ಶಿಕ್ಷಣ ಪಡೆಯುವ ವಿಕಲಚೇತನರಿಗೆ ಪರೀಕ್ಷಾ, ಬೋಧನಾ ಶುಲ್ಕವನ್ನು ಮರುಪಾವತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ 2686 ವಿಕಲಚೇತನರಿಗೆ ಕೃತಕ ಅಂಗಾಂಗ, ವೀಲ್‍ಚೇರ್, ಸ್ಕೂಟರ್, ಇತರೆ ಸವಲತ್ತುಗಳನ್ನು ನೀಡಲಾಗಿದೆ. ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರನ್ನಾಗಿ ನೇಮಿಸಿ ಗೌರವಧನ ನೀಡಲಾಗುತ್ತಿದೆ. ದೃಷ್ಠಿಹೀನ ಮಹಿಳೆಯರಿಗೆ ಪೌಷ್ಠಿಕ ಆಹಾರ ನೀಡಲು ಹೆರಿಗೆಭತ್ಯೆ ಹಾಗೂ ಶಿಶುಪಾಲನಾ ಭತ್ಯೆಗಳನ್ನು ಸರ್ಕಾರ ನೀಡಿದೆ. ವಿಕಲಚೇತನ ಪುರುಷ ಅಥವಾ ಮಹಿಳೆಯರನ್ನು ವಿವಾಹವಾಗುವ ಸಾಮಾನ್ಯ ವ್ಯಕ್ತಿಗಳಿಗೆ 50 ಸಾವಿರ ರೂ. ಹೂಡಿಕೆ ಹಣಕಾಸು ನೀಡಲಾಗುತ್ತಿದೆ. ಇದು ಸಹಾಯವಲ್ಲ. ನಮ್ಮ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮೀ ಅವರು ಮಾತನಾಡಿ ವಿದ್ಯೆ ಇರುವವರು, ಇಲ್ಲದವರು ಎಲ್ಲರಿಗೂ ಬದುಕಿದೆ. ಅಂತಹ ವಿಕಲಚೇತನರನ್ನು ಗುರುತಿಸಿ ಅವಕಾಶ ನೀಡಿದರೆ ಮುಂದೆ ಬರಲು ಸಾಧ್ಯವಿದೆ. ವಿಕಲಚೇತನರ ಬಾಳು ಹಸನುಗೊಳಿಸಿ, ಬೆಳಕು ಚೆಲ್ಲುವಲ್ಲಿ ಪ್ರತಿಯೊಬ್ಬರು ಮುಂದಾಗಬೇಕು ಎಂದರು.

ಜಿಲ್ಲಾ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ರಮೇಶ್ ಅವರು ಮಾತನಾಡಿ ವಿಕಲಚೇತನರಿಗೆ ಅನುಕೂಲವಾಗುವಂತೆ ಜಿಲ್ಲಾಕೇಂದ್ರದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದರು.

ಇದೇ ವೇಳೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಲೂಯಿ ಬ್ರೈಲ್ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಎಸ್.ಎಸ್.ಎಲ್.ಸಿ ಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಶಾಲಿನಿ ಹಾಗೂ ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ರಮಿತ್ ಗೌಡ, ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಪಾಲ್ಗೊಂಡ ರಂಗಸ್ವಾಮಿ, ರಾಜ್ಯಮಟ್ಟದ ಕ್ರೀಡೆಯಲ್ಲಿ ಪ್ರಶಸ್ತಿ ಗೆದ್ದ ಜಮುನಾ ಹಾಗೂ ಜಿಲ್ಲಾಮಟ್ಟದ ಕ್ರೀಡಾಕೂಟದ ವಿಜೇತರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಸಾಂಸ್ಕತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿದ್ದ ಶ್ರವಣದೋಷ ವಿಕಲಚೇತನರಿಗೆ ಮಾತುಗಳು ಅರ್ಥವಾಗಲು ಅನುಕೂಲವಾಗುವಂತೆ ಸೈನ್ ಲಾಂಗ್ವೇಜ್ ಶಾಲೆಯ ಶಿಕ್ಷಕಿ ಚಂದ್ರಕಲಾ ಅವರು ವಿವಿಧ ಸನ್ನೆಗಳ ಮೂಲಕ ಕಾರ್ಯಕ್ರಮ ವಿವರಿಸಿದ್ದು ಈ ಬಾರಿಯ ವಿಶ್ವ ವಿಕಲಚೇತನರ ದಿನ ವಿಶೇಷವಾಗಿತ್ತು. ಅಲ್ಲದೆ ಮಲೆ ಮಹದೇಶ್ವರ ಸುಗಮ ಸಂಗೀತದ ಮಂಜು ಮತ್ತು ತಂಡ ಆರಂಭದಲ್ಲಿ ನಡೆಸಿಕೊಟ್ಟ ಗೀತಗಾಯನ ಗಮನ ಸೆಳೆಯಿತು.

ನಗರಸಭೆ ಸದಸ್ಯರಾದ ಅಬ್ರಾರ್ ಅಹಮದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್, ವಿಕಲಚೇತನರ ಕಲ್ಯಾಣಾಧಿಕಾರಿ ಸುರೇಶ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ರವಿಕುಮಾರ್, ರಾಜ್ಯ ಅಂಗವಿಕಲರ ಒಕ್ಕೂಟದ ಅಧ್ಯಕ್ಷರಾದ ರಾಮನಾಥ್, ಸಂಚಾಲಕ ಉಮೇಶ್, ತಾಲೂಕು ವಿಕಲಚೇತನರ ಸಂಘದ ಅಧ್ಯಕ್ಷರಾದ ರೂಪೇಶ್, ವಿವಿಧ ಸಂಘಸಂಸ್ಥೆಗಳ ಪದಧಿಕಾರಿಗಳು, ಇತರರು ಕಾರ್ಯಕ್ರಮದಲ್ಲಿ ಇದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಚಾಮರಾಜೇಶ್ವರ ದೇವಾಲಯದ ಬಳಿ ವಿಕಲಚೇತನರ ಜಾಥಾಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಅವರು ಚಾಲನೆ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

Leave a Reply

Your email address will not be published. Required fields are marked *