ಮೈಸೂರು: ಇಂದಿನ ಯುವಜನತೆ ವಿದ್ಯಾವಂತರಾಗುತ್ತಿದ್ದಾರೆಯೇ ಹೊರತು ವಿಚಾರವಂತರಾಗುತ್ತಿಲ್ಲ. ಆದ್ದರಿಂದ ಯುವಜನತೆ ಕುವೆಂಪು ಅವರನ್ನು ಹೆಚ್ಚು ಹೆಚ್ಚು ಓದಿ ಅರ್ಥೈಸಿಕೊಳ್ಳುವುದರ ಜೊತೆಗೆ ವೈಚಾರಿಕತೆ ರೂಢಿಸಿಕೊಳ್ಳಬೇಕೆಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಸಲಹೆ ನೀಡಿದರು.
ನಗರದ ಅವರ ನಿವಾಸದಲ್ಲಿ ಅಖಿಲ ಭಾರತ ವಕೀಲರ ಒಕ್ಕೂಟ ಮಂಡ್ಯ ಜಿಲ್ಲಾ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಕುವೆಂಪು ಜನ್ಮದಿನಾಚರಣೆ ಪ್ರಯುಕ್ತ ವರ್ತಮಾನದ ವೈಚಾರಿಕ ಭೀಷ್ಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಭಗವಾನ್, ಇತ್ತೀಚಿನ ದಿನಗಳಲ್ಲಿ ಸತ್ಯ ಹೇಳುವವರನ್ನು ಗುರಿಯಾಗಿಸಿಕೊಂಡು ತೇಜೋವಧೆ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಯಾರಿಗೂ ಇಂದು ಸತ್ಯ ಬೇಕಾಗಿಲ್ಲ. ಯುವಜನತೆ ಪದವೀಧರರಾಗುತ್ತಿದ್ದಾರೆಯೇ ಹೊರತು, ಅವರ ತಲೆಯಲ್ಲಿ ವಿಚಾರಗಳು ಇಲ್ಲ. ಹೀಗಾಗಿ ವೈಚಾರಿಕತೆ ಬೆಳೆಸಿಕೊಳ್ಳಲು ಮುಂದಾಗಬೇಕು. ಅದಕ್ಕಾಗಿ ಯುವಜನತೆ ಕುವೆಂಪು ಅವರನ್ನು ಓದಿಕೊಳ್ಳುವ ಜೊತೆಗೆ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಈ ಪ್ರಪಂಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ಮತ್ತೊಬ್ಬ ವಿದ್ಯಾಂಸರು ಇಲ್ಲವೇ ಇಲ್ಲ. ಎಲ್ಲರೂ ಅಂಬೇಡ್ಕರ್ ಅವರ ಬದುಕು, ಬರಹ, ಭಾಷಣಗಳ ಸಂಪುಟವನ್ನು ತಪ್ಪದೇ ಓದಿಕೊಳ್ಳಬೇಕು. ಇಂದು ದೇಶವನ್ನು ರಾಜ್ಯಾಂಗದ ಬದಲು ಪಂಚಾಂಗ ಆಳುತ್ತಿದೆ. ಇದು ತೊಲಗಬೇಕು ಎಂದರೆ ಎಲ್ಲರೂ ಸಂವಿಧಾನ ಓದಬೇಕು. ಅದನ್ನು ಅರ್ಥೈಸಿಕೊಂಡು ಬದುಕಬೇಕು ಎಂದರು.
ಈ ಸಂದರ್ಭದಲ್ಲಿ ಅಖಿಲ ಭಾರತ ವಕೀಲರ ಒಕ್ಕೂಟದ ಮಂಡ್ಯ ಜಿಲ್ಲಾಧ್ಯಕ್ಷ ಬಿ.ಟಿ.ವಿಶ್ವನಾಥ್, ರಾಜ್ಯ ಸಮಿತಿ ಸದಸ್ಯ ಪಿ.ಪಿ.ಬಾಬುರಾಜ್, ಚೇತನ್, ವಕೀಲರಾದ ಸೌಮ್ಯ, ಪಲ್ಲವಿ, ಯತೀಶ್, ಕಿಶೋರ್, ಎಚ್.ವಿ.ಪ್ರಕಾಶ್, ಸಚಿನ್ ಎಸ್.ಎಚ್, ಕಮಲೇಶ್, ಚೇತನ್ ಕುಮಾರ್ ಹಾಗೂ ಮಂಡ್ಯ ಪ್ರಗತಿಪರ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ, ಚಲನಚಿತ್ರ ನಿರ್ದೇಶಕ ಸಾಗರ್ ಹೊನಗಾನಹಳ್ಳಿ ಮತ್ತು ಯುವ ವಕೀಲರು ಹಾಜರಿದ್ದರು.