ಕೆಲ್ಲಂಬಳ್ಳಿಯಲ್ಲಿ ಚಾಮರಾಜನಗರ ವಿಶ್ವವಿದ್ಯಾನಿಲಯದಿಂದ ಆರು ದಿನಗಳ ಶಿಬಿರಕ್ಕೆ ಚಾಲನೆ
ಚಾಮರಾಜನಗರ: ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಗ್ರಾಮಾಂತರ ಪ್ರದೇಶದ ಜನರ ಜೀವನ ಮತ್ತು ಸಂಸ್ಕೃತಿ ಪರಂಪರೆ, ಸಹಬಾಳ್ವೆ,ಪರಿಸರ ಸಂರಕ್ಷಣೆ, ನೈಮರ್ಲ್ಯತೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಸಮಾಜ ಕಾರ್ಯ ಶಿಬಿರಗಳು ಸಹಕಾರಿಯಾಗಿವೆ ಎಂದು ಭೋಗಾಪುರ ಗ್ರಾಮ ಪಂಚಾಯಿತಿ ಸದಸ್ಯ ಕೆಲ್ಲಂಬಳ್ಳಿ ಸೋಮಶೇಖರ್ ತಿಳಿಸಿದರು.
ತಾಲೂಕಿನ ಕೆಲ್ಲಂಬಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಾಮರಾಜನಗರ ವಿಶ್ವ ವಿದ್ಯಾನಿಲಯ ವತಿಯಿಂದ ನಡೆಯುತ್ತಿರುವ ಆರು ದಿನಗಳ ಸಮಾಜ ಕಾರ್ಯ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪದವಿ ಹಾಗು ಸ್ನಾತಕೋತ್ತರ ಪದವಿಯನ್ನು ಪಡೆದುಕೊಳ್ಳುವ ವಿದ್ಯಾರ್ಥಿಗಳಿಗೆ ಸಮಾಜ ಕಾರ್ಯ ಶಿಬಿರವು ಸಹ ಅತ್ಯಂತ ಉಪಯುಕ್ತವಾಗಿದೆ.
ಪದವಿಯ ಜೊತೆಗೆ ಈ ಭಾಗದ ಜನರ ಪರಿಸರ ಮತ್ತು ಅವರೊಂದಿಗೆ ಒಡನಾಟ ಅವರ ಅಚಾರ ವಿಚಾರಗಳನ್ನು ಅರಿತು ಇನ್ನು ಹೆಚ್ಚಿನ ಜ್ಞಾನ ಮತ್ತು ಸೇವಾ ಮನೋಭಾವವನ್ನು ರೂಡಿಸಿಕೊಳ್ಳಲು ಸಹಕಾರಿಯಾಗಿದೆ. ವಿಶ್ವವಿದ್ಯಾಲಯ ಪ್ರಾಧ್ಯಾಪಕರ ವೃಂದ ನಮ್ಮ ಗ್ರಾಮದಲ್ಲಿ ಆರು ದಿನಗಳ ಶಿಬಿರ ಆಯೋಜನೆ ಮಾಡಿರುವುದು ಸಂತೋಷ ತಂದಿದೆ. ಶಿಬಿರಕ್ಕೆ ಗ್ರಾಮಸ್ಥರಿಂದ ಉತ್ತಮ ಸಹಕಾರ ದೊರೆಯಲಿದೆ ಎಂದರು.
ಭೋಗಾಪುರ ಗ್ರಾ.ಪಂ. ಅಧ್ಯಕ್ಷೆ ರೂಪ ಶಿಬಿರವನ್ನು ಉದ್ಗಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಆರು ದಿನಗಳ ಕಾಲ ಶಿಬಿರ ಯಶಸ್ವಿಯಾಗಿ ನಡೆಯಲಿ. ಗ್ರಾಮ ಪಂಚಾಯಿತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲು ಬದ್ದರಾಗಿದ್ದೇವೆ. ವಿದ್ಯಾರ್ಥಿಗಳು ಕಾಲೇಜಿನಿಂದ ಗ್ರಾಮಕ್ಕೆ ಬರಲು ಮತ್ತು ಸಾಯಂಕಾಲ ಮತ್ತೇ ಕಾಲೇಜಿಗೆ ತೆರಳಲು ವಾಹನದ ವ್ಯವಸ್ಥೆಯನ್ನು ಪಂಚಾಯಿತಿ ವತಿಯಿಂದ ಮಾಡಿಕೊಡುವುದಾಗಿ ತಿಳಿಸಿದರು.
ಶ್ವ ವಿದ್ಯಾಲಯದ ಮೌಲ್ಯ ಮಾಪನ ವಿಭಾಗದ ಕುಲಸಚಿವ ಪ್ರೊ. ಪಿ. ಮಾದೇಶ್ ಮಾತನಾಡಿ, ವಿಶ್ವ ವಿದ್ಯಾಲಯದ ಮಟ್ಟದಲ್ಲಿ ಸಮಾಜ ಕಾರ್ಯ ಶಿಬಿರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ವಿದ್ಯಾರ್ಥಿಗಳು ಈ ಆರು ದಿನಗಳ ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿ ಗ್ರಾಮ ನೈರ್ಮಲ್ಯದ ಅರಿವು, ಪರಿಸರ ಸಂರಕ್ಷಣೆ, ವ್ಯಕ್ತಿತ್ವ ವಿಕಸನ, ಆರೋಗ್ಯದ ಬಗ್ಗೆ ಅರಿವು, ಮೌಲ್ಯದ ಅನುಷ್ಠಾನ, ಜಲ ಸಂರಕ್ಷಣೆ, ರಕ್ತದಾನ ಜಾಗೃತಿ, ನೇತ್ರದಾನದ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಮಹೇಶ್, ಸದಸ್ಯೆ ಮಂಗಳಮ್ಮ, ಎಸ್‌ಡಿಎಂಸಿ ಅಧ್ಯಕ್ಷ ದೊರೆಸ್ವಾಮಿ, ಮುಖ್ಯ ಶಿಕ್ಷಕ ಕುಮಾರ್, ಸಹ ಶಿಕ್ಷಕ ವೃಂದ ಹಾಗೂ ಶಿಬಿರಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.