ಸಿಇಟಿ-2024 ವಿದ್ಯಾರ್ಥಿ ಮಿತ್ರ ತರಬೇತಿ ಶಿಬಿರ

ಚಾಮರಾಜನಗರ: ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗ ಹಾಗೂ ಜೆಎಸ್‍ಎಸ್ ಮಹಿಳಾ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಸಿಇಟಿ-2024 ವಿದ್ಯಾರ್ಥಿ ಮಿತ್ರ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು.

ನಗರದ ಜೆಎಸ್‍ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವನ್ನು ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ಮಂಜುನಾಥ ಪ್ರಸನ್ನ ಅವರು ಗಿಡಕ್ಕೆ ನೀರೆರೆಯುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, 2024ರಿಂದ ಅನ್ವಯವಾಗುವಂತೆ ವರ್ಷದ ಆರಂಭದಲ್ಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ವಿದ್ಯಾರ್ಥಿ ಮಿತ್ರ ತರಬೇತಿ ಎಂಬ ಕಾರ್ಯಕ್ರಮವನ್ನು ರೂಪಿಸಿರುವುದು ಉತ್ತಮ ಬೆಳವಣಿಗೆ ಎಂದು ಸಂತಸ ವ್ಯಕ್ತಪಡಿಸಿದರು.

ನೀಟ್, ಸಿಇಟಿ ಆನ್‍ಲೈನ್ ಅರ್ಜಿಗಳನ್ನು ಭರ್ತಿ ಮಾಡುವ ಹಲವು ವಿಧಾನಗಳನ್ನು ಬದಲಾವಣೆ ಮಾಡಲಾಗಿದ್ದು, ಇದನ್ನು ವಿದ್ಯಾರ್ಥಿಗಳು ಭರ್ತಿ ಮಾಡುವಾಗ ಸಾಕಷ್ಟು ತಪ್ಪುಗಳು ಕಂಡುಬರುತ್ತಿತ್ತು. ಇದನ್ನು ಮನಗಂಡ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ವರ್ಷದಿಂದ ವಿದ್ಯಾರ್ಥಿ ಮಿತ್ರ ತರಬೇತಿ ಎಂಬ ಹೆಸರಿನಡಿ ಉಪನ್ಯಾಸಕರಿಗೆ ಉತ್ತಮ ಕಾರ್ಯಕ್ರಮವನ್ನು ರೂಪಿಸಿರುವುದು ಬಹುದೊಡ್ಡ ಪರಿಕಲ್ಪನೆ ಎಂದರು.

ನಮ್ಮ ಜಿಲ್ಲೆಯಿಂದ 8 ಮಂದಿ ಉಪನ್ಯಾಸಕರು ಬೆಂಗಳೂರಿಗೆ ಹೋಗಿ ತರಬೇತಿ ಪಡೆದು ಬಂದಿದ್ದಾರೆ. ಇವರು ಜಿಲ್ಲೆಯ ಎಲ್ಲಾ ಉಪನ್ಯಾಸಕರಿಗೂ ತರಬೇತಿ ನೀಡಲಿದ್ದು, ಸರಿಯಾದ ತರಬೇತಿ ಪಡೆಯುವ ಮೂಲಕ ವಿದ್ಯಾರ್ಥಿಗಳಿಗೆ ಅರ್ಜಿ ಭರ್ತಿ ಸಮಯದಲ್ಲಿ ಆಗುವ ತಪ್ಪುಗಳನ್ನು ಸರಿಪಡಿಸುವ ಮೂಲಕ ಅವರಿಗೆ ನೆರವಾಗಬೇಕು ಎಂದು ಉಪನ್ಯಾಸಕರಿಗೆ ಕಿವಿಮಾತು ಹೇಳಿದರು.

ಆನ್‍ಲೈನ್ ಅರ್ಜಿ ಸಲ್ಲಿಸುವಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಭಯದಿಂದ ಸಾಕಷ್ಟು ತಪ್ಪುಗಳನ್ನು ಮಾಡುತ್ತಿದ್ದರು. ವಿದ್ಯಾರ್ಥಿ ಮಿತ್ರದ ಉಪಯೋಗ ಮಕ್ಕಳಿಗೆ ತಿಳಿಯಬೇಕು. ಈ ಶಿಬಿರದಲ್ಲಿ ತರಬೇತಿ ಪಡೆದ ಉಪನ್ಯಾಸಕರು, ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ ಸಮಸ್ಯೆಗಳಾಗದಂತೆ ಅರ್ಜಿ ಸಲ್ಲಿಸಲು ಮಾರ್ಗದರ್ಶನ ನೀಡಬೇಕು. ಯಶಸ್ವಿಯಾಗಿ ಅರ್ಜಿಗಳನ್ನು ಸಲ್ಲಿಸಬೇಕು ಎಂದರು.

ಪ್ರಾಂಶುಪಾಲರ ಸಂಘದ ಅಧ್ಯಕ್ಷರು ಹಾಗೂ ಕೊಳ್ಳೇಗಾಲದ ಎಂ.ಜಿ.ಎಸ್.ವಿ. ಪಿಯು ಕಾಲೇಜಿನ ಪ್ರಾಂಶುಪಾಲರಾದ ಪ್ರಮೋದ್ ಅವರು ಮಾತನಾಡಿ, ಉಪನ್ಯಾಸಕರು ಸಮಯವನ್ನು ಕಾಲೇಜಿನ ಸಮಯಕ್ಕೆ ಮಿತಿಗೊಳಿಸಬೇಡಿ, ಮಕ್ಕಳ ಪ್ರಗತಿಗಾಗಿ ಸಮಯವನ್ನು ಮೀಸಲಿಡಿ. ಮಕ್ಕಳು ಶಾಲೆಗೆ ದಾಖಲಾದ ನಂತರದಲ್ಲಿ ಅವರ ಪ್ರಗತಿಯನ್ನು ನೋಡಿ ಅವರನ್ನು ಉತ್ತೇಜಿಸುವ ಮೂಲಕ ವಿಜ್ಞಾನವನ್ನು ಓದುವಂತೆ ಹುರಿದುಂಬಿಸಬೇಕು ಎಂದರು.

ಪ್ರಾಂಶುಪಾಲರ ಸಂಘದ ಖಜಾಂಚಿ ಹಾಗೂ ಚಂದಕವಾಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸ್ವಾಮಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಉಪನ್ಯಾಸಕರು ಉತ್ತೇಜನ ನೀಡುವ ಮೂಲಕ ನಿಜವಾದ ಮಿತ್ರರಂತೆ ಕೆಲಸ ನಿರ್ವಹಿಸಬೇಕು ಎಂದರು.
ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ತುಂಬಾ ಬುದ್ದಿವಂತರಿರುತ್ತಾರೆ. ಆದರೆ ಸಿಇಟಿ ಸಂದರ್ಭದಲ್ಲಿ ಗೊಂದಲಕ್ಕೊಳಗಾಗುತ್ತಾರೆ. ಇಂತಹ ಸಮಯದಲ್ಲಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವ ಮೂಲಕ ಅವರನ್ನು ದೇಶದ ಆಸ್ತಿಯನ್ನಾಗಿ ಮಾಡಿ ಎಂದರು.

ಗಿಡಕ್ಕೆ ನೀರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ್ದೇವೆ. ಈ ಗಿಡ ಹೆಮ್ಮರವಾಗಿ ಬೆಳೆಯುವ ಹಾಗೆ ನಾವು ನೋಡಿಕೊಳ್ಳಬೇಕು. ಭಾರತದ ವಿಜ್ಞಾನ ವಿದ್ಯಾರ್ಥಿಗಳಿಗೆ ಪ್ರಪಂಚದಲ್ಲಿ ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ವಿಜ್ಞಾನಕ್ಕೆ ಸಂಬಂಧಿಸಿದಂತೆ ಹೆಚ್ಚೆಚ್ಚು ಮಾಹಿತಿ ನೀಡಿ ವಿಷಯಗಳನ್ನು ತಿಳಿಸುವ ಮೂಲಕ ಅವರ ಭವಿಷ್ಯವನ್ನು ರೂಪಿಸುವಂತಹ ಕೆಲಸವನ್ನು ಮಾಡಬೇಕು ಎಂದರು.

ಜೆಎಸ್‍ಎಸ್ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ದೇವರಾಜ ಮೂರ್ತಿ ಅವರು ಮಾತನಾಡಿ, ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳು ಆನ್‍ಲೈನ್ ಅರ್ಜಿ ಭರ್ತಿ ಮಾಡುವಾಗ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಾರೆ. ತಪ್ಪಾಗಿ ಭರ್ತಿ ಮಾಡುವುದರಿಂದ ಮುಂದಿನ ದಿನಗಳಲ್ಲಿ ಡಾಕ್ಯುಮೆಂಟ್ ವೆರಿಫಿಕೇಷನ್ ಹಾಗೂ ಇನ್ನಿತರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉಪನ್ಯಾಸಕರು ಇದಕ್ಕೆ ಅವಕಾಶ ಕೊಡದಂತೆ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಸೂಕ್ತ ಎಂದರು.

ಸಿಇಟಿ-2024 ವಿದ್ಯಾರ್ಥಿ ಮಿತ್ರ ಸಂಪನ್ಮೂಲ ಉಪನ್ಯಾಸಕರುಗಳಾದ ಮಧು.ಟಿ, ಷಡಕ್ಷರ ಸ್ವಾಮಿ, ಶ್ರೀನಾಥ್, ಅಜಯ್‍ಕುಮಾರ್, ರೇಖಾ.ಆರ್, ಜಯಶ್ರೀ ಎಸ್., ಸೌಗಂಧಿನಿ, ಸವಿತಾ, ತರಬೇತಿ ಪಡೆದಿದ್ದಾರೆ.

ಭೌತಶಾಸ್ತ್ರ ವಿಭಾಗದಿಂದ ಕೈಪಿಡಿ ಬಿಡುಗಡೆ
ಭೌತ ಶಾಸ್ತ್ರ ವಿಭಾಗದಿಂದ ಪ್ಲೇ ವಿತ್ ಫಿಜಿಕ್ಸ್ ಎಂಬ ಶೀರ್ಷಿಕೆಯಡಿ ಕೈಪಿಡಿಯೊಂದನ್ನು ಇದೇ ಸಂದರ್ಭದಲ್ಲಿ ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ಮಂಜುನಾಥ ಪ್ರಸನ್ನ ಅವರು ಬಿಡುಗಡೆ ಮಾಡಿದರು.
ಭೌತಶಾಸ್ತ್ರ ವಿಭಾಗದ ಗೌರವ ಅಧ್ಯಕ್ಷ ಸಿದ್ದಪ್ಪ, ಉಪಾಧ್ಯಕ್ಷೆ ಸೌಗಂಧಿನಿ, ಅಧ್ಯಕ್ಷ ಮಧು ಟಿ., ಕಾರ್ಯದರ್ಶಿ ಷಡಕ್ಷರಿ ಸ್ವಾಮಿ, ಖಜಾಂಚಿ ಶ್ರೀನಾಥ್ ಮತ್ತು ವಿವಿಧ ತಾಲೂಕುಗಳಿಂದ ಆಗಮಿಸಿದ್ದ ತಾಲೂಕು ಕೋಆರ್‍ಡಿನೇಟರ್ ಮತ್ತು ಉಪನ್ಯಾಸಕರ ಶ್ರಮದಿಂದ ಈ ಕೈಪಿಡಿಯನ್ನು ತಯಾರು ಮಾಡಲಾಗಿದ್ದು, ಸಿಇಟಿ, ನೀಟ್, ಬೋರ್ಡ್ ಎಕ್ಸಾಂಗಳಿಗೆ ಅನುಕೂಲವಾಗುವಂತಹ ಪ್ರಶ್ನೋತ್ತರಗಳು, ಪದಬಂದ ಹೀಗೆ ಹಲವು ವಿಷಯಗಳನ್ನು ಒಳಗೊಂಡಿದೆ. ಈ ಬಾರಿಯ ಮತ್ತೊಂದು ವಿಶೇಷತೆ ಏನೆಂದರೆ ಕ್ಯೂಆರ್ ಕೋಡ್‍ನ್ನು ಅಳವಡಿಸಲಾಗಿದ್ದು, ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ವಿಷಯಗಳನ್ನು ಓದಲು ಅನುಕೂಲವಾಗುತ್ತದೆ.

Leave a Reply

Your email address will not be published. Required fields are marked *