ಶೀಘ್ರಲಿಪಿಗಾರರ ಹುದ್ದೆಗೆ ಅರ್ಜಿ ಆಹ್ವಾನ

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ನ್ಯಾಯಾಂಗ ಘಟಕದ ಅಧೀನ ನ್ಯಾಯಾಲಯದಲ್ಲಿ ಖಾಲಿ ಇರುವ ಒಂದು ಶೀಘ್ರ ಲಿಪಿಗಾರರ ಹುದ್ದೆಗೆ ಆನ್‍ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಚಾಮರಾಜನಗರ ಜಿಲ್ಲಾ ನ್ಯಾಯಾಲಯದ ವೆಬ್ ಸೈಟ್ https://districts.ecourts.gov.in/online-recruitment-chamarajanagar ಅಥವಾ https://chamarajanagara.dcourts.gov.in/ನಲ್ಲಿ ನವೆಂಬರ್ 7 ರೊಳಗೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸಲು ನವೆಂಬರ್ 8 ಕಡೆಯ ದಿನವಾಗಿದೆ. ಅಭ್ಯರ್ಥಿಗಳು ಚಾಲ್ತಿಯಲ್ಲಿರುವ ದೂ.ಸಂ ಹಾಗೂ ಇ-ಮೇಲ್ ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೇಕು.

ಹುದ್ದೆಯನ್ನು ಗ್ರಾಮೀಣ ಪ್ರದೇಶದ ಸಾಮಾನ್ಯ ವರ್ಗಕ್ಕೆ ವರ್ಗೀಕರಣ ಮಾಡಲಾಗಿದೆ. ಅಭ್ಯರ್ಥಿಯು ದ್ವಿತೀಯ ಪಿಯುಸಿ ಅಥವಾ ಅದಕ್ಕೆ ತತ್ಸಮಾನದ ಯಾವುದೇ ಮೂರು ವರ್ಷದ ಡಿಪ್ಲೋಮೊ ಕೋರ್ಸ್ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ನಡೆಸಿರುವ ಹಿರಿಯ ದರ್ಜೆ ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ಹಾಗೂ ಶೀಘ್ರಲಿಪಿ ವಿಷಯದಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ಡಿಪ್ಲೊಮೊ ಇನ್ ಕಮರ್ಷಿಯಲ್ ಪ್ರಾಕ್ಟಿಸ್, ಸೆಕ್ರಟರಿಯಲ್ ಪ್ರಾಕ್ಟಿಸ್ ಉತ್ತೀರ್ಣರಾಗಿರಬೇಕು ಮತ್ತು ಅದರಲ್ಲಿ ಕನ್ನಡ, ಆಂಗ್ಲ ಭಾಷೆಯಲ್ಲಿ ಯಾವುದಾದರೂ ಒಂದು ಭಾಷೆಯಲ್ಲಿ ಶೀಘ್ರಲಿಪಿ ಮತ್ತು ಬೆರಳಚ್ಚು ವಿಷಯದಲ್ಲಿ ಉತ್ತೀರ್ಣರಾಗಿದ್ದರೆ ಅಂತಹ ಅಭ್ಯರ್ಥಿಗಳು ಉಳಿದ ಕನ್ನಡ, ಆಂಗ್ಲ ಭಾಷೆಯ ಶೀಘ್ರಲಿಪಿ ಮತ್ತು ಬೆರಳಚ್ಚು ಪರೀಕ್ಷೆಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ನಡೆಸುವ ಹಿರಿಯ ದರ್ಜೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಶೇಕಡವಾರು ಅಂಕಗಳು ಮತ್ತು ಒಂದು ನಿಮಿಷಕ್ಕೆ 120 ಪದಗಳ ದರದಲ್ಲಿ 5 ನಿಮಿಷಗಳ ಉಕ್ತಲೇಖನವನ್ನು ತೆಗೆದುಕೊಂಡು 45 ನಿಮಿಷಗಳಲ್ಲಿ ಕಂಪ್ಯೂಟರ್ ನಲ್ಲಿ ಅನುಲಿಪಿ ಮಾಡುವ ಸಾಮಥ್ರ್ಯ ಪರೀಕ್ಷೆಯಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ಸಂದರ್ಶನ ನಡೆಸಲಾಗುವುದು. ಸಾಮಥ್ರ್ಯ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳು 100 ಮತ್ತು ಪರೀಕ್ಷೆ ಪಾಸಾಗಲು ಶೇ. 50 ಗಳಿಸಿರಬೇಕು.

ಅರ್ಜಿ ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸು ಪೂರೈಸಿರಬೇಕು ಮತ್ತು ಗರಿಷ್ಠ ವಯಸ್ಸನ್ನು ಮೀರಿರಬಾರದು. ಸಾಮಾನ್ಯ ವರ್ಗಕ್ಕೆ 35 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ ಗೆ 38 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ1ರ ಅಭ್ಯರ್ಥಿಗಳಿಗೆ 40 ವರ್ಷ ಮೀರಿರಬಾರದು.

ರಾಜ್ಯ ಸರ್ಕಾರದಲ್ಲಿ ಅಥವಾ ಸ್ಥಳೀಯ ಪ್ರಾಧಿಕಾರದಲ್ಲಿ ಅಥವಾ ನಿಗಮದಲ್ಲಿ ಹುದ್ದೆ ಹೊಂದಿರುವವರಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು. ಅಭ್ಯರ್ಥಿಯು ಮಾಜಿ ಸೈನಿಕನಾಗಿದ್ದಲ್ಲಿ ಅವನು ಸಶಸ್ತ್ರ ದಳಗಳಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿರುವನೋ ಆ ವರ್ಷಗಳಿಗೆ 3 ವರ್ಷಗಳನ್ನು ಸೇರಿಸಿದರೆ ಎಷ್ಟು ವರ್ಷಗಳಾಗುವುದೋ ಅಷ್ಟು ವರ್ಷಗಳ ಸಡಿಲಿಕೆ ಇರುತ್ತದೆ. ಅಂಗವಿಕಲನಾಗಿದ್ದಲ್ಲಿ, ವಿಧವೆಯಾಗಿದ್ದಲ್ಲಿ ಮತ್ತು ಜೀತ ಕಾರ್ಮಿಕನಾಗಿದ್ದಲ್ಲಿ 10 ವರ್ಷಗಳು ಸಡಿಲಿಕೆ ಇರುತ್ತದೆ.

ಸಾಮಾನ್ಯ ವರ್ಗ, ಪ್ರವರ್ಗ-2ಎ, 2ಬಿ, 3ಎ, ಮತ್ತು 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 200ರೂ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ರ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ. ನಿಗದಿತ ಶುಲ್ಕವನ್ನು ನ್ಯಾಯಾಲಯದ ವೆಬ್‍ಸೈಟ್ ಲಿಂಕ್ ಆನ್‍ಲೈನ್ ಪೇಮೆಂಟ್ ತ್ರೋಥ್ ನೆಟ್-ಬ್ಯಾಂಕಿಂಗ್, ಕ್ರೆಡಿಟ್- ಕಾರ್ಡ್, ಡೆಬಿಟ್-ಕಾರ್ಡ್, ಯುಪಿಐ (online Payment through Net-Banking/Credit –card/Debit-card/UPI) ಸೌಲಭ್ಯದ ಮೂಲಕ ಮಾತ್ರ ಪಾವತಿಸಬೇಕು. ಇದನ್ನು ಹೊರತುಪಡಿಸಿ ಯಾವುದೇ ಚಲನ್, ಡಿಮ್ಯಾಂಡ್ ಡ್ರಾಪ್ಟ್, ಪೋಸ್ಟಲ್ ಆರ್ಡರ್, ಮನಿ ಆರ್ಡರ್ ಇವುಗಳನ್ನು ಸ್ವೀಕರಿಸಲಾಗುವುದಿಲ್ಲ. ಶುಲ್ಕ ಪಾವತಿಸದ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಆನ್‍ಲೈನ್ ಹೊರತುಪಡಿಸಿ, ಖುದ್ದಾಗಿ, ಅಂಚೆ ಮೂಲಕ ಅಥವಾ ಇನ್ಯಾವುದೇ ರೀತಿಯಲ್ಲಿ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *