ಚಾಮರಾಜನಗರ : ಪ್ರತಿಭೆಯನ್ನು ಗುರುತಿಸಿ ಪ್ರೊತ್ಸಾಹಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸಲು ಇಂಥ ವೇದಿಕೆಗಳು ಸಹಕಾರಿಯಾಗುತ್ತದೆ ಎಂದು ಜೆಎಸ್‍ಎಸ್ ವಿದ್ಯಾಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ. ಸ್ವಾಮಿ ತಿಳಿಸಿದರು.

ನಗರದ ಜೆಎಸ್‍ಎಸ್ ಪಬ್ಲಿಕ್ ಶಾಲೆಯಲ್ಲಿ ಮೈಸೂರಿನ ಶ್ರೀರಾಮಕೃಷ್ಣ ಶಾಲೆಯ 50ನೇ ವರ್ಷಾಚನಣೆ ಅಂಗವಾಗಿ ಶ್ರೀ ರಾಮಕೃಷ್ಣ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದಿಂದ ಜಿಲ್ಲೆಯ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಆಯೋಜನೆ ಮಾಡಿದ್ದ ಸಾಮಾನ್ಯ ಪರೀಕ್ಷೆ ಯಲ್ಲಿ ವಿಜೇತರಾದ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಆರು ಮಂದಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಅವರು ಮಾತನಾಡಿದರು.
ಬೆಳೆಯವು ಪೈರು ಮೊಳಕೆಯಲ್ಲಿ ನೋಡು ಎಂಬ ನಾಣ್ನುಡಿಯಂತೆ ಮಕ್ಕಳ ಪ್ರತಿಭೆಯನ್ನು ವಿದ್ಯಾರ್ಥಿ ದೆಸೆಯಿಂದಲೇ ಗುರುತಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಪೋಷಕರು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಇಂದು ಆಯೋಜನೆ ಮಾಡಿರುವ ಸಾಮಾನ್ಯ ಜ್ಞಾನ ಪರೀಕ್ಷೆ ಹೆಚ್ಚು ಸಹಕರಿಯಾಗಿದೆ. ಜಿಲ್ಲೆಯ ವಿವಿಧ ಶಾಲೆಗಳಿಂದ 113 ಮಕ್ಕಳು ಭಾಗವಹಿಸಿದ್ದವು. ಈ ಎಲ್ಲಾ ಮಕ್ಕಳಲ್ಲಿಯೂ ಸಹ ಪ್ರತಿಭೆ ಇದೆ. ಇದನ್ನು ತೋರ್ಪಡಿಸುವ ಮೂಲಕ ನಿಮ್ಮ ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಿ ಎಂದರು.
ಕಾರ್ಯಕ್ರಮದ ಆಯೋಜಕರು ಹಾಗೂ ಶ್ರೀ ರಾಮಕೃಷ್ಣ ಶಾಲೆ ಹಳೆಯ ವಿದ್ಯಾರ್ಥಿಯಾದ ಡಾ. ಅಭಿಷೇಕ್ ಪ್ರಸ್ತಾವಿಕವಾಗಿ ಮಾತನಾಡಿ, ಮೈಸೂರಿನಲ್ಲಿ ರುವ ಶ್ರೀ ರಾಮಕೃಷ್ಣ ಶಿಕ್ಷಣ ಸಂಸ್ಥೆಯು ಆರಂಭಗೊಂಡು 50 ವರ್ಷಗಳು ಆಗಿದ್ದು, ಇದನ್ನು ಹೆಚ್ಚಿನ ರೀತಿಯಲ್ಲಿ ಹಬ್ಬದ ಮಾದರಿಯಲ್ಲಿ ಆಚರಣೆ ಮಾಡಬೇಕೆಂಬ ಉದ್ದೇಶದಿಂದ ಹಳೇ ವಿದ್ಯಾರ್ಥಿಗಳ ಸಂಘದಿಂದ ರಾಜ್ಯ ಮಟ್ಟದ ಸಾಮಾನ್ಯ ಜ್ಞಾನ ಪರೀಕ್ಷೆಯನ್ನು ಆಯೋಜನೆ ಮಾಡಲಾಗಿದೆ. ಏಕ ಕಾಲದಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿಯು ಈ ಪರೀಕ್ಷೆಗಳನ್ನು ಹಳೇ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಆಯೋಜನೆ ಮಾಡಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಹಳೇ ವಿದ್ಯಾರ್ಥಿಗಳ ತಂಡ ಮಾಡಿದೆ. 10ನೇ ತರಗತಿ ವಿಭಾಗದಲ್ಲಿ ಮೂವರು ಹಾಗೂ 9ನೇ ತರಗರತಿ ವಿಭಾಗದಲ್ಲಿ ಮೂವರನ್ನು ಆಯ್ಕೆ ಮಾಡಿ, ರಾಜ್ಯ ಮಟ್ಟದ ಸ್ಪರ್ಧೆ ಕಳುಹಿಸಲಾಗುತ್ತದೆ ಎಂದರು.
ಜೆಎಸ್‍ಎಸ್ ಪಬ್ಲಿಕ್ ಶಾಲೆ ಐವರು ಆಯ್ಕೆ : ಸಾಮಾನ್ಯ ಪರೀಕ್ಷೆ ವಿಭಾಗದ ಪರೀಕ್ಷೆಯಲ್ಲಿ ಆರು ವಿದ್ಯಾರ್ಥಿಗಳ ಪೈಕಿ ಐದು ಮಂದಿ ಜೆಎಸ್‍ಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳೇ ಹೆಚ್ಚು ಅಂಕಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
10ನೇ ತರಗತಿ ವಿಭಾಗದಲ್ಲಿ ಜೆಎಸ್‍ಎಸ್ ಪಬ್ಲಿಕ್ ಶಾಲೆಯ ಆರ್. ಜೀವನ್ ಪ್ರಥಮ, ಬಿ. ಶಶಾಂಕ್ ದ್ವೀತಿಯ ಹಾಗೂ ಸೇವಾ ಭಾರತಿ ಪ್ರೌಢಶಾಲಯ ವಿದ್ಯಾರ್ಥಿನಿ ಎಂ.ಪಿ. ವಿದ್ಯಾಶ್ರೇಯಾ ತೃತಿಯ ಬಹುಮಾನ ಪಡೆದುಕೊಂಡಿದ್ದಾರೆ.
9ನೇ ತರಗತಿ ವಿಭಾಗದಲ್ಲಿ ಜೆಎಸ್‍ಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾದ ಎನ್. ಅಭಿಷೇಕ್ ಪ್ರಥಮ, ಹರ್ಷಿತಾ ಎನ್, ದ್ವೀತೀಯ, ತನುಶ್ರೀ ಬಸವರಾಜು ಅವರು ತೃತೀಯ ಸ್ಥಾನವನ್ನು ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಜೆಎಸ್‍ಎಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಎಚ್.ಎಂ. ಉಮೇಶ್, ವಿವಿಧ ಶಾಲೆಗಳ ಶಿಕ್ಷಕರು ಹಾಗೂ ಪೋಷಕರು ಇದ್ದರು.