- ಫಿಟ್ ಮೈಸೂರು ವಾಕಥಾನ್‌ಗೆ ಅಭೂತಪೂರ್ವ ಯಶಸ್ಸು
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಆಯೋಜಿಸಿದ್ದ “ಸಾಮೂಹಿಕ ಆರೋಗ್ಯ ಹಾಗೂ ಜಾಗೃತಿ ನಡಿಗೆ” ಫಿಟ್ ಮೈಸೂರು ವಾಕಥಾನ್ ಯಶಸ್ವಿಯಾಗಿ ನಡೆಯಿತು. 12 ಸಾವಿರಕ್ಕೂ ಹೆಚ್ಚು ಮಂದಿ ಏಕಕಾಲದಲ್ಲಿ ಹೆಜ್ಜೆ ಹಾಕುವ ಮೂಲಕ ವಾಕಥಾನ್ ಕಾರ್ಯಕ್ರಮಕ್ಕೆ ಅಭೂತಪೂರ್ವ ಯಶಸ್ಸು ತಂದುಕೊಟ್ಟರು.
ಸಾಂಸ್ಕೃತಿಕ ನಗರಿ ಮೈಸೂರನ್ನು ಫಿಟ್ ಮೈಸೂರು, ಆರೋಗ್ಯಕರ ಮೈಸೂರು, ಸ್ವಚ್ಛ ಮೈಸೂರು, ಹಸಿರು ಮೈಸೂರು, ಸುರಕ್ಷಿತ ಮೈಸೂರು ನಗರವನ್ನಾಗಿಸುವ ಧ್ಯೇಯದೊಂದಿಗೆ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಮಹಾನಗರ ಪಾಲಿಕೆ, ಮೈಸೂರು ಜಿಮ್ ಅಸೋಸಿಯೇಷನ್, ಜಿಎಸ್ಎಸ್ ಸಮೂಹ ಸಂಸ್ಥೆಗಳ ಜತೆಗೆ ಹತ್ತಾರು ಸಂಘ-ಸಂಸ್ಥೆಗಳ ನೆರವಿನಿಂದಿಗೆ ಆಯೋಜಿಸಿದ್ದ 5 ಕಿ.ಮೀ.ಗಳ ವಾಕಥಾನ್‌ಗೆ ನಿರೀಕ್ಷೆಗೂ ಮೀರಿದ ಸ್ಫಂದನೆ ವ್ಯಕ್ತವಾಯಿತು.
12 ಸಾವಿರ ಮಂದಿ ಭಾಗಿ: ಆರೋಗ್ಯವಂತ ಮೈಸೂರಿನ ನಿರ್ಮಾಣದ ಸದುದ್ದೇಶದೊಂದಿಗೆ ಆಯೋಜಿಸಿದ್ದ ಈ ವಾಕಥಾನ್‌ಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಯಿತು. ವಾಕಥಾನ್‌ನಲ್ಲಿ 10 ಸಾವಿರ ಜನರನ್ನು ಸೇರಿಸುವ ಗುರಿ ಹೊಂದಿದ್ದ ಆಯೋಜಕರು, ಕಾರ್ಯಕ್ರಮಕ್ಕೂ ಮುನ್ನವೇ 7-8 ಸಾವಿರಕ್ಕೂ ಜನರ ನೋಂದಣಿ ಮಾಡಿಸಿದ್ದರು. ಆದರೆ ಭಾನುವಾರ ಮುಂಜಾನೆ ನಡೆದ ವಾಕಥಾನ್‌ನಲ್ಲಿ ಸಾರ್ವಜನಿಕರು, ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಯೋಗಪಟುಗಳು, ಹವ್ಯಾಸಿ ಕ್ರೀಡಾಪಟುಗಳು ವಯಸ್ಸಿನ ಮಿತಿ ಇಲ್ಲದೆ 12 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ಮೂಲಕ ವಾಕಥಾನ್ ಕಾರ್ಯಕ್ರಮವನ್ನು ಅವಿಸ್ಮರಣೀಯವಾಗಿಸಿದರು.
ಉತ್ಸುಕರಾಗಿ ಹೆಜ್ಜೆ ಹಾಕಿದರು : ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಕಿಕ್ಕಿರಿದು ಜಮಾಯಿಸಿದ್ದ ಜನರು ನಿರಾಯಾಸವಾಗಿ ಹೆಜ್ಜೆಹಾಕಿ ಗಮನ ಸೆಳೆದರು. ನಸುಕಿನಲ್ಲೇ ಆರಂಭಗೊಂಡ ವಾಕಥಾನ್‌ಗೆ ಗಣ್ಯರು ಹಸಿರು ನಿಶಾನೆ ತೋರುತ್ತಿದ್ದಂತೆ ಸಾವಿರಾರು ಜನರು ಅತ್ಯಂತ ಉತ್ಸಾಹದಿಂದ ಸಾಗಿದರು. ಮೈಸೂರು ವಿಶ್ವವಿದ್ಯಾನಿಲಯದ ಬಯಲು ರಂಗ ಮಂದಿರದಿಂದ ಆರಂಭವಾದ ನಡಿಗೆ, ಬೋಗಾದಿ ರಸ್ತೆ, ಸರಸ್ವತಿಪುರಂ ಅಗ್ನಿಶಾಮಕ ಠಾಣೆ ರಸ್ತೆ, ಮಹಾರಾಜ ಕಾಲೇಜು ಮೈದಾನ ವೃತ್ತ, ಕೃಷ್ಣರಾಜ ಬುಲೇವಾರ್ಡ್ ರಸ್ತೆ, ಹುಣಸೂರು ಮುಖ್ಯರಸ್ತೆ, ಪಡುವಾರಹಳ್ಳಿ ಜಂಕ್ಷನ್ ಮಾರ್ಗವಾಗಿ ಸಂಚರಿಸಿ ಸೆನೆಟ್ ಭವನದ ಆವರಣದಲ್ಲಿ ಅಂತ್ಯಗೊಂಡಿತು.
ಉಸ್ತುವಾರಿ ಸಚಿವರ ಚಾಲನೆ : ವಾಕಥಾನ್ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಸಿರು ನಿಶಾನೆ ತೋರಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ಸುನೀಲ್ ಬೋಸ್, ಶಾಸಕರಾದ ಟಿ.ಎಸ್. ಶ್ರೀವತ್ಸ, ಸಿ.ಎನ್. ಮಂಜೇಗೌಡ, ಕೆ. ಶಿವಕುಮಾರ್, ಪ್ರಾದೇಶಿಕ ಆಯುಕ್ತ ನಿತೇಶ್ ಪಾಟಿಲ್, ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿಸಿಪಿ ಸುಂದರ್ ರಾಜ್, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಕುಲಸಚಿವೆ ಎಂ.ಕೆ. ಸವಿತಾ, ಕುಲಸಚಿವ ನಾಗರಾಜ್, ಮೈಸೂರು ವಿವಿ ಪ್ರಾಧ್ಯಪಕರಾದ ಸಪ್ನ, ಜ್ಯೋತಿ, ಶ್ರೀನಿವಾಸ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಜಿಎಸ್‌ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಶ್ರೀಹರಿ ದ್ವಾರಕನಾಥ್, ಶ್ರೀರಾಮ್, ಪ್ರತಿನಿಧಿ ದಿನಪತ್ರಿಕೆ ಪ್ರಧಾನ ಸಂಪಾದಕ ಸಿ.ಕೆ. ಮಹೇಂದ್ರ, ಕಾರ್ಯನಿರ್ವಾಹಕ ಸಂಪಾದಕ ಧರ್ಮಾಪುರ ನಾರಾಯಣ್, ಚಿರಾಗ್ ಆಡ್ಸ್‌ನ ವಿವೇಕ್, ವಿವಿಧ ಸಂಘ ಸಂಸ್ಥೆಗಳ ಶಶಿಕುಮಾರ್, ಎಂಐಟಿ ಕಾಲೇಜಿನ ಡಾ.ಮುರುಳಿ, ರೂಪಶ್ರೀ, ಸರಳ, ನಾರಾಯಣಗೌಡ, ಹರ್ಷ, ನಟರಾಜ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಉತ್ಸಾಹ ತುಂಬಿದ ಗಣ್ಯರು : ವಾಕಥಾನ್‌ನಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಸಾರ್ವಜನಿಕರೊಂದಿಗೆ ಅನೇಕ ಗಣ್ಯರು ಕೂಡ ಅತ್ಯುತ್ಸಾಹದಿಂದ ಹೆಜ್ಜೆಹಾಕಿದರು. ಆರಂಭಿಕ ಸ್ಥಳದಿಂದ ಅಂತ್ಯದವರೆಗೂ ಕೊಂಚವೂ ಉತ್ಸಾಹ ಕಳೆದುಕೊಳ್ಳದೆ ನಿರಾಯಾಸವಾಗಿ ಸಾಗುವ ಮೂಲಕ ಎಲ್ಲರ ಗಮನ ಸೆಳೆದರು.
ಅತ್ಯಂತ ಶಿಸ್ತುಬದ್ಧ ವ್ಯವಸ್ಥೆ : ನಗರದಲ್ಲಿ ನಡೆದ ಬೃಹತ್ ವಾಕಥಾನ್‌ನಲ್ಲಿ ಸಾವಿರಾರು ಜನರು ಭಾಗವಹಿಸಿದ್ದರೂ ಎಲ್ಲಿಯೂ ಯಾವುದೇ ಸಮಸ್ಯೆ, ಅಡೆತಡೆಗಳು ಆಗದಂತೆ ಯಶಸ್ವಿಯಾಗಿ ನಡೆಯಿತು. ವಾಕಥಾನ್ ಆರಂಭದಿಂದ ಅಂತ್ಯದವರೆಗೂ ಪ್ರತಿಯೊಂದು ಹಂತದಲ್ಲೂ ಅತ್ಯಂತ ಶಿಸ್ತುಬದ್ಧವಾಗಿ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಜಿಎಸ್‌ಎಸ್ ಸಮೂಹ ಸಂಸ್ಥೆಗಳ ನೇತೃತ್ವದಲ್ಲಿ ನೂರಾರು ಯುವಜನರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುವ ಮೂಲಕ ವಾಕಥಾನ್ ಯಶಸ್ಸಿಗೆ ಶ್ರಮಿಸಿದರು.
ಬೆಂಬಲ ಹಾಗೂ ಸಹಭಾಗಿತ್ವ : ವಾಕಥಾನ್‌ಗೆ ಎಂಡಿಜೆಎ, ಸಿಸ್ಪಮಮ್, ಎಂಸಿಸಿ, ಕಾವೇರಿ ಶಿಕ್ಷಣ ಸಂಸ್ಥೆ, ಎಂಐಟಿ ಕಾಲೇಜು, ಜಿಎಸ್‌ಎಸ್‌ಎಸ್ ಶಿಕ್ಷಣ ಸಂಸ್ಥೆ, ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನೊಂದಿಗೆ ಮೈಸೂರು ವಿವಿ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವ ವಿವಿಧ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ. ಇದರ ಜತೆಗೆ ಗ್ರಾವಿಟಿ ಒನ್, ಕರ್ನಾಟಕ ಬ್ಯಾಂಕ್, ನಾರಾಯಣ ಹೃದಯಾಲಯ, ಚಿರಾಗ್ ಆಡ್ಸ್, ಜಿಎಸ್‌ಎಸ್ ಮಾಧ್ಯಮ, ಡಿಆರ್‌ಎಸ್, 92.7 ಬಿಗ್ ಎಫ್‌ಎಂ, ಚಾಮುಂಡಿ ಅಭಿವೃದ್ಧಿ ಪ್ರಾಧಿಕಾರ, ಮೈಸೂರು ಅರಮನೆ ಆಡಳಿತ ಮಂಡಳಿ, ಟ್ರಿಪ್ ಡೂರ್, ರಾಯ್ ಎಸ್ಟೇಟ್ ಸಂಸ್ಥೆಗಳು ಕೈಜೋಡಿಸಿದ್ದವು.
ಸ್ವಚ್ಛತೆಯ ಸಂದೇಶ ರವಾನೆ : ಆರೋಗ್ಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ವಾಕಥಾನ್‌ನಲ್ಲಿ ಸ್ವಚ್ಛತೆ ಬಗ್ಗೆಯೂ ಅರಿವು ಮೂಡಿಸಲಾಯಿತು. ಮೈಸೂರು ಮಹಾನಗರ ಪಾಲಿಕೆಯ ಸಹಕಾರದೊಂದಿಗೆ ನಡೆದ ವಾಕಥಾನ್‌ನ ಆರಂಭದಲ್ಲಿ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಅವರು, ನೆರೆದಿದ್ದ ಜನರಿಂದ ಸ್ವಚ್ಛತೆ ಬಗ್ಗೆ ಪ್ರತಿಜ್ಞೆ ಸ್ವೀಕರಿಸಿದರೆ. ಪಾಲಿಕೆ ಹಲವು ಪೌರಕಾರ್ಮಿಕರು ವಾಕಥಾನ್ ಸಾಗಿದ ಮಾರ್ಗದುದ್ದಕ್ಕೂ ಹಾಗೂ ಉಪಹಾರ ವ್ಯವಸ್ಥೆ ಮಾಡಿದ್ದ ಸ್ಥಳದಲ್ಲಿನ ಸ್ವಚ್ಛತೆಯನ್ನು ಕಾಪಾಡುವಲ್ಲಿ ಪಾಲಿಕೆ ಪೌರಕಾರ್ಮಿಕರು ಶ್ರಮಿಸಿದರು.
ಪ್ರತಿ ಹೆಜ್ಜೆಗೂ ಸೂಕ್ತ ವ್ಯವಸ್ಥೆ : ವಾಕಥಾನ್‌ನಲ್ಲಿ ಭಾಗವಹಿಸಿದ್ದವರಿಗಾಗಿ ಸುರಕ್ಷತೆ ಜತೆಗೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. ವಾಕಥಾನ್ ಸಾಗಿದ ಮಾರ್ಗದಲ್ಲಿನ ಪ್ರತಿ 1 ಕಿ.ಮೀ.ಗೆ ಕುಡಿಯುವ ನೀರಿನ ವ್ಯವಸ್ಥೆ, ಸ್ವಯಂಸೇವಕರಿಂದ ಮಾರ್ಗದರ್ಶನ, ವೈದ್ಯಕೀಯ ಸಹಾಯ ಕೇಂದ್ರ ಹಾಗೂ ಆಂಬ್ಯುಲೆನ್ಸ್ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಜತೆಗೆ ನಾರಾಯಣ ಆಸ್ಪತ್ರೆಯ ವೈದ್ಯರ ತಂಡದೊಂದಿಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಇದರ ಜತೆಗೆ ವಾಕಥಾನ್ ಅಂತ್ಯದಲ್ಲಿ ಭಾಗವಹಿಸಿದ್ದವರಿಗೆ ಉಪಹಾರದ ವ್ಯವಸ್ಥೆಯನ್ನೂ ಸಹ ಮಾಡಲಾಗಿತ್ತು. ಉಳಿದಂತೆ ವ್ಯವಸ್ಥಿತ ಪಾರ್ಕಿಂಗ್, ಸೂಕ್ತ ಪ್ರವೇಶಾವಕಾಶ, ಸೆಲ್ಫಿ ಪಾಯಿಂಟ್ ಸಹ ನಿರ್ಮಿಸಲಾಗಿತ್ತು.
ಸ್ವಚ್ಛನಗರಿ ನಿರ್ಮಾಣದ ಗುರಿ: ಮೈಸೂರು ನಗರವನ್ನು ಆರೋಗ್ಯಕರ ನಗರವನ್ನಾಗಿಸುವ ಉದ್ದೇಶದಿಂದ ನಡೆಸಿದ ಫಿಟ್ ಮೈಸೂರು ವಾಕಥಾನ್ ಯಶಸ್ವಿಯಾಗಿದೆ. ಮುಂದೆ ಮೈಸೂರು ನಗರವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ನಡೆಸಲಿದ್ದು, ಇನ್ನು ಮುಂದೆ ರಸ್ತೆಗೆ ಕಸಹಾಕುವುದಿಲ್ಲ ಎಂಬ ಘೋಷವಾಕ್ಯವನ್ನು ಪಾಲನೆ ಮಾಡುವ ಗುರಿ ಹೊಂದಲಾಗಿದೆ ಎಂದು ಜಿಎಸ್‌ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಶ್ರೀಹರಿ ದ್ವಾರಕನಾಥ್ ಅವರು ತಿಳಿಸಿದ್ದಾರೆ.