ನಗರದಲ್ಲಿ ಗಮನಸೆಳೆದ ಬೃಹತ್ ಮ್ಯಾರಾಥಾನ್ ಓಟ – ಜಿಲ್ಲಾಧಿಕಾರಿ ಶ್ರೀರೂಪ ಚಾಲನೆ

ಚಾಮರಾಜನಗರ: ಕರ್ನಾಟಕ ಪೊಲೀಸ್ ರನ್ ಅಭಿಯಾನದಡಿ ಜನಸ್ನೇಹಿ ಪೊಲೀಸ್, ಮಾದಕ ವಸ್ತುಗಳ ಬಗ್ಗೆ ಜಾಗೃತಿ ಹಾಗೂ ಸೈಬರ್ ಅಪರಾಧಗಳ ಕುರಿತು ಅರಿವು ಮೂಡಿಸುವ ಸಂಬಂಧ ನಗರದಲ್ಲಿ ಆಯೋಜಿಸಿದ್ದ 5 ಕಿ.ಮೀ. ಬೃಹತ್ ಮ್ಯಾರಾಥಾನ್ ಓಟಕ್ಕೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಚಾಲನೆ ನೀಡಿದರು.

ಚಾಮರಾಜನಗರ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿಂದು ಬೆಳಿಗ್ಗೆಯೇ ನಮ್ಮ ಪೊಲೀಸ್-ನಮ್ಮ ಹೆಮ್ಮೆ, ಎಲ್ಲರಿಗೂ ಫಿಟ್ನೆಸ್-ಮಾದಕ ಮುಕ್ತ ಕರ್ನಾಟಕ ಘೋಷಣೆಯೊಂದಿಗೆ ಹಮ್ಮಿಕೊಳ್ಳಲಾಗಿದ್ದ ಬೃಹತ್ ಮ್ಯಾರಾಥಾನ್ ಓಟದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ವಿದ್ಯಾರ್ಥಿಗಳು, ಯುವಜನರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಾಗರಿಕರಲ್ಲಿ ಜಾಗೃತಿ ಮೂಡಿಸಿ ಗಮನ ಸೆಳೆದರು.

ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಶ್ರೀರೂಪ ಅವರು ಎಲ್ಲರಿಗೂ ಶಾರೀರಿಕ ಸುಸ್ಥಿತಿ ಅತೀ ಅಗತ್ಯವಾಗಿದೆ. ದೇಹ-ಮನಸ್ಸಿನ ಸಮತೋಲನಕ್ಕಾಗಿ ಪ್ರತಿಯೊಬ್ಬರು ಫಿಟ್ನೆಸ್ ಕಾಪಾಡಿಕೊಳ್ಳಬೇಕು. ಮಾದಕ ವಸ್ತುಗಳ ದುಷ್ಪರಿಣಾಮ, ಸೈಬರ್ ಅಪರಾಧಗಳ ಬಗ್ಗೆ ಜಾಗೃತಿಗಾಗಿ ಮ್ಯಾರಾಥಾನ್ ಆಯೋಜಿಸಲಾಗಿದೆ. ಓಟದಲ್ಲ್ಲಿ ಗ್ರಾಮೀಣ ಭಾಗದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ನಗರ ಪ್ರದೇಶದ ಮಕ್ಕಳು, ಯುವಜನರು, ಸಾರ್ವಜನಿಕರು ಭಾಗವಹಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಮಾತನಾಡಿ ಮಾದಕ ವ್ಯಸನ ಮುಕ್ತ ಕರ್ನಾಟಕಕ್ಕಾಗಿ ಹಾಗೂ ಸೈಬರ್ ಅಪರಾಧಗಳ ಅರಿವು ಎಲ್ಲರಿಗೂ ಬೇಕಾಗಿದೆ. ಸೈಬರ್ ಅಪರಾಧಗಳು ಇಂದು ಎಲ್ಲೆಡೆ ಹೆಚ್ಚಾಗುತ್ತಿದ್ದು, ಇದಕ್ಕೆ ಮುಗ್ದ ನಾಗರಿಕರು ಹೆಚ್ಚಾಗಿ ಸಿಲುಕುತ್ತಿರುವುದು ವಿಪರ್ಯಾಸವಾಗಿದೆ. ಅಂತರ್ಜಾಲ ಬಳಕೆಯಲ್ಲಿ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮತ್ತುರಾಜು ಅವರು ಮಾತನಾಡಿ ಈ ಹಿಂದೆ ಪೊಲೀಸ್ ಅಂದರೆ ಸಾರ್ವಜನಿಕರು ದೂರ ಉಳಿಯುತ್ತಿದ್ದರು. ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯಾಗಿಸುವ ಉದ್ದೇಶದಿಂದ ಪೊಲೀಸರೊಂದಿಗೆ ಸಾರ್ವಜನಿಕರ ಓಟ ಏರ್ಪಡಿಸಲಾಗಿದೆ. ಎಲ್ಲರು ಸದೃಢ ದೇಹ ಮತ್ತು ಮನಸ್ಸು ಹೊಂದಬೇಕು. ಆಗಮಾತ್ರ ಸ್ವಾಸ್ತ್ಯ ಸಮಾಜ ಕಟ್ಟಬಹುದಾಗಿದೆ. ಇತ್ತೀಚೆಗೆ ಮಾದಕ ವಸ್ತುಗಳಿಗೆ ಯುವಜನರು ಹೆಚ್ಚಾಗಿ ಆಕರ್ಷಿತರಾಗುತ್ತಿದ್ದು, ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ಸೈಬರ್ ಅಪರಾಧ ಕಡಿಮೆ ಮಾಡುವುದು ಹಾಗೂ ಮಾದಕ ವ್ಯಸನ ಮುಕ್ತ ಕರ್ನಾಟಕ ಬೃಹತ್ ಮ್ಯಾರಾಥಾನ್ ಓಟದ ಪ್ರಮುಖ ಉದ್ದೇಶವಾಗಿದೆ ಎಂದರು.

ಬಳಿಕ ಆರಂಭವಾದ ಬೃಹತ್ ಮ್ಯಾರಾಥಾನ್ ಓಟಕ್ಕೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಬಂದೂಕಿನಲ್ಲಿ ಗುಂಡು ಹಾರಿಸಿ ಹಸಿರು ನಿಶಾನೆ ತೋರಿದರು. ಜಿಲ್ಲಾ ಪೊಲೀಸ್ ಕವಾಯತು ಮೈದಾನದಿಂದ ಆರಂಭವಾದ ಮ್ಯಾರಾಥಾನ್ ಬಿ. ರಾಚಯ್ಯ ಜೋಡಿರಸ್ತೆ – ಭುವನೇಶ್ವರಿ ವೃತ್ತ – ಸಂತೇಮರಹಳ್ಳಿ ವೃತ್ತ – ಪಾಲಿಟೆಕ್ನಿಕ್ ಕಾಲೇಜು (ಯೂ ಟರ್ನ್) ನಿಂದ ಪುನಹ – ಸಂತೇಮರಹಳ್ಳಿ ವೃತ್ತ – ಭುವನೇಶ್ವರಿ ವೃತ್ತ – ಜೋಡಿರಸ್ತೆ ಮಾರ್ಗವಾಗಿ ವಾಪಸ್ಸು ಬಂದು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಮುಕ್ತಾಯಗೊಂಡಿತು. ಮ್ಯಾರಾಥಾನ್ ಓಟದಲ್ಲಿ ಸ್ವತಹ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಇತರೆ ಗಣ್ಯರು ಪಾಲ್ಗೊಂಡು ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರಲ್ಲಿ ಹುರುಪು ತುಂಬಿದರು.

ಮ್ಯಾರಾಥಾನ್ ವಿಜೇತರಿಗೆ ಪ್ರಥಮ ಬಹುಮಾನವಾಗಿ ಸೈಕಲ್, ದ್ವಿತೀಯ 5 ಸಾವಿರ ರೂ. ನಗದು ಬಹುಮಾನ, ತೃತೀಯ 3 ಸಾವಿರ ರೂ. ನಗದು ಬಹುಮಾನವನ್ನು ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ನಿಗದಿ ಮಾಡಲಾಗಿತ್ತು. ಮೊದಲು ಗುರಿ ತಲುಪಿದ 10 ಓಟಗಾರರಿಗೆ ಪದಕ, ಪ್ರಮಾಣಪತ್ರವನ್ನು ನೀಡಿ ಪ್ರೋತ್ಸಾಹಿಸಲಾಯಿತು.

ಪುರುಷರ ವಿಭಾಗದಲ್ಲಿ ಗುಂಡ್ಲುಪೇಟೆ ತಾಲೂಕಿನ ಹೊರೆಯಾಲ ಗ್ರಾಮದ ಮಣಿಕಂಠ ಅವರು 17 ನಿಮಿಷ 12 ಸೆಕೆಂಡುಗಳಲ್ಲಿ ಗುರಿ ತಲುಪಿ ಪ್ರಥಮ ಸ್ಥಾನ ಪಡೆದರು. 17 ನಿಮಿಷ 33 ಸೆಕೆಂಡುಗಳಲ್ಲಿ ಗುರಿ ತಲುಪಿದ ಭೀಮಪ್ಪ ಅವರು ದ್ವಿತೀಯ ಸ್ಥಾನ ಹಾಗೂ 18 ನಿಮಿಷ 45 ಸೆಕೆಂಡುಗಳಲ್ಲಿ ಗುರಿ ತಲುಪಿದ ವೆಂಕಟಯ್ಯನ ಛತ್ರದ ಯೋಗೇಶ್ ತೃತೀಯ ಸ್ತಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಕೊಳ್ಳೇಗಾಲ ತಾಲೂಕಿನ ತೆಳ್ಳನೂರಿನ ಡಿ.ಆರ್. ಪ್ರೀತಿ, ದ್ವಿತೀಯ ಸ್ಥಾನಿ ನದಿಯಾ ಹಾಗೂ ಚಂದ್ರಮ್ಮ ಅವರು ತೃತೀಯ ಸ್ಥಾನ ಪಡೆದರು. ಮೊದಲು ಗುರಿ ತಲುಪಿದ 10 ಮಂದಿ ಮಹಿಳಾ ವಿಜೇತರಲ್ಲಿ ಒಂದೇ ಶಾಲೆಯ 8 ಮಂದಿ ವಿದ್ಯಾರ್ಥಿನಿಯರು ಮ್ಯಾರಾಥಾನ್‍ನ ವಿಶೇಷವಾಗಿತ್ತು.

ಹೆಚ್ಚುವರಿ ಜಿಲ್ಲಾ ಅಧೀಕ್ಷಕರಾದ ಎಂ.ಎನ್. ಶಶಿಧರ್, ಡಿವೈಎಸ್‍ಪಿ ಸ್ನೇಹರಾಜ್, ಜಿಲ್ಲಾ ಮೀಸಲು ಪೊಲೀಸ್ ವಿಭಾಗದ ಡಿವೈಎಸ್‍ಪಿ ಸೋಮಣ್ಣ, ಪಡೆಯ ಚಾಮೂಲ್ ವ್ಯವಸ್ಥಾಪಕ ನಿರ್ದೇಶಕರಾದ ರಾಜ್‍ಕುಮಾರ್, ಬ್ಯಾಂಕ್ ಆಫ್ ಬರೋಡಾದ ಶ್ರೀಧರ್, ಇತರರು ಕಾರ್ಯಕ್ರಮದಲ್ಲಿ ಇದ್ದರು.

Leave a Reply

Your email address will not be published. Required fields are marked *