ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರ ವಿಶೇಷ ಕಾಳಜಿಯಿಂದ ವಿಶೇಷಚೇತನರೊಬ್ಬರಿಗೆ ಟ್ರೈಸಿಕಲ್ ಸೌಲಭ್ಯ

ಚಾಮರಾಜನಗರ: ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ವಿಶೇಷ ಕಾಳಜಿ ವಹಿಸಿ ಜಿಲ್ಲೆಯ ವಿಶೇಷಚೇತನರೊಬ್ಬರಿಗೆ ಅತೀ ಅವಶ್ಯವಾಗಿದ್ದ ಟ್ರೈಸಿಕಲ್ (ತ್ರಿಚಕ್ರ ಬೈಸಿಕಲ್) ಅನ್ನು ಇಂದು ನಗರದ ಜಿಲ್ಲಾಡಳಿತ ಭವನದ ಪ್ರವೇಶದ್ವಾರದಲ್ಲಿ ವಿತರಿಸಿದರು.

   ಚಾಮರಾಜನಗರ ತಾಲೂಕಿನ ಕೆಂಪನಪುರ ಗ್ರಾಮದಲ್ಲಿ ಹುಟ್ಟಿನಿಂದಲೇ ಪೋಲಿಯೋ ಪೀಡಿತರಾಗಿ ಬಲಗಾಲು ಸ್ವಾಧೀನ ಕಳೆದುಕೊಂಡು ಸಣ್ಣ ಅಂಗಡಿ ವ್ಯಾಪಾರ ನಡೆಸುತ್ತಿದ್ದ ಮುದ್ದಮಲ್ಲಪ್ಪ ಎಂಬುವವರು ಇತ್ತೀಚೆಗೆ ಆಕಸ್ಮಿಕವಾಗಿ ಬಿದ್ದು ಕಾಲಿಗೆ ತೀವ್ರ ಪೆಟ್ಟಾಗಿತ್ತು. ಮುಂದಿನ ಜೀವನ ನಿರ್ವಹಣೆಗೆ ದಿಕ್ಕು ತೋಚದಂತಾಗಿ ಕುಟುಂಬ ಸಂಕಷ್ಟದಲ್ಲಿತ್ತು.  

  ಸರ್ಕಾರಿ ಅಂಗವಿಕಲರ ಕಲ್ಯಾಣ ಇಲಾಖೆಯ ಗುರುತಿನ ಚೀಟಿ ಹೊಂದಿದ್ದ ಮುದ್ದಮಲಪ್ಪ ಅವರು ವಿಶೇಷಚೇತನರಿಗೆ ನೀಡುವ ಮೂರು ಚಕ್ರಗಳುಳ್ಳ ಸ್ಕೂಟಿ ನೀಡುವಂತೆ ಇಲಾಖೆಗೆ ಮನವಿ ಸಲ್ಲಿಸಿದ್ದರು. ಬಲಗಾಲು ಸ್ವಾಧೀನವಿಲ್ಲದ್ದರಿಂದ ಕನಿಷ್ಠ ತ್ರಿಚಕ್ರ ಬೈಸಿಕಲ್ ಸೌಲಭ್ಯ ವಿತರಿಸುವಂತೆ ಕೋರಿದ್ದರು. ಈ ವಿಷಯವನ್ನು ಅಧಿಕಾರಿಗಳು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರ ಗಮನಕ್ಕೆ ತಂದಿದ್ದರು. 

  ವಿಷಯ ತಿಳಿದ ಕೂಡಲೇ ಸ್ಪಂದಿಸಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ವಿಶೇಷ ಕಾಳಜಿ ವಹಿಸಿ ಮೈಸೂರಿನ ಸಾಯಿ ಫೌಂಡೇಷನ್ ಚಾರಿಟಬಲ್ ಟ್ರಸ್ಟ್ ನೆರವಿನೊಂದಿಗೆ 18,500 ರೂ. ವೆಚ್ಚದ ಟ್ರೈಸಿಕಲ್ (ತ್ರಿಚಕ್ರ ಬೈಸಿಕಲ್) ಅನ್ನು ವಿತರಿಸಿದ್ದಾರೆ. ವಿಶೇಷಚೇತನರಾದ ಮುದ್ದಮಲ್ಲಪ್ಪ ಅವರ ಮುಂದಿನ ಜೀವನ ನೆಮ್ಮದಿಯಿಂದ ಕೂಡಿರಲೆಂದು ಹಾರೈಸಿದರು.         

  ಇದೇ ವೇಳೆ ಮೈಸೂರಿನ ಸಾಯಿ ಫೌಂಡೇಷನ್ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಕಿರಣ್ ರಾಬರ್ಟ್ ಅವರು ಮಾತನಾಡಿ ಜಿಲ್ಲೆಯ ವಿಶೇಷಚೇತನರಿಗೆ ನೆರವಾಗುವ ಬಗ್ಗೆ ಜಿಲ್ಲಾಡಳಿತದ ಮನವಿ ಮೇರೆಗೆ ಇಂದು ಟ್ರಸ್ಟ್ ವತಿಯಿಂದ ಟ್ರೈಸಿಕಲ್ (ತ್ರಿಚಕ್ರ ಬೈಸಿಕಲ್) ಕೊಡುಗೆ ನೀಡಲಾಗಿದೆ. ಟ್ರಸ್ಟ್‍ನಿಂದ ಶಿಕ್ಷಣ, ಆರೋಗ್ಯ, ಆಹಾರ ಸೇರಿದಂತೆ ಇತರೆ ನೆರವು ನೀಡಲಾಗುತ್ತಿದೆ ಎಂದರು. 

  ಜವಾಬ್ದಾರಿಯುತ ನಾಗರಿಕರಾದ ನಾವೆಲ್ಲರೂ ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಬಡವರಿಗೆ, ವಿಶೇಷಚೇತನರಿಗೆ ನಿರ್ಗತಿಕರಿಗೆ ಸಹಾಯಹಸ್ತ ಚಾಚಬೇಕಾಗಿದೆ. ಈ ನಿಟ್ಟಿನಲ್ಲಿ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ ಎಂದು ಕಿರಣ್ ರಾಬರ್ಟ್ ಅವರು ಹೇಳಿದರು. 

  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಕೆಂಪನಪುರ ಗ್ರಾಮ ಪಂಚಾಯಿತಿ ಸದಸ್ಯರಾದ ಮಹದೇವಸ್ವಾಮಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮೀನಾಕ್ಷಿ, ಮೈಸೂರಿನ ಸಾಯಿ ಫೌಂಡೇಷನ್ ಚಾರಿಟಬಲ್ ಟ್ರಸ್ಟ್ ವ್ಯವಸ್ಥಾಪಕರಾದ ರಾಜಾರಾಮ್, ಟ್ರಸ್ಟಿ ಡಾ. ಅನಿಲ್, ರೋಟರಿ ಜಿಲ್ಲಾ ಗೌರ್ನರ್ ಪಿ.ಕೆ. ರಾಮಕೃಷ್ಣ, ಪದ್ಮಜ, ಚಾಮರಾಜನಗರ ತಾಲೂಕಿನ ವಿವಿದೋದ್ದೇಶ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ (ಎಂ.ಆರ್.ಡಬ್ಲೂ) ರಾಜೇಶ್, ಇತರರು ಇದೇ ವೇಳೆ ಇದ್ದರು.

Leave a Reply

Your email address will not be published. Required fields are marked *