ಹಾಪ್‍ಕಾಮ್ಸ್‍ಗೆ ಮಾರುಕಟ್ಟೆಯನ್ನು ವಿಸ್ತರಣೆ ಮಾಡಲು ಕ್ರಮ : ಕೆ.ಆರ್. ಲೋಕೇಶ್

ಹಾಪ್‍ಕಾಮ್ಸ್ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ
ಚಾಮರಾಜನಗರ: ಜಿಲ್ಲಾ ಕೇಂದ್ರ ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿ ತಾಜಾ ತರಕಾರಿ ಹಾಗೂ ಹಣ್ಣು ಮಾರಾಟ ಮಾಡಲು ಮಳಿಗೆಗಳನ್ನು ಆರಂಭಿಸಿ, ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸಲು ಹಾಪ್‍ಕಾಮ್ಸ್‍ಗೆ ಮಾರುಕಟ್ಟೆಯನ್ನು ಅಭಿವೃದ್ದಿ ಪಡಿಸಿ ಕ್ರಮ ವಹಿಸಲಾಗುತ್ತದೆ ಎಂದು ಜಿಲ್ಲಾ ತೋಟದ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘದ ಅಧ್ಯಕ್ಷ ಕೆ.ಆರ್. ಲೋಕೇಶ್ ತಿಳಿಸಿದರು.

ನಗರದ ಹಳೇ ರೇಷ್ಮೆಗೂಡು ಮಾರುಕಟ್ಟೆ ಕಟ್ಟಡದಲ್ಲಿರುವ ಹಾಪ್‍ಕಾಮ್ಸ್ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ತೋಟದ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘದ ವಾರ್ಷಿಕ ಮಹಾಸಭೆಂiಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಸತಿ ನಿಲಯಗಳು, ಪಂಚಾಯಿತಿಗಳಿಂದ ಹಾಪ್‍ಕಾಮ್ಸ್‍ಗೆ ಬಾಕಿ ಹಣ ಇದ್ದು, ಇದನ್ನು ವಸೂಲಿ ಮಾಡುವ ಜೊತೆಗೆ ಸಂಘವನ್ನು ಲಾಭದತ್ತ ಕೊಂಡೊಯ್ಯಲು ಎಲ್ಲರು ಸಹಕಾರ ನೀಡಬೇಕು. ಈಗಾಗಲೇ ಸಹಕಾರಿ ಕಾಯ್ದೆಯಡಿಯಲ್ಲಿ ನೋಟಿಸ್ ನೀಡಲಾಗಿದೆ. ವಸೂಲಾತಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.


ಈಗಾಗಲೇ ಎಲ್ಲಾ ನಿರ್ದೇಶಕರು ಚರ್ಚೆ ಮಾಡಿ, ಜಿಲ್ಲಾ ಕೇಂದ್ರದಲ್ಲಿರುವ ಹಾಪ್‍ಕಾಮ್ಸ್ ಮಳಿಗೆಯನ್ನು ಪುನಚ್ಚೇತನ ಗೊಳಿಸುವುದು, ಹಾಗೂ ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಮಳಿಗೆಯನ್ನು ಆರಂಭಿಸಲಾಗುತ್ತದೆ. ಪ್ರಮುಖವಾಗಿ ಯಡಪುರದ ಬಳಿರುವ ವೈದ್ಯಕೀಯ ಕಾಲೇಜು ಅವರಣದಲ್ಲಿ ಮಳಿಗೆ ನಿರ್ಮಾಣ, ಇತರೇ ತಾಲೂಕು ಕೇಂದ್ರಗಳಲ್ಲಿ ಮಳಿಗೆಯನ್ನು ಆರಂಭಿಸುವ ಬ ಗ್ಗೆ ನಿರ್ಣಯ ಮಾಡಲಾಗಿದೆ ಎಂದರು.

ಹಾಪ್‍ಕಾಮ್ಸ್‍ಗೆ ಸ್ವಂತ ಕಟ್ಟಡ ನಿರ್ಮಾಣ ಹಾಗು ಜಿಲ್ಲೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಹಾಸ್ಟೆಲ್‍ಗಳಿಗೆ ತರಕಾರಿ ಹಾಗೂ ಹಣ್ಣುಗಳನ್ನು ಸರಬರಾಜು ಮಾಡುವುದು. ವಿದ್ಯಾರ್ಥಿಗಳಿಗೆ ತಾಜಾ ಹಣ್ಣು ಹಾಗೂ ತರಕಾರಿಯನ್ನು ಪೊರೈಕೆ ಮಾಡಲು ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತದೆ ಎಂದು ಸಭೆಗೆ ತಿಳಿಸಿದರು. ಸಂಘದ ಸದಸ್ಯರು ಹಾಪ್‍ಕಾಮ್ಸ್ ನಷ್ಟದಲ್ಲಿದ್ದು, ಮುಂದಿನ ವರ್ಷ ಲಾಭ ಗಳಿಸುವ ನಿಟ್ಟಿನಲ್ಲಿ ಅಧ್ಯಕ್ಷರು ಹಾಗೂ ನಿರ್ದೇಶಕರು ಶ್ರಮಿಸಬೇಕು. ಬಾಕಿಯನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು. ಹಾಪ್‍ಕಾಮ್ಸ್ ಮಳಿಗೆಗಳನ್ನು ಹೆಚ್ಚಳ ಮಾಡಿ, ತಾಜಾ ತರಕಾರಿ ಹಾಗು ಹಣ್ಣುಗಳನ್ನು ಪೊರೈಕೆ ಮಾಡಲು ಇಲಾಖೆಯ ನೀಡಿರುವ ವಾಹನವನ್ನು ಬಳಸಿಕೊಳ್ಳಬೇಕು ಎಂಬ ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಬಿ. ಶೃತಿ ಕುಮಾರಸ್ವಾಮಿ, ನಿರ್ದೇಶಕರಾದ ವೈ.ಪಿ.ರಾಜೇಂದ್ರಪ್ರಸಾದ್, ಆರ್. ಪುರುಷೋತ್ತಮ್, ಎಂ.ಪಿ. ನಿರಂಜನ್‍ಮೂರ್ತಿ, ಪುಟ್ಟರಸು, ಪುಟ್ಟುಸುಬ್ಬಪ್ಪ, ಎಸ್. ಬಸವಶೆಟ್ಟಿ, ಜಿ. ಲೋಕೇಶ್, ರಾಜಮ್ಮ, ಕೆಎಚ್‍ಎಫ್ ಪ್ರತಿನಿಧಿ ಸೂರ್ಯಕುಮಾರ್, ಸಂಘದ ವ್ಯವಸ್ಥಾಪಕ ಜಿ.ಎಸ್. ರಾಜು, ಎಪಿಎಂಸಿ ಅಧ್ಯಕ್ಷ ಸೋಮೇಶ್, ಸಿಇಓ ನವೀನ್, ಕಾರ್ಯದರ್ಶಿ ಯತಿರಾಜ್, ಮಳಿಗೆ ನೌಕರರಾದ ಮಧು, ಬಸವರಾಜು, ಹಾಗೂ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *