ಶ್ರೀ ಯೋಗಿನಾರೇಯಣ ಯತೀಂದ್ರ ಅವರ ಆದರ್ಶ ತತ್ವಸಿದ್ದಾಂತಗಳನ್ನು ಅಳವಡಿಸಿಕೊಳ್ಳಿ : ಮಹಮದ್ ಅಸ್ಗರ್ ಮುನ್ನಾ

ಚಾಮರಾಜನಗರ: ಆಧ್ಯಾತ್ಮಿಕತೆಯ ಮೂಲಕ ಜನರಿಗೆ ಮುಕ್ತಿಮಾರ್ಗ ತೋರಿದ ಶ್ರೀ ಯೋಗಿನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಅವರ ಆದರ್ಶ ತತ್ವಸಿದ್ದಾಂತಗಳನ್ನು ಅಳವಡಿಸಿಕೊಳ್ಳುವಂತೆ ಚಾಮರಾಜನಗರ ಮತ್ತು ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ (ಮುನ್ನ) ಅವರು ತಿಳಿಸಿದರು.

  ನಗರದ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶ್ರೀ ಯೋಗಿನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಅವರ 300ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

   ಕೋಲಾರ ಜಿಲ್ಲೆಯ ಕೈವಾರ ಗ್ರಾಮದ ಸಾಮಾನ್ಯ ಬಡಕುಟುಂಬದಲ್ಲಿ ಜನಿಸಿದ ಶ್ರೀ ಯೋಗಿನಾರೇಯಣ ಯತೀಂದ್ರ ಅವರು ಕೈವಾರ ತಾತಯ್ಯನಾಗಿ ಬೆಳೆದ ಹಾದಿ ಬಹಳ ಸಂಕಷ್ಟದಿಂದ ಕೂಡಿತ್ತು. ವೃತ್ತಿಯಲ್ಲಿ ಬಳೆ ವ್ಯಾಪಾರ ಮಾಡುತ್ತಿದ್ದ ಕೈವಾರ ತಾತಯ್ಯ ಮಹಿಳೆಯರಿಗೆ ಬಳೆ ತೊಡಿಸಿ ಅವರಲ್ಲಿಯೇ ದೇವರನ್ನು ಕಾಣುತ್ತಿದ್ದರು. ಹಣ ನೀಡಿದರೆ ಪಡೆಯುತ್ತಿದ್ದರು, ಇಲ್ಲದಿದ್ದರೇ ಹಣ ಕೇಳದ ನಿಸ್ವಾರ್ಥ ವ್ಯಕ್ತಿತ್ವ ಅವರದಾಗಿತ್ತು. ಇಂದು ತೀವ್ರ ವ್ಯಾಪಾರೀಕರಣದಲ್ಲಿ ಮುಳುಗಿರುವ ಜನತೆ ಕೈವಾರ ತಾತಯ್ಯ ಅವರ ಆದರ್ಶ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ (ಮುನ್ನ) ಅವರು ತಿಳಿಸಿದರು.

  ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಮಾತನಾಡಿ 17-18ನೇ ಶತಮಾನದಲ್ಲಿ ಜೀವಿಸಿದ್ದ ಕೈವಾರ ತಾತಯ್ಯ ಅವರು ಕಾಲಜ್ಞಾನಿಯೂ, ಪವಾಡಪುರುಷರು ಆಗಿದ್ದರು. ಮೂಢನಂಬಿಕೆಗಳ ವಿರುದ್ಧ ಹೋರಾಡಿ ಜನಜಾಗೃತಿ ಮೂಡಿಸಿದರು. ಅಂಧಕಾರದಲ್ಲಿ ಮುಳಗಿದ್ದ ಅಂದಿನ ಜನರನ್ನು ಆಧ್ಯಾತ್ಮಿಕವಾಗಿ ಮುನ್ನೆಡೆಸಿ ಸಮಾಜ ಸುಧಾರಣೆಗೆ ನಾಂದಿ ಹಾಡಿದ್ದಾರೆ. ಅವರ ವ್ಯಕ್ತಿತ್ವ, ಜೀವನ ಸಾಧನೆ ನಮಗೆ ದಾರಿದೀಪವಾಗಿದೆ. ಕೈವಾರ ತಾತಯ್ಯ ಅವರ ವಿಚಾರಧಾರೆಗಳು, ಕಾಲಜ್ಞಾನದ ಮಹತ್ವ ಇಂದಿಗೂ ಪ್ರಸ್ತುತವಾಗಿದೆ ಎಂದರು.

  ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ದಾಸಬಣಜಿಗಶೆಟ್ಟರ ಸಂಘದ ಗೌರವಾಧ್ಯಕ್ಷರಾದ ಸಿ.ವಿ. ಶ್ರೀನಿವಾಸಶೆಟ್ಟಿ ಅವರು ಶ್ರೀ ಯೋಗಿನಾರೇಯಣ ಯತೀಂದ್ರ ಜಯಂತಿಯನ್ನು ಪ್ರತಿವರ್ಷ ಸರ್ಕಾರದ ವತಿಯಿಂದ ಆಚರಿಸಿ ಕೈವಾರ ತಾತಯ್ಯ ಅವರ ಕಾಲಜ್ಞಾನದ ಸಂದೇಶವನ್ನು ಇಡೀ ವಿಶ್ವಕ್ಕೆ ಪರಿಚಯಿಸಲಾಗುತ್ತಿದೆ. ತಾತಯ್ಯ ಅವರ ಯೋಗಶಕ್ತಿ ಧ್ಯಾನಶಕ್ತಿ ಅಪರಿಮಿತವಾಗಿದೆ. ತಾತಯ್ಯ ಅವರ ತತ್ವಸಿದ್ದಾಂತಗಳನ್ನು ಜಗತ್ತು ಪರಿಪೂರ್ಣವಾಗಿ ಅರ್ಥೈಸಿಕೊಂಡಿದ್ದರೆ ಇಂದು ವಿವಿಧ ದೇಶಗಳ ನಡುವೆ ಯುದ್ಧಗಳು ಉದ್ಭವಿಸುತ್ತಿರಲಿಲ್ಲ ಎಂದರು. 

  ಜನಸಾಮಾನ್ಯರಲ್ಲಿ ಜ್ಞಾನಸುಧೆಯನ್ನು ಪಸರಿಸಿದ ಕೈವಾರ ತಾತಯ್ಯ ಅವರು ಕನ್ನಡ ಮತ್ತು ತೆಲುಗಿನಲ್ಲಿ ರಚಿಸಿದ ಹಲವು ಕೀರ್ತನೆಗಳನ್ನು ತಾಳೆಗರಿಗಳ ಮೂಲಕ ರಕ್ಷಿಸಿಡಲಾಗಿದೆ. ತಾತಯ್ಯ ಅವರನ್ನು ಚಿರಸ್ಮರಣೀಯವಾಗಿಸುವ ಉದ್ದೇಶದಿಂದ ಕೈವಾರದಲ್ಲಿ ಅವರ ಪ್ರತಿಮೆ, ಗ್ರಂಥಾಲಯ ಹಾಗೂ ದಾಸೋಹ ಭವನಗಳನ್ನು ಬೆಂಗಳೂರಿನ ಎಂ.ಎಸ್. ರಾಮಯ್ಯ ಅವರ ಸಂಸ್ಥೆ ವತಿಯಿಂದ ಅಭಿವೃದ್ಧಿಪಡಿಸಲಾಗಿದೆ ಎಂದು ಶ್ರೀನಿವಾಸಶೆಟ್ಟಿ ಅವರು ತಿಳಿಸಿದರು.

  ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ರಾಜು, ಮುಖಂಡರಾದ ಚಂದ್ರಶೇಖರ್, ಪದ್ಮಾ ಪುರುಷೋತ್ತಮ್, ರಂಗರಾಮು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಮುಂಭಾಗದಿಂದ ಜಿಲ್ಲಾಡಳಿತ ಭವನದವರೆಗೆ ಶ್ರೀ ಯೋಗಿನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.

Leave a Reply

Your email address will not be published. Required fields are marked *