ಅಂಬೇಡ್ಕರ್ ದೇಶ ಸರ್ವರಿಗೂ ಸಮಾನತೆ ನೀಡಿದರು : ಎಸ್ಪಿ ಡಾ.ಬಿ.ಟಿ.ಕವಿತಾ ಚಾಮರಾಜನಗರ: ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ 69 ನೇ ಪರಿನಿಬ್ಬಾಣ ದಿನಾಚರಣೆ ಅಂಗವಾಗಿ ಭಾರತೀಯ ವಿದ್ಯಾರ್ಥಿ ಸಂಘದ ವತಿಯಿಂದ ನಗರದಲ್ಲಿ ಮೊಂಬತ್ತಿ ಮೆರವಣಿಗೆ ನಡೆಯಿತು. ನಗರದ ಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ಅಂಬೇಡ್ಕರ್ ರವರ ಪ್ರತಿಮೆಗೆ ಪುಷ್ಷಾರ್ಚನೆ ಮಾಡುವ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಚಾಲನೆ ನೀಡಿದರು. ಅಲ್ಲಿಂದ ಹೊರಟ ಮೆರವಣಿಗೆ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಬಳಿ ತೆರಳಿ ಸಾಮೂಹಿಕ ಬುದ್ದವಂದನೆ ಸಲ್ಲಿಸಿ ಮುಕ್ತಾಯಗೊಂಡಿತು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮೆರವಣಿಗೆ ಗೆ ಚಾಲನೆ ನೀಡಿ ಮಾತನಾಡಿ,ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದ ಸರ್ವರಿಗೂ ಸಮಾನತೆ ಹಕ್ಕು, ಕರ್ತವ್ಯಗಳನ್ನು ಸಂವಿಧಾನದಲ್ಲಿ ಕಲ್ಪಿಸಿಕೊಟ್ಟಿದ್ದಾರೆ. ಅವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾ ಸಂಯೋಜಕ ಪರ್ವತ್ ರಾಜ್ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣದ ದಿನದಂದು ನಾವು ಅವರ ಆದರ್ಶಗಳನ್ನು ಪಾಲಿಸುವುದು ಅವರಿಗೆ ನೀಡುವ ಬಹು ಮುಖ್ಯ ಗೌರವವಾಗಿದೆ ಎಂದರು. ವಿದ್ಯಾರ್ಥಿಗಳು ಸರ್ಕಾರಿ ವಲಯದಲ್ಲಿ ಉನ್ನತ ಹುದ್ದೆಗಳು, ಖಾಸಗಿ ವಲಯ ಉದ್ಯೋಗ, ಸ್ವಯಂ ಉದ್ಯೋಗ ಸ್ಥಾಪಿಸಲು ಮುಂದಾಗಬೇಕು ಎಂದರು. ಮೆರವಣಿಗೆಯಲ್ಲಿ ಮುಖಂಡರಾದ ಸಿ.ಎಂ.ಕೃಷ್ಣಮೂರ್ತಿ, ನಮ್ಮನೆ ಪ್ರಶಾಂತ, ವಕೀಲರಾದ ಮಹೇಂದ್ರ, ಬುದ್ದಮಹೇಶ್ , ಕಾವ್ಯ, ನೇತ್ರಾ, ಸುಮಾ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.