ಅಂಬಿಗರ ಚೌಡಯ್ಯ ಅವರು ಶ್ರೇಷ್ಠ ವಚನಕಾರರು : ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ

ಚಾಮರಾಜನಗರ: ಅನುಭವ ಮಂಟಪದಲ್ಲಿ ಆಧ್ಯಾತ್ಮಿಕ ಚಿಂತನೆಗಳ ಮೂಲಕ ಗಮನ ಸೆಳೆದಿದ್ದ ಶ್ರೇಷ್ಠ ವಚನಕಾರರಲ್ಲಿ ಅಂಬಿಗರ ಚೌಡಯ್ಯ ಅವರು ಪ್ರಮುಖರಾಗಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ತಿಳಿಸಿದರು.

  ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ತತ್ವಜ್ಞಾನಿ, ಶಿವಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.

  ಭಾರತೀಯ ಇತಿಹಾಸದಲ್ಲಿ 12ನೇ ಶತಮಾನ ಪರಿವರ್ತನೆಯ ಹಾಗೂ ಹೊಸ ಹೊಸ ಆಲೋಚನೆಯ ಕಾಲಘಟ್ಟವಾಗಿದೆ. ಬಸವಣ್ಣನವರು ಅನುಭವ ಮಂಟಪದಲ್ಲಿ ಎಲ್ಲಾ ವರ್ಗಗಳ ಜನರನ್ನು ಒಟ್ಟುಗೂಡಿಸಿ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದರು. ಅನುಭವ ಮಂಟಪದ ಶಿವಶರಣರು ಅಂದಿನ ಕಾಲದಲ್ಲಿ ಮೂಢನಂಬಿಕೆ, ಅಜ್ಞಾನ, ಕಂದಾಚಾರಗಳಲ್ಲಿ ಮುಳುಗಿದ್ದ ಜನರಿಗೆ ಸರಳವಾಗಿ ಅರ್ಥವಾಗುವ ಭಾಷೆಯಲ್ಲಿ ವಚನಗಳನ್ನು ರಚಿಸಿ ಸಮಾಜವನ್ನು ಎಚ್ಚರಿಸಿದರು. ಅಂತಹ ಶಿವಶರಣರಲ್ಲಿ ಅಂಬಿಗರ ಚೌಡಯ್ಯನವರು ಒಬ್ಬರಾಗಿದ್ದಾರೆ ಎಂದರು. 

  ಅಂಬಿಗರ ಚೌಡಯ್ಯ ಅವರು ದೋಣಿ ನಡೆಸುವ ಕಾಯಕ ಮಾಡುತ್ತಿದ್ದು, ಬಸವಣ್ಣನವರು ಪ್ರತಿಪಾದಿಸಿದ ಕಾಯಕವೇ ಕೈಲಾಸ ತತ್ವವನ್ನು ಕಾಯಾ, ವಾಚಾ, ಮನಸ ಅನುಸರಿಸುತ್ತಿದ್ದರು. ಅನುಭವ ಮಂಟಪದಲ್ಲಿ ಇದನ್ನು ಮನಗಂಡಿದ್ದ ಬಸವಣ್ಣನವರು ಅಂಬಿಗರ ಚೌಡಯ್ಯ ಅವರನ್ನು ಭವಸಾಗರದ ಹುಟ್ಟನ್ನು ದಾಟಿದವರು ಎಂದು ಸ್ಮರಿಸಿಕೊಳ್ಳುತ್ತಿದ್ದರು. ಅಂಬಿಗರ ಚೌಡಯ್ಯ ಅವರ ಮೌಲ್ಯಯುತ ವಚನಗಳ ಚಿಂತನೆಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಹೇಳಿದರು.

  ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ. ಜಯಣ್ಣ ಅವರು ಮಾತನಾಡಿ 12 ಶತಮಾನದ ಶ್ರೇಷ್ಠ ವಚನಕಾರ ಅಂಬಿಗರ ಚೌಡಯ್ಯ ಎಂದರೆ ತಪ್ಪಾಗಲಾರದು. ಅಂಬಿಗರ ಚೌಡಯ್ಯ ಅವರ ಎಲ್ಲಾ ವಚನಗಳಲ್ಲಿ ವೈಚಾರಿಕ ಚಿಂತನೆ, ನೈತಿಕ ಮೌಲ್ಯಗಳಿವೆ. ವಚನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದ ಅಂಬಿಗರ ಚೌಡಯ್ಯ ಅವರು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಜನಜಾಗೃತಿ ಮೂಡಿಸಿದರು. ಜನರನ್ನು ಉತ್ತಮ ಚಿಂತನೆಗಳೆಡೆಗೆ ಕೊಂಡೊಯ್ದರು ಎಂದು ತಿಳಿಸಿದರು.

  ಅನುಭವ ಮಂಟಪದಲ್ಲಿ ಪುರುಷರು, ಮಹಿಳೆಯರು ಎಲ್ಲರೂ ಸರ್ವಸಮಾನರಾಗಿದ್ದರು. ಸ್ತ್ರೀ ಸಬಲೀಕರಣ ಬಸವಣ್ಣನವರ ಕಾಲದಲ್ಲೇ ಆರಂಭವಾಗಿತ್ತು. ಮೂಢನಂಬಿಕೆ, ಪ್ರಾಣಿಬಲಿ, ಯಜ್ಞಯಾಗಾದಿಗಳಲ್ಲಿ ಮುಳುಗಿದ್ದ ಅಂದಿನ ಜನರಿಗೆ ಅನುಭವ ಮಂಟಪದ ಶಿವಶರಣರು 800 ವರ್ಷಗಳ ಹಿಂದೆಯೇ ತಮ್ಮ ಶ್ರೇಷ್ಠ ಚಿಂತನೆಗಳ ಮೂಲಕ ದೇವರ ಅಸ್ತಿತ್ವದ ಹೊಸ ಕಲ್ಪನೆ ನೀಡಿದ್ದರು ಎಂದರು.

  ಅಂಬಿಗರ ಚೌಡಯ್ಯ ಅವರು ರಚಿಸಿದ ವಚನಗಳು ಜನರಿಗೆ ದಾರಿದೀಪವಾಗಿವೆ. ಅಜ್ಞಾನ, ಅಂಧಕಾರದಿಂದ ಉತ್ತಮ ಮಾರ್ಗದೆಡೆಗೆ ಕರೆದೊಯ್ಯುವ ಶಿವಶರಣರ ವಚನಗಳು ಇಂದಿಗೂ ತಮ್ಮ ಮೌಲ್ಯವನ್ನು ಉಳಿಸಿಕೊಂಡಿವೆ. ಇಂದಿನ ವಿದ್ಯಾರ್ಥಿಗಳು ಶಿವಶರಣರ ವಚನಗಳನ್ನು ಓದಿ ಇತರರಿಗೂ ಅರಿವು ಮೂಡಿಸುವ ಕೆಲಸ ಮಾಡಬೇಕು. ಅಂಬಿಗರ ಚೌಡಯ್ಯ ಅವರು ಸುಮಾರು 270 ರಿಂದ 300 ವಚನಗಳನ್ನು ರಚಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಜನರನ್ನು ಪ್ರೇರಪಿಸಿದರು ಎಂದು ಪ್ರೊ. ಜಯಣ್ಣ ಅವರು ಹೇಳಿದರು.

  ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಂ.ಎನ್. ಶಶಿಧರ್, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ರಾಜು, ಮುಖಂಡರಾದ ಸಿ.ಸಿ. ಪ್ರಕಾಶ್, ಸಂಘಸಂಸ್ಥೆಗಳ ಪ್ರತಿನಿಧಿಗಳು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *