ದಕ್ಷ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಮನ ಸೆಳೆದ ವಿಜ್ಞಾನ ವಸ್ತುಪ್ರದರ್ಶನ

ಮೈಸೂರು: ನಗರದ ದಕ್ಷ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ವಸ್ತುಪ್ರದರ್ಶನ ಗಮನ ಸೆಳೆಯಿತು.
ಹೂಟಗಳ್ಳಿಯಲ್ಲಿರುವ ದಕ್ಷ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ವಸ್ತುಪ್ರದರ್ಶನ, ವಿವರಣೆ, ಡಾ. ಸಿ.ವಿ. ರಾಮನ್ ಹೆಸರಿನಲ್ಲಿರುವ ವಿಜ್ಞಾನ ದಿನದ ಮಹತ್ವ ಸಾರುವ ಪಿಪಿಟಿ ಪ್ರದರ್ಶನ ಮತ್ತು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವಿಜ್ಞಾನ ಮಾದರಿಗಳ ವಸ್ತು ಪ್ರದರ್ಶನವನ್ನು ವೀಕ್ಷಿಸಿ ಅದರ ಮಾಹಿತಿ ಪಡೆಯುವ ಮೂಲಕ ಕಾಲೇಜಿನ ಕಾರ್ಯದರ್ಶಿಯವರಾದ ಶ್ರೀಮತಿ ಸೋನಿಯಾ ಉಮಾಪತಿ ರಾಜು ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ವಿಜ್ಞಾನ ಬದುಕಿನಲ್ಲಿ ಎಲ್ಲರಿಗೂ ಅಗತ್ಯವಾದುದು. ಪದವಿ ಹಂತದ ವಿದ್ಯಾರ್ಥಿಗಳು ಈ ರೀತಿಯ ವಸ್ತು ಪ್ರದರ್ಶನದಿಂದ ವಿಮುಖರಾಗುತ್ತಾರೆ. ಆದರೆ, ವಿಜ್ಞಾನದ ಮಾದರಿಗಳನ್ನು ತಯಾರಿಸುವಲ್ಲಿ ವಾಣಿಜ್ಯ ಕ್ಷೇತ್ರದ ವಿದ್ಯಾರ್ಥಿಗಳಾದ ನಿಮ್ಮ ಶ್ರಮ ಮತ್ತು ಭಾಗವಹಿಸಿಕೆ ಹೆಮ್ಮೆ ತರುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

ಹೀಗೆ ಬೇರೆ ಬೇರೆ ವಿಷಯಗಳನ್ನೂ ನೀವು ಆಸಕ್ತಿಪಟ್ಟು ಕಲಿಯುತ್ತಾ ಹೋದರೆ ನಿಮ್ಮ ಜ್ಞಾನ ಇನ್ನಷ್ಟು ಹೆಚ್ಚುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.

ದಕ್ಷ ಕಾಲೇಜಿನ ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ. ಮಹೇಶ ಎಂ.ಬಿ. ಅವರು ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋಗುತ್ತದೆ. 10 ವರ್ಷದ ಹಿಂದೆ ಇದ್ದ 2ಜಿ ತಂತ್ರಜ್ಞಾನ ಇಂದು 5ಜಿ ಮಟ್ಟಕ್ಕೆ ಬೆಳೆದಿದೆ. ಇದರಿಂದ ನಮಗೆ ಜಗತ್ತು ಸಾಕಷ್ಟು ಹತ್ತಿರವಾಗಿದೆ. ಅಲ್ಲದೆ ಈ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ಕೆಳಹಂತದ ನೌಕರಿಯಲ್ಲಿದ್ದವರು ಐಎಎಸ್ ನಂತಹ ಉನ್ನತ ಮಟ್ಟದ ಪರೀಕ್ಷೆಯನ್ನು ಪಾಸು ಮಾಡಿರುವುದನ್ನು ನಾವು ಕಾಣಬಹುದು ಎಂದು ಮಾಹಿತಿ ನೀಡಿದರು.

ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಎಚ್.ಸಿ. ಆನಂದ ಮಾತನಾಡಿದರು.

ಬಳಿಕ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ ಜರುಗಿತು. ಸಹಾಯಕ ಪ್ರಾಧ್ಯಾಪಕಿಯರಾದ ಅರ್ಪಿತಾ, ಅರ್ಷಿಯಾ ಖಾನಂ, ಪಲ್ಲವಿ ಕುಮಾರ್, ಅಶ್ವಿನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *