ನಗರದಲ್ಲಿ ಗಮನ ಸೆಳೆದ ಮತದಾನ ಜಾಗೃತಿ ಕಾರ್ಯಕ್ರಮ

ಚಾಮರಾಜನಗರ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಅಂಗವಾಗಿ ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ವಿನೂತನವಾಗಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಡಳಿತ ಭವನದ ಪ್ರವೇಶದ್ವಾರದಲ್ಲಿ ಆಕರ್ಷಕವಾಗಿ ಚಿತ್ರಿಸಿದ್ದ ಭಾರತ ಚುನಾವಣಾ ಆಯೋಗದ ಲಾಂಛನ, ಭಾರತದ ನಕ್ಷೆ ಚಿತ್ರಣದ ಬಳಿ ಮೆಟ್ಟಿಲುಗಳಲ್ಲಿ ಸಾಲಾಗಿ ಇರಿಸಿದ್ದ ದೀಪಗಳನ್ನು ಹಚ್ಚುವ ಮೂಲಕ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ದೀಪನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಸ್ವೀಪ್ ಯುವ ರಾಯಬಾರಿ ದೀಪಾ ಬುದ್ದೆ, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಪಿ. ಲಕ್ಷ್ಮೀ ಅವರು ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ಸಮಾವೇಶಗೊಂಡಿದ್ದ ಆಡಳಿತ ವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳೊಂದಿಗೆ ಮುಖ್ಯರಸ್ತೆವರೆಗೆ ಬೆಂಕಿ ಹತ್ತಿಸಿದ ಪಂಜಿನ ಮೆರವಣಿಗೆ ನಡೆಸಿದರು.
ಪಂಜಿನ ಮೆರವಣಿಗೆಯಲ್ಲಿ ಚುನಾವಣಾ ಘೋಷವಾಕ್ಯಗಳಾದ ಚುನಾವಣಾ ಪರ್ವ-ದೇಶದ ಗರ್ವ, ಮತದಾನ ನಮ್ಮ ಹಕ್ಕು, ಎಲ್ಲರೂ ನೈತಿಕ ಮತದಾನ ಬೆಂಬಲಿಸಿ, ಕಡ್ಡಾಯವಾಗಿ ಮತದಾನ ಮಾಡಿ ಸೇರಿದಂತೆ ಇನ್ನಿತರೆ ಮೈನವೀರೆಳಿಸುವ ಜಾಗೃತಿ ಘೋಷವಾಕ್ಯಗಳನ್ನು ಮೊಳಗಿಸಿ ನಾಗರಿಕರಿಗೆ ಮತದಾನದ ಅರಿವು ಮೂಡಿಸಿದರು.
ಬಳಿಕ ದೀಪನಡಿಗೆ ಹಾಗೂ ಪಂಜಿನ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಇದೇ ತಿಂಗಳ 26ರಂದು ಕರ್ನಾಟಕದಲ್ಲಿ ಮತದಾನ ನಡೆಯಲಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಮತದಾನಕ್ಕಾಗಿ 2 ಸಾವಿರ ಮತಗಟ್ಟೆಗಳನ್ನು ತೆರೆಯಲಾಗಿದೆ. ಕ್ಷೇತ್ರವ್ಯಾಪ್ತಿಯಲ್ಲಿ 16 ಲಕ್ಷ ಮತದಾರರು ನೊಂದಾಯಿಸಿಕೊಂಡಿದ್ದಾರೆ ಎಂದರು.
ಮತದಾನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಹತ್ತು-ಹಲವಾರು ಮತದಾನ ಜಾಗೃತಿ (ಸ್ವೀಪ್) ಚಟುವಟಿಕೆಗಳನ್ನು ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಆಯೋಜಿಸಿ ಜಿಲ್ಲೆಯ ಪ್ರಜ್ಞಾವಂತ ನಾಗರಿಕರಿಗೆ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅದರ ಭಾಗವಾಗಿ ಈ ದೀಪನಡಿಗೆÀ ಹಾಗೂ ಪಂಜಿನ ಮೆರವಣಿಗೆಯೂ ಸಹ ಒಂದಾಗಿದೆ ಎಂದು ತಿಳಿಸಿದರು.
ಈ ಬಾರಿಯ ಚುನಾವಣೆಯಲ್ಲಿ ಮಹಿಳೆಯರು, ವಿಶೇಷಚೇತನರು, ಲಿಂಗತ್ವ ಅಲ್ಪಸಂಖ್ಯಾತರು, ಹಿರಿಯ ನಾಗರಿಕರು ಹಾಗೂ 18 ವರ್ಷ ತುಂಬಿದ ಯುವ ಮತದಾರರಿಗೆ ಮತದಾನಕ್ಕೆ ಆದ್ಯತೆ ನೀಡಿ ಪ್ರತಿಯೊಬ್ಬರನ್ನು ಜಾಗೃತಗೊಳಿಸಲಾಗುತ್ತಿದೆ. ಮತದಾನ ನಡೆಯುವ ದಿನ ಏಪ್ರಿಲ್ 26ರಂದು ಜನರು ರಜೆಯಿದೆ ಎಂದು ಮನೆಯಲ್ಲಿಯೇ ಕೂರದೇ ಮತಗಟ್ಟೆಗೆ ಬಂದು ತಮ್ಮ ಅಮೂಲ್ಯವಾದ ಮತ ಚಲಾಯಿಸಿ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಬೇಕು ಎಂದು ಹೇಳಿದರು.
ಮತದಾರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಮತದಾರರ ಚೀಟಿ, ಮತದಾರರ ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ. ಮತದಾರರ ಚೀಟಿ ಇನ್ನೂ ದೊರೆಯದಿದ್ದಲ್ಲಿ ಸಂಬಂಧಪಟ್ಟ ಕ್ಷೇತ್ರ ಮತಗಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಿ ಪಡೆಯಬಹುದು. ಮತದಾರರ ಗುರುತಿನ ಚೀಟಿ ಇಲ್ಲದಿದ್ದರೂ ಆಧಾರ್ ಕಾರ್ಡ್, ವಾಹನ ಚಾಲನಾ ಪರವಾನಗಿ ಸೇರಿದಂತೆ ಇತರೆ ದಾಖಲೆಗಳನ್ನು ಹಾಜರುಪಡಿಸಿ ಮತದಾನ ಮಾಡಬಹುದು. ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮನವಿ ಮಾಡಿದರು.
ನಂತರ ಜಿಲ್ಲಾಡಳಿತ ಭವನದ ಒಳಾವರಣದಲ್ಲಿ ಚುನಾವಣಾ ಜಾಗೃತಿ ಮೂಡಿಸುವ ವಿವಿಧ ಬಗೆಯ ಬಣ್ಣಬಣ್ಣದ ಅಕರ್ಷಕ ರಂಗೋಲಿ ಚಿತ್ರಗಳು ನೋಡುಗರ ಮನೆಸೆಳೆದವು. ಬಳಿಕ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಬಹುಮಾನ ವಿತರಿಸಿದರು.