ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರನ್ನು ಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು 162ನೇ ದಿನವಾದ ಇಂದು ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ನಂದಿಗೆ ನೀರಿನ ಅಭಿಷೇಕ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥಿಸಿ ವಿನೂತನ ಚಳುವಳಿ ನೆಡೆಸಿದರು.
161 ದಿನಗಳಿಂದಲೂ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ಕರ್ನಾಟಕ ಸೇನಾಪಡೆ ಕಾರ್ಯಕರ್ತರು, ಇಂದು ನಗರದ ಚಾಮರಾಜೇಶ್ವರ ದೇವಸ್ಥಾನದ ಎದುರಿರುವ ನಂದಿಗೆ ನೀರಿನ ಅಭಿಷೇಕ ಮಾಡಿ, ಪ್ರಾರ್ಥನೆ ಸಲ್ಲಿಸಿ, ನಂತರ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಕಾವೇರಿ ನಿರ್ವಹಣಾ ಮಂಡಳಿ ವಿರುದ್ಧ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಕರ್ನಾಟಕದಲ್ಲಿ ಸಂಪೂರ್ಣವಾಗಿ ನೀರು ಖಾಲಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕುಡಿಯಲು ಒಂದು ತೊಟ್ಟು ನೀರಿಲ್ಲದಂತಹ ಪರಿಸ್ಥಿತಿಗೆ ಬರುತ್ತದೆ.
ಜಾನುವಾರುಗಳಿಗೆ ನೀರಿಲ್ಲದೆ, ಜಲಾಶಯಗಳು ಸಂಪೂರ್ಣ ಬತ್ತಿ ಹೋಗುತ್ತಿವೆ. ರೈತರಿಗೆ ನೀರಿಲ್ಲ, ವ್ಯವಸಾಯಕ್ಕೆ ನೀರಿಲ್ಲ, ಇದನ್ನು ಮನಗಂಡು ಮಳೆ ಬರುವಂತೆ ಪ್ರಾರ್ಥಿಸುವ ಮೂಲಕ ನಂದಿಗೆ ಅರಿಶಿಣ ಹಾಗೂ ಕುಂಕುಮ ಮಿಶ್ರಿತ ನೀರನ್ನು ಅಭಿಷೇಕ ಮಾಡಲಾಯಿತು.
ಕೇಂದ್ರ ಸರ್ಕಾರಕ್ಕೆ ಒಕ್ಕೂಟದ ವ್ಯವಸ್ಥೆಯ ಮೇಲೆ ಗೌರವ ಇದ್ದರೆ, ಈಗಲಾದರೂ ಮಧ್ಯ ಪ್ರವೇಶ ಮಾಡಿ ಕಾವೇರಿ ನಿರ್ವಹಣಾ ಮಂಡಳಿಯನ್ನು ವಜಾಗೊಳಿಸಬೇಕು. ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸುವ ಮೂಲಕ ರಾಜ್ಯದ ಜನತೆಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕಿಡಿಕಾರಿದರು.
ಎಲ್ಲಿಯವರೆಗೆ ನೀವು ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೂ ಉಗ್ರವಾದ ಹೋರಾಟವನ್ನು ಮಾಡುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಚಾ.ವೆಂ.ರಾಜ್‍ಗೋಪಾಲ್, ಚಾ.ರ.ಕುಮಾರ್, ಪಣ್ಯದಹುಂಡಿ ರಾಜು, ವೀರಭದ್ರ, ಆಟೋ ನಾಗೇಶ್, ರಾಜಪ್ಪ, ಮಹೇಶ್ ಗೌಡ, ವೀರಭದ್ರ ಇನ್ನಿತರರಿದ್ದರು.