ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಎಂಗೆ ಮನವಿ

ಚಾಮರಾಜನಗರ:  ಬಜೆಟ್ ನಲ್ಲಿ ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಜನಸಂಖ್ಯೆಯ ಆಧಾರದ ಮೇಲೆ ಕಟ್ಟುನಿಟ್ಟಾಗಿ ಶೇ.24.1 ಅನುದಾನವನ್ನು ಮೀಸಲಿಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ  ಜಿಲ್ಲಾ ಶಾಖೆ
ವತಿಯಿಂದ ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ  ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
‌  ಒಳಮೀಸಲಾತಿಯಲ್ಲಿ ಸೃಷ್ಟಿಯಾಗಿರುವ ರೋಸ್ಟರ್ ಬಿಂದು ಗೊಂದಲವನ್ನು ಸರಿಪಡಿಸಿ ಎಲ್ಲಾ 101 ಪರಿಶಿಷ್ಟ ಜಾತಿಗೂ ಅನ್ಯಾಯವಾಗದಂತೆ ನೇಮಕಾತಿ ಮಾಡಲು ಕ್ರಮ ಕೈಗೊಳ್ಳಬೇಕು.ಹಾಸ್ಟೆಲ್ ಬಯಸಿ ಅರ್ಜಿ ಸಲ್ಲಿಸುವ ಎಲ್ಲಾ ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನೀಡಬೇಕು. ನಿರಂತರವಾಗಿ ಪಾಠ ಏರ್ಪಾಡಬೇಕು.
ರಾಜ್ಯದಲ್ಲಿ ನಾಗರೀಕ ಹಕ್ಕುಗಳ ರಕ್ಷಣೆ ಕಾಯ್ದೆ ಮತ್ತು ದೌರ್ಜನ್ಯ ತಡೆಕಾಯ್ದೆಗಳ ಅನುಷ್ಠಾನ ಸಮರ್ಪಕವಾಗಿ ಆಗುತ್ತಿಲ್ಲ. ಅಪರಾಧಗಳ ಪತ್ತೆ
ಮತ್ತು ವಿಚಾರಣೆ ಸರಿಯಾಗಿ ನಡೆದು ರಕ್ಷಣೆಯಾಗುವ ಪ್ರಮಾಣ ಸರಿಯಾಗಿ ಆಗುವಂತೆ ನಿಗಾವಹಿಸಲು ಪ್ರತ್ಯೇಕ ಸಮಿತಿಯನ್ನು ಸ್ಥಾಪಿಸಬೇಕು.
   ಪ್ರತಿ ಗ್ರಾಮದಲ್ಲಿ ದಲಿತರಿಗೆ ಸ್ಮಶಾನ ಭೂಮಿಯನ್ನು ಕಡ್ಡಾಯವಾಗಿ ಮೀಸಲಿರಿಸಬೇಕು.
ಎಸ್.ಸಿ/ಎಸ್.ಟಿ ಮೀಸಲಾತಿಗೆ ನಿಗಧಿಪಡಿಸಿರುವ ಆದಾಯ ಮಿತಿ 15 ಲಕ್ಷಕ್ಕೆ ಏರಿಸಬೇಕು.
ಅರ್ಚಕ ಮತ್ತು ಪೌರಕಾರ್ಮಿಕ ವೃತ್ತಿಯನ್ನು ಸಾರ್ವತ್ರಿಕಗೊಳಿಸಬೇಕು. ಈ ಎರಡು ವೃತ್ತಿಗಳಲ್ಲಿ ಮೀಸಲಾತಿ ನೀತಿಯನ್ನು ಅನುಷ್ಠಾನಕ್ಕೆ ತರಬೇಕು. ಹಂಗಾಮಿ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು.ಖಾಸಗಿ ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯದ ಹಿನ್ನೆಲೆಯ ಮೀಸಲಾತಿಯನ್ನು ಜಾರಿಗೊಳಿಸಬೇಕು. ಎಸ್.ಸಿ/ಎಸ್.ಟಿ ಸಮುದಾಯದ ಬ್ಯಾಕ್‌ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು.ಈ ಮೊದಲು ಫಾರಂ 57 ಹಾಕಿರುವವರಿಗೆ ಕೂಡಲೇ ಸಾಗುವಳಿ ಚೀಟಿ ಹಾಗೂ ಹಕ್ಕುಪತ್ರ ನೀಡಬೇಕು. ಫಾರಂ-57, ಅರ್ಜಿ ಸಲ್ಲಿಸಲು ಮತ್ತೆ ಅವಕಾಶ ನೀಡಬೇಕು.
ಉಚ್ಛ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯಗಳ ನ್ಯಾಯಾಧೀಶರುಗಳ ನೇಮಕಾತಿಯಲ್ಲಿ ಮೀಸಲಾತಿಯನ್ನು ಅನುಸರಿಸುವುದಕ್ಕೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದು.ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಎಲ್ಲಾ ನಿಗಮ ಮಂಡಳಿಗಳಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಎಸ್.ಸಿ/ಎಸ್.ಟಿ ಯ ಎಲ್ಲಾ ಅರ್ಹ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಬೇಕು. ಭೂ ಒಡೆತನ ಯೋಜನೆಗೆ ಹಣ
ಮೀಸಲಿಡಬೇಕು. ವಿವಿಧ ವಸತಿ ಯೋಜನೆಯಡಿ ಅರ್ಹ ಬಡ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಬೇಕು ಹಾಗೂ ಸಹಾಯ ಧನವನ್ನು
5 ಲಕ್ಷ ರೂ. ಗಳಿಗೆ ಹೆಚ್ಚಿಸಬೇಕು. ನಿರಾಶ್ರಿತರಿಗೆ ನಿವೇಶನ ಮತ್ತು ಹಕ್ಕು ಪತ್ರ ನೀಡಿ ದಾಖಲೆ ಇಡಬೇಕು.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020, ಈ ಕೂಡಲೇ ರದ್ದು ಮಾಡಬೇಕು. ಎಸ್ಸಿಎಸ್ ಪಿ, ಟಿಎಸ್ ಪಿ ಹಣವನ್ನು ಬೇರೆ ಯೋಜನೆಗಳಿಗೆ ಬಳಸಬಾರದು ಹಾಗೂ ಈಗಾಗಲೇ ಬಳಸಿರುವ ಹಣವನ್ನು ವಾಪಸ್ ಎಸ್.ಸಿ/ಎಸ್.ಟಿ ಗಳ ಅಭಿವೃದ್ಧಿಗೆ ಮೀಸಲಿಡಬೇಕು.
   ಕೆಎಸ್ ಎಫ್ ಸಿ ಬ್ಯಾಂಕ್‌ಗಳಿಂದ ದಲಿತರಿಗೆ ಶೇ. 4 ಬಡ್ಡಿಯಲ್ಲಿ 10 ಕೋಟಿ ರೂ.ವರೆಗೆ ಉದ್ಯಮ ನಡೆಸಲು ಸಾಲ ಸೌಲಭ್ಯ ನೀಡುವ ಯೋಜನೆಯಲ್ಲಿರುವ ಷರತ್ತುಗಳನ್ನು ಸಡಿಲಪಡಿಸಿ ನಗರ ಪ್ರದೇಶದಲ್ಲಿ ನಿವೇಶನ, ಮನೆ ಇತರೆ ಚರಾಸ್ಥಿಗಳ ಕೋಲ್ಯಾಟರಲ್ ಇರಬೇಕು ಎಂಬ ನಿಯಮ ಸಡಿಲಪಡಿಸಬೇಕು.
ಈ ಮೇಲ್ಕಂಡ ಹಕ್ಕೊತ್ತಾಯಗಳನ್ನು ಈ ಕೂಡಲೇ ಈಡೇರಿಸಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಲಕ್ಷ್ಮಿನಾರಾಯಣ ನಾಗವಾರ ಸ್ಥಾಪಿತ) ಚಾಮರಾಜನಗರ ಜಿಲ್ಲಾ ಶಾಖೆಯ ಜಿಲ್ಲಾ
ಸಂಘಟನಾ ಸಂಚಾಲಕ ಕಂದಹಳ್ಳಿ ನಾರಾಯಣ್
ರಾಜ್ಯ ಸರ್ಕಾರವನ್ನು  ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಭಾಗ್ಯಲಕ್ಷ್ಮೀ, ಮಲ್ಲರಾಜು, ಶಂಕರಮೂರ್ತಿ, ಆಟೋ ರಂಗಸ್ವಾಮಿ, ರಾಜಮ್ಮ, ಶಾಂತಮ್ಮ, ಕೆ.ಸಿ.ನಾಗರಾಜು, ದುಂಡಯ್ಯ, ಕಂದಹಳ್ಳಿ ಸೋಮಣ್ಣ, ಉಮೇಶ್ವರಿ, ನಾಗಮ್ಮ, ಮಹೇಶ್, ಸೋಮಣ್ಣ ಹೊನ್ನೂರು, ಕೆಂಪರಾಜು ಇತರರು ಹಾಜರಿದ್ದರು.

Leave a Reply

Your email address will not be published. Required fields are marked *