ಚಾಮರಾಜನಗರ: ಜಿಲ್ಲಾಡಳಿತದ ವತಿಯಿಂದ ನಗರದಲ್ಲಿಂದು ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವದ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ವಿವಿಧ ಪೊಲೀಸ್ ತುಕಡಿಗಳು ಹಾಗೂ ಶಾಲಾ ಮಕ್ಕಳು ನಡೆಸಿಕೊಟ್ಟ ಆಕರ್ಷಕ ಪಥ ಸಂಚಲನ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಧ್ವಜಾರೋಹಣ ನೆರವೇರಿಸಿದರು. ಆರಂಭದಲ್ಲಿ ಪಥಸಂಚಲನಕ್ಕೆ ಸಜ್ಜಾಗಿದ್ದ ಪೊಲೀಸ್ ತುಕಡಿಗಳು ಹಾಗೂ ಶಾಲಾ ಮಕ್ಕಳ ತಂಡಗಳ ಪರಿವೀಕ್ಷಣೆ ಮಾಡಿ ಬಳಿಕ ಗೌರವ ವಂದನೆ ಸ್ವೀಕರಿಸಿದರು.
ಇದೇ ವೇಳೆ ಕುವೆಂಪು ವಿರಚಿತ ‘ಜಯ ಭಾರತ ಜನನಿಯ ತನುಜಾತೆ-ಜಯಹೇ ಕರ್ನಾಟಕ ಮಾತೆ’ ನಾಡಗೀತೆಗೆ 100 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಜನಪದ ಗಾಯಕರಾದ ಸಿ.ಎಂ. ನರಸಿಂಹಮೂರ್ತಿ ನೇತೃತ್ವದಲ್ಲಿ ಮಲ್ಲಯ್ಯನಪುರದ ಆದರ್ಶ ವಿದ್ಯಾಲಯದ 250 ಮಕ್ಕಳು ನಾಡಗೀತೆಯನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರು.
ನಂತರ ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ರಾಜ್ಯೋತ್ಸವದ ಸಂದೇಶ ನೀಡಿ ದೇಶದ ವಿವಿಧೆಡೆ ಹಂಚಿಹೋಗಿದ್ದ ಕನ್ನಡ ಭಾಷಿಕರು ಹಾಗೂ ಪ್ರದೇಶಗಳನ್ನು ಒಗ್ಗೂಡಿಸುವ ಮೂಲಕ ಚಳವಳಿಯನ್ನು ಸ್ವಾತಂತ್ರ್ಯಪೂರ್ವದಿಂದಲೂ ಪ್ರಾರಂಭಿಸಲಾಗಿತ್ತು. ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಆಲೂರು ವೆಂಕಟರಾಯರು, ಆರ್.ಎಚ್. ದೇಶಪಾಂಡೆ, ಕಂಬಳಿ ಸಿದ್ದಪ್ಪ, ಬೆನಗಲ್ ರಾಮರಾಯ, ನಿಟ್ಟೂರು ಶ್ರೀನಿವಾಸರಾವ್, ಮುದವೀಡು ಕೃಷ್ಣರಾವ್, ಮಾಧವರಾವ್, ಡಿ.ವಿ. ಗುಂಡಪ್ಪ, ನಾ. ಹರ್ಡೀಕರ್, ಆ.ನ. ಕೃಷ್ಣರಾಯರು, ಕೆ.ಸಿ. ರೆಡ್ಡಿ, ಬಿ.ಡಿ. ಜತ್ತಿ, ಕೆಂಗಲ್ ಹನುಮಂತಯ್ಯ, ಎಸ್. ನಿಜಲಿಂಗಪ್ಪ ಅವರು ಸ್ಮರಣೀಯರಾಗಿದ್ದಾರೆ ಎಂದರು.
ತ್ರಿಭಾಷಾ ಸೂತ್ರದಡಿ ಕನ್ನಡವನ್ನು ಮುಖ್ಯಭಾಷೆಯನ್ನಾಗಿಸಿದ ಗೋಕಾಕ ಚಳವಳಿಯ ನೇತಾರ ಡಾ. ರಾಜ್‍ಕುಮಾರ್ ನಮ್ಮ ಜಿಲ್ಲೆಯ ಹೆಮ್ಮೆ ಎಂದರೇ ತಪ್ಪಾಗಲಾರದು. ರಾಜ್ಯ ಪುನರ್ವಿಗಂಡನಾ ಆಯೋಗದ ವರದಿ ಅನ್ವಯ ವಿವಿಧ ಭಾಷೆ, ಪ್ರಾಂತ್ಯಗಳ ಆಧಾರದಲ್ಲಿ ರಾಜ್ಯಗಳು ರೂಪುಗೊಂಡ ಸಂದರ್ಭದಲ್ಲಿ ಕನ್ನಡ ಮಾತನಾಡುವ ಪ್ರಾಂತ್ಯಗಳು ಒಂದುಗೂಡಿ ಮೈಸೂರು ರಾಜ್ಯವಾಯಿತು. ಬಳಿಕ 1973ರ ನವೆಂಬರ್ 1ರಂದು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವನ್ನಾಗಿ ಪುನರ್ ನಾಮಕರಣ ಮಾಡಲಾಯಿತು. ಅಂದಿನಿಂದ ಪ್ರತಿವರ್ಷ ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಉಸ್ತುವಾರಿ ಸಚಿವರಾದ ವೆಂಕಟೇಶ್ ಅವರು ಹೇಳಿದರು.
ಇದೇ ವೇಳೆ ಗಣ್ಯರು ರಾಷ್ಟ್ರನಾಯಕರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ನಗರದ ಸಂತಪೌಲರ ಪ್ರೌಢಶಾಲೆ, ಸೇವಾಭಾರತಿ, ಬಂಜಾರ ಇಂಡಿಯನ್ಸ್, ದೀನಬಂಧು ಹಾಗೂ ಯುನಿವರ್ಸ್ ಶಾಲೆಯ ಮಕ್ಕಳು ನಾಡು-ನುಡಿಯ ಮಹತ್ವ ಬಿಂಬಿಸುವ ನೃತ್ಯರೂಪಕಗಳನ್ನು ನಡೆಸಿಕೊಟ್ಟರು.
ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ 2025ನೇ ಸಾಲಿನ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಬಳಿಕ ನವೆಂಬರ್ 3ರಿಂದ ಒಂದು ತಿಂಗಳ ಕಾಲ ಜಿಲ್ಲೆಯಲ್ಲಿ ಆಯೋಜನೆಯಾಗಿರುವ ಜಾನುವಾರುಗಳಿಗೆ ಕಾಲುಬಾಯಿ ಜ್ವರ ನಿಯಂತ್ರಣ ಲಸಿಕೆ ಬಗ್ಗೆ ಜಾಗೃತಿ ಮೂಡಿಸುವ ಪೋಸ್ಟರ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವರು, ಗಣ್ಯರು ಬಿಡುಗಡೆ ಮಾಡಿದರು. ಅಲ್ಲದೆ ಗೃಹ ಆರೋಗ್ಯ ಯೋಜನೆಯಡಿ ಮನೆಮನೆಗೆ ತೆರಳಿ ಆರೋಗ್ಯ ಸುರಕ್ಷತೆ ಕುರಿತು ಅರಿವು ಮೂಡಿಸುವ ವಾಹನಕ್ಕೆ ಚಾಲನೆ ನೀಡಿದರು.
ಪಥಸಂಚಲನದಲ್ಲಿ ಪೊಲೀಸ್ ಇಲಾಖೆಯ ಸಿವಿಲ್, ಮೀಸಲು ಪಡೆ, ವಿವಿಧ ಮಹಿಳಾ ಪೊಲೀಸ್ ತುಕಡಿಗಳು, ಗೃಹರಕ್ಷಕ ದಳ, ಸಂತ ಪೌಲರ ಶಾಲಾ ತಂಡ, ಬಂಜಾರ ಇಂಡಿಯನ್ಸ್, ಎಂ.ಸಿ.ಎಸ್. ಪ್ರೌಢಶಾಲೆ, ಸಂತ ಜೋಸೆಫರ ಶಾಲೆ, ಆದರ್ಶ ವಿದ್ಯಾಲಯ, Àಜೆ.ಎಸ್.ಎಸ್. ಪ್ರೌಢಶಾಲೆ, ಸರ್ಕಾರಿ ಜೂನಿಯರ್ ಕಾಲೇಜು ಸೇರಿದಂತೆ ಒಟ್ಟು 15 ತಂಡಗಳು ಭಾಗವಹಿಸಿದ್ದವು. ಉತ್ತಮ ಪಥಸಂಚಲನ ನಡೆಸಿಕೊಟ್ಟ ತಂಡಗಳಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.
ಕನ್ನಡ ರಾಜ್ಯೋತ್ಸವದ ಮುಖ್ಯ ಕಾರ್ಯಕ್ರಮಕ್ಕೂ ಮೊದಲು ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್ ಅವರು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಿ.ಸಿ. ಶೃತಿ ಅವರೊಂದಿಗೆ ಧ್ವಜಾರೋಹಣ ನೆರವೇರಿಸಿದರು. ಬಳಿಕ ಜಿಲ್ಲಾಡಳಿತ ಭವನದ ಅವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು