ಜಂಕ್ ಫುಡ್ ತ್ಯಜಿಸಿ ಸಿರಿಧಾನ್ಯದಿಂದ ತಯಾರಿಸಿದ ಆಹಾರ ಬಳಸಿ : ಜಿ.ಪಂ. ಸಿ.ಇ.ಒ ಮೋನಾ ರೋತ್ ಸಲಹೆ

ಚಾಮರಾಜನಗರ: ಜಂಕ್ ಫುಡ್ ತಿನಿಸುಗಳನ್ನು ತ್ಯಜಿಸಿ ಸಿರಿಧಾನ್ಯದಿಂದ ತಯಾರಿಸಿದ ಆಹಾರವನ್ನು ಸೇವಿಸುವುದರಿಂದ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಅಭಿಪ್ರಾಯಪಟ್ಟರು. 

ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆ.ಡಿ.ಪಿ. ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ವತಿಯಿಂದ ಅಂತರರಾಷ್ಟ್ರೀಯ ವಾಣಿಜ್ಯ ಮೇಳ-2026ರ ಅಂಗವಾಗಿ ಆಯೋಜಿಸಲಾಗಿದ್ದ ಸಿರಿಧಾನ್ಯ ಮತ್ತು ಮರೆತುಹೋದ ಖಾಧ್ಯಗಳ ಪಾಕ ಸ್ಪರ್ಧೆಯನ್ನು ಮಣ್ಣಿನ ಮಡಿಕೆಗೆ ಬಿದಿರಿನ ಮೊರದಲ್ಲಿ ರಾಗಿ ತುಂಬಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. 

ಇತ್ತೀಚೆಗೆ ಫಾಸ್ಟ್ ಫುಡ್, ಜಂಕ್ ಫುಡ್ ಗಳ ಬಳಕೆ ಹೆಚ್ಚಾಗುತ್ತಿದೆ. ಸಿರಿಧಾನ್ಯಗಳಿಂದ ಉತ್ಪಾದಿಸಲಾಗುವ ಆಹಾರಗಳು ಇಂದು ಕಣ್ಮರೆಯಾಗುತ್ತಿದೆ. ನಾವು ಉಪಯೋಗಿಸುವ ಆಹಾರಗಳಲ್ಲಿ ಪೌಷ್ಟಿಕಾಂಶದ ಕೊರತೆಯಿದೆ. ಜಂಕ್ ಫುಡ್ ಆಹಾರಗಳು ಅತಿ ರುಚಿಯನ್ನು ಹೊಂದಿದ್ದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಕ್ಕಳಿಗೆ ಇಂತಹ ಆಹಾರಗಳನ್ನು ನೀಡುವ ಬದಲು ಮನೆಯಿಂದಲೇ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ನೀಡುವುದು ಒಳಿತು ಎಂದರು.

ಪ್ಯಾಕ್ ಮಾಡಿದ ಕೆಲ ಆಹಾರ ಪಧಾರ್ಥಗಳನ್ನು ಉಪಯೋಗಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗಲಿದೆ. ನಮ್ಮ ಹಿರಿಯರು ಸಿರಿಧಾನ್ಯಗಳಿಂದ ತಯಾರಿಸಿದ ಊಟ ಉಪಹಾರ ಸೇವಿಸಿ ಧೀರ್ಘಕಾಲ ಬದುಕಿರುವುದನ್ನು ಕೇಳಿದ್ದೇವೆ. ಮಕ್ಕಳಿಗೆ ತಾಯಂದಿರು ಮನೆಯಲ್ಲಿಯೇ ತಯಾರಿಸಿದ ಆಹಾರವನ್ನು ನೀಡಬೇಕು. ಸಿರಿಧಾನ್ಯಗಳನ್ನು ಬೆಳೆದು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೃಷಿ ನಿರ್ದೇಶಕರಾದ ಸುಷ್ಮಾ ಅವರು 2026ರ ಅಂತರಾಷ್ಟ್ರೀಯ ವಾಣಿಜ್ಯ ಸಿರಿಧಾನ್ಯ ಮೇಳವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನವರಿ 16, 17, 18 ರಂದು ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಇಂದು ವಾಣಿಜ್ಯ ಸಿರಿಧಾನ್ಯ ಮೇಳವನ್ನು ಇಲಾಖೆ ವತಿಯಿಂದ ಆಯೋಜಿಸಲಾಗಿದೆ ಎಂದರು.

ಈ ಹಿಂದೆಯೂ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಜಿಲ್ಲೆಗೆ ಬಹುಮಾನ ಬಂದಿದ್ದು, ಸಂತೋಷದ ವಿಷಯವಾಗಿದೆ. 2026ರಲ್ಲಿ ನಡೆಯುವ ವಾಣಿಜ್ಯ ಸಿರಿಧಾನ್ಯ ಮೇಳದಲ್ಲಿ ಜಿಲ್ಲೆಯ ಸ್ಪರ್ಧಿಗಳು ಭಾಗವಹಿಸಿ ಬಹುಮಾನ ಪಡೆದು ಜಿಲ್ಲೆಗೆ ಕೀರ್ತಿ ತರಬೇಕೆಂದು ಜಂಟಿ ಕೃಷಿ ನಿರ್ದೇಶಕರಾದ ಸುಷ್ಮಾ ಅವರು ಶುಭ ಕೋರಿದರು.

ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಸಿಮ್ಸ್ ಸಂಸ್ಥೆಯ ಡಾ. ಧನ್ಯಶ್ರೀ, ಡಾ. ಮಂಜುನಾಥ್, ಹರದನಳ್ಳಿಯ ಕೆ.ವಿ.ಕೆ ಆಹಾರ ವಿಜ್ಞಾನಿ ಡಾ. ದೀಪ ಭಾಗವಹಿಸಿದ್ದರು. 

ನಂತರ ವಿವಿಧ ಬಗೆಯ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ತಿನಿಸುಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಂಟಿ ಕೃಷಿ ನಿರ್ದೇಶಕರಾದ ಸುಷ್ಮಾ ತೀರ್ಪುಗಾರರು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *