ಚಾಮರಾಜನಗರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ದೌರ್ಜನ್ಯ ಪ್ರತಿಬಂಧ ಅಧಿನಿಯಮ ಮತ್ತು ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ ಕುರಿತು ಗ್ರಾಮಪಂಚಾಯಿತಿಗಳ ಮಟ್ಟದಲ್ಲಿ ಹೆಚ್ಚು ಕಾರ್ಯಾಗಾರವನ್ನು ಹಮ್ಮಿಕೊಳ್ಳುವ ಮೂಲಕ ವಿಶೇಷವಾಗಿ ಸ್ಥಳೀಯ ಜನರಿಗೆ ಅರಿವು ಮೂಡಿಸಬಹುದು ಎಂದು ಹರವೆ ವಿರಕ್ತಮಠದ ಪೀಠಾಧ್ಯಕ್ಷರಾದ ಸರ್ಪಭೂಷಣ ಸ್ವಾಮಿಯವರು ತಿಳಿಸಿದರು.
ತಾಲೂಕಿನ ಹರವೆ ಗ್ರಾಮದ ಮೊರಾರ್ಜಿ ದೇಸಾಯಿ ವಸತಿಶಾಲೆ ಆವರಣದಲ್ಲಿಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ 1989 ಮತ್ತು ತಿದ್ದುಪಡಿ ಅಧಿನಿಯಮಗಳು ಹಾಗೂ ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ ಕುರಿತ ಹೋಬಳಿ ಮಟ್ಟದ ವಿಚಾರ ಸಂಕಿರಣ ಮತ್ತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಾಯ್ದೆಗಳ ಬಗ್ಗೆ ತಿಳಿದುಕೊಂಡರೆ ಯಾವುದೇ ತಪ್ಪು ಎಸಗುವ ಮುನ್ನ ಯಾವ ತೊಂದರೆ ಉಂಟಾಗಲಿದೆ ಎಂಬುದು ಅರಿವಾಗಲಿದೆ. ಹೀಗಾಗಿ ಕಾನೂನು ಬಗ್ಗೆ ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ದೌರ್ಜನ್ಯ ಪ್ರತಿಬಂಧ ಕಾಯ್ದೆಗಳ ಬಗ್ಗೆ ತಿಳಿವಳಿಕೆ ಉಂಟಾಗಲಿದೆ ಎಂದರು.
ದೊಡ್ಡ ಪ್ರಜಾತಂತ್ರ ರಾಷ್ಟ್ರವಾಗಿರುವ ಭಾರತದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ ಚೌಕಟ್ಟಿನಲ್ಲಿ ಎಲ್ಲರೂ ಇದ್ದೇವೆ. ಕಾನೂನಿನ ಮುಂದೆ ಯಾರು ದೊಡ್ಡವರಲ್ಲ. ಕಾನೂನಿನ ಮುಂದೆ ಎಲ್ಲರು ಸರಿಸಮಾನರು. ಎಲ್ಲರಿಗೂ ಸರಿಸಮಾನವಾದ ಹಕ್ಕುಗಳನ್ನು ಸಂವಿಧಾನ ನೀಡಿದೆ. ಬುದ್ದ, ಬಸವ, ಅಂಬೇಡ್ಕರ್ ಅವರು ಸಮಾನತೆಯನ್ನು ಪ್ರತಿಪಾದಿಸಿದವರು. ಶೋಷಿತರನ್ನು ಸಮಾನತೆ ದೃಷ್ಠಿಯಿಂದ ನಡೆಸಿಕೊಳ್ಳಬೇಕೆಂಬುದು ಸಂವಿಧಾನದ ಮುಖ್ಯ ಆಶಯವಾಗಿದೆ ಎಂದು ಸರ್ಪಭೂಷಣ ಸ್ವಾಮೀಜಿ ಅವರು ತಿಳಿಸಿದರು.
ಪ್ರಜಾ ಪರಿವರ್ತನಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಸಿ.ಎಂ ಕೃಷ್ಣಮೂರ್ತಿ ಅವರು ಮಾತನಾಡಿ ಪ್ರತಿಯೊಬ್ಬ ಪ್ರಜೆಯು ಅಭಿವೃದ್ಧಿ ಹೊಂದಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಪ್ರಗತಿಯಾಗಬೇಕು ಎಂಬುದು ಸಂವಿಧಾನದ ಮೂಲ ಆಶಯವಾಗಿದೆ. ಹಿಂದುಳಿದ, ಶೋಷಿತ ಸಮುದಾಯಗಳಿಗೆ ರಕ್ಷಣೆ ಕೊಡುವ ಸಲುವಾಗಿಯೇ ಕೆಲವು ವಿಶೇಷವಾಗಿ ಕಾನೂನುಗಳನ್ನು ತರಲಾಯಿತು. ದೇಶದ ಹಿತದೃಷ್ಟಿಯಿಂದ ಬಾಬಾ ಸಾಹೇಬರು ಸಂವಿಧಾನವನ್ನು ಜಾರಿ ಮಾಡಿದರು ಎಂದರು.
ಪರಿಶಿಷ್ಟರ ಮೇಲಿನ ದೌರ್ಜನ್ಯ ದಬ್ಬಾಳಿಕೆ ತಡೆಯಲು ಕಾನೂನು ಜಾರಿಗೆ ಬಂದಿದೆ. ಪೆÇಲೀಸ್ ಇಲಾಖೆಯಿಂದ ರಕ್ಷಣೆ ಸಿಗದೇ ಇದ್ದಲ್ಲಿ ನೇರವಾಗಿ ನ್ಯಾಯಾಲಯಕ್ಕೆ ಮೊರೆ ಹೋಗಬಹುದು. ಪ್ರಕರಣ ದಾಖಲು ಮಾಡಬಹುದು. ಈ ಬಗ್ಗೆ ಅರಿವು ಮೂಡಿಸಲು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರತಿವರ್ಷ ವಿಚಾರ ಸಂಕಿರಣ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಗ್ರಾಮಪಂಚಾಯಿತಿ ಮಟ್ಟದ ಜನಪ್ರತಿನಿಧಿಗಳಿಗೆ ಕಾನೂನು ಅರಿವು ಮೂಡಿಸುವುದು ಬಹಳ ಮುಖ್ಯವಾಗಿದೆ ಎಂದು ಸಿ.ಎಂ ಕೃಷ್ಣಮೂರ್ತಿ ಅವರು ತಿಳಿಸಿದರು.
ವಿಚಾರ ಮಂಡನೆ ಮಾಡಿದ ಪ್ರಗತಿಪರ ಚಿಂತಕರಾದ ಅರಕಲವಾಡಿ ನಾಗೇಂದ್ರ ಅವರು ಮಾತನಾಡಿ ಗ್ರಾಮ ಪಂಚಾಯಿತಿಯ ಸದಸ್ಯರಿಂದ ಹಿಡಿದು ಎಲ್ಲ ಹಂತದ ಜನಪ್ರತಿನಿಧಿಗಳು ಸೇರಿ ಕಾನೂನು ರಕ್ಷಣೆ ಮಾಡಿದರೆ ಮಾತ್ರ ಕಾನೂನು ಉಳಿಯುತ್ತದೆ. ದೌರ್ಜನ್ಯಕ್ಕೆ ಒಳಗಾದವರನ್ನು ಮೇಲೆತ್ತಲು ಶಿಕ್ಷಣ ಆರೋಗ್ಯದಂತಹ ಎಲ್ಲ ಸೌಲಭ್ಯಗಳು ಸಮರ್ಪಕವಾಗಿ ಸಿಗಬೇಕು. ಅವರೂ ಸಹ ಇತರರಂತೆ ಅಭಿವೃದ್ದಿಯ ಬದುಕು ಹೊಂದಬೇಕು. ಮಹಿಳೆಯರು ಮನೆ ಬಿಟ್ಟು ಹೊರಬಂದು ಸ್ವಾವಲಂಬಿ ಜೀವನ ನಡೆಸಲು ಮಹಿಳೆಯರ ಮೇಲಿನ ದೌರ್ಜನ್ಯ ತಪ್ಪಿಸಲು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಮಹಿಳೆಯರ ಸಮಾನತೆಯನ್ನು ಸಂವಿಧಾನ ಎತ್ತಿಹಿಡಿದಿದೆ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಎಲ್ಲರಿಗೂ ಒಂದೇ ಕಾನೂನು ಇದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ 1989ರ ಈ ಕಾನೂನು ಬಹಳ ಕಠಿಣವಾಗಿದ್ದು, ಪರಿಶಿಷ್ಟರನ್ನು ಯಾವುದೇ ತಾರತಮ್ಯದಿಂದ ನೋಡುವಂತಿಲ್ಲ. ಪರಿಶಿಷ್ಟರ ಮೇಲೆ ದೌರ್ಜನ್ಯ ಎಸಗುವವರು, ಹೀಯಾಳಿಸುವವರಿಗೆ 10 ವರ್ಷ ಶಿಕ್ಷೆ ವಿಧಿಸಲು ಅವಕಾಶವಿದೆ. ಕ್ರೂರವಾಗಿ ದೌರ್ಜನ್ಯ ಮಾಡುವವರಿಗೆ ಮತ್ತಷ್ಟು ಕಠಿಣ ಶಿಕ್ಷೆ ನೀಡಲಾಗುತ್ತದೆ ಎಂದು ಅರಕಲವಾಡಿ ನಾಗೇಂದ್ರ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯರಾದ ಕೆರೆಹಳ್ಳಿ ನವೀನ್, ತಾಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿ ಎಂ. ನಾಗೇಶ್ ಅವರು ಕಾರ್ಯಾಗಾರದಲ್ಲಿ ಮಾತನಾಡಿದರು. ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಎಂ.ಕೆ. ಮೇಘ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾ ಪರಿವರ್ತನಾ ವೇದಿಕೆಯ ತಾಲೂಕು ಸಂಯೋಜಕರಾದ ಎಂ. ಪುರುಷೋತ್ತಮ್ ಮುಕ್ಕಡಹಳ್ಳಿ, ತಾಲೂಕು ಪಂಚಾಯತ್‍ನ ಮಾಜಿ ಸದಸ್ಯರದ ಎಂ.ಸಿ. ರವಿಕುಮಾರ್, ನಿಸರ್ಗ ನಾಗರಾಜು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Like this:
Like Loading...
Related