ಚಾಮರಾಜನಗರ : ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸಮ್ಮಿಲನ್ ವೇದಿಕೆ, ಜಿಲ್ಲೆಯಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ ಸಿಎಸ್ಆರ್ ಸಂಸ್ಥೆಗಳೊಂದಿಗೆ ಬಲವಾದ ಪಾಲುದಾರಿಕೆಗಳನ್ನು ನಿರ್ಮಿಸುತ್ತಿದೆ.
ಇದರ ಅಂಗವಾಗಿ, ಜೆಕೆ ಟೈರ್ ಮತ್ತು ಇಂಡಸ್ಟ್ರೀಸ್ ಲಿಮಿಟೆಡ್‌ನ ಹಿರಿಯ ತಂಡ ಶುಕ್ರವಾರ ಜಿಲ್ಲೆಗೆ ಭೇಟಿ ನೀಡಿ, ಕೆರೆಗಳ ಪುನರುಜ್ಜೀವನ, ಶಿಕ್ಷಣ ಮತ್ತು ಜೀವನೋಪಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಸಹಕಾರ ನೀಡಲು ಆಸಕ್ತಿ ವ್ಯಕ್ತಪಡಿಸಿದೆ.
ಜೆಕೆ ಟೈರ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಿಯೋಗ ಆಸಕ್ತಿಯಿಂದ ಜಿಲ್ಲೆಗೆ ಭೇಟಿ ನೀಡಿದ್ದು ನಿಯೋಗದ ಉಪಾಧ್ಯಕ್ಷರಾದ ಈಶ್ವರರಾವ್, ಹಿರಿಯ ಜನರಲ್ ಮ್ಯಾನೇಜರ್ ಆರ್. ಜಗದೀಶ್, ರೋಟರಿ ಸಿಎಸ್ಆರ್ ಅಧ್ಯಕ್ಷರಾದ ಕಿರಣ್ ರಾಬರ್ಟ್ ಮತ್ತು ಸಿ.ಐ.ಐ ಮೈಸೂರು ವಿಭಾಗದ ಅಧ್ಯಕ್ಷರಾದ ಕ್ಷಣ ಸ್ವಾಮಿ ತಂಡವು ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿಯ ದೊಡ್ಡ ಕೆರೆ, ಚಾಮರಾಜನಗರ ತಾಲೂಕಿನ ನಾಗವಳ್ಳಿ ಕೆರೆ ಹಾಗೂ ಬದನಗುಪ್ಪೆ ಕೆರೆಯಲ್ಲಿ ಯೋಜನಾ ಸಾಮರ್ಥ್ಯ ಪರಿಶೀಲನೆ ಮಾಡಿ, ಬದನಗುಪ್ಪೆ–ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶಕ್ಕೂ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಕೈಗಾರಿಕೆ ಇಲಾಖೆ ಉಪನಿರ್ದೇಶಕ ದೊರೆ ರಾಜ್, ಸಹಾಯಕ ನಿರ್ದೇಶಕ ವಿಜಯಕುಮಾರ್, ಜಿಲ್ಲಾ ಸಿಎಸ್ಆರ್ ಸಂಯೋಜಕಿ ರಕ್ಷಿತಾ ನಾಯಕ್, ಜಿಲ್ಲಾ ಇ-ಆಡಳಿತ ಸಮಾಲೋಚಕ ಮಧುಕೇಶ್ ಹಾಗೂ ವಿವಿಧ ಅಧಿಕಾರಿಗಳು ಇದ್ದರು.
ಚಾಮರಾಜನಗರವು ಸಮ್ಮಿಲನ್ ವೇದಿಕೆಯ ಮೂಲಕ ಪರಿಣಾಮಕಾರಿ ಮತ್ತು ದೀರ್ಘಕಾಲಿಕ ಸಿಎಸ್ಆರ್ ಪಾಲುದಾರಿಕೆಗಳನ್ನು ನಿರ್ಮಿಸಲು ಬದ್ಧವಾಗಿದೆ .