ಚಾಮರಾಜನಗರ: ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭದ ಉದ್ಘಾಟನೆಗಾಗಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ನವೆಂಬರ್ 20ರಂದು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಇಂದು ಸಿದ್ದತೆಗಳನ್ನು ಪರಿಶೀಲಿಸಿದರು.
ಸಮಾರೋಪ ಸಮಾರಂಭ ಆಯೋಜನೆಯಾಗಿರುವ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣಕ್ಕೆ ಭೇಟಿ ನೀಡಿ ಸಚಿವರು ವ್ಯಾಪಕವಾಗಿ ಸಿದ್ದತೆಗಳನ್ನು ವೀಕ್ಷಿಸಿದರು.
ಬೃಹತ್ ವೇದಿಕೆ, ನೆರಳಿನ ವ್ಯವಸ್ಥೆ, ಗಣ್ಯರ ಆಸನಗಳು, ಸಭಿಕರ ಆಸನಗಳು, ಬ್ಯಾರಿಕೇಡ್ ಅಳವಡಿಕೆ, ಉಪಹಾರ, ಕುಡಿಯುವ ನೀರು ವಿತರಣೆಗಾಗಿ ನಿರ್ಮಿಸಲಾಗಿರುವ ಕೌಂಟರ್‍ಗಳು, ಆರೋಗ್ಯ ಸಿಬ್ಬಂದಿ ನಿಯೋಜನೆ, ಭದ್ರತಾ ವ್ಯವಸ್ಥೆಗಳನ್ನು ವೀಕ್ಷಿಸಿದರು.
ಸಮಾರಂಭದ ಸ್ಥಳದ ಪಕ್ಕದಲ್ಲಿಯೇ ಸಾರ್ವಜನಿಕರಿಗಾಗಿ ಉಪಹಾರ ಸಿದ್ದಪಡಿಸಲು ಮಾಡಿರುವ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ಸಚಿವರು ನೀಡಿದರು.
ಮುಖ್ಯಮಂತ್ರಿಗಳು, ಗಣ್ಯರು ಬರಲಿರುವ ಮಾರ್ಗಗಳು, ಸಾರ್ವಜನಿಕರು ಪ್ರವೇಶಿಸುವ ಮುಖ್ಯ ದ್ವಾರ, ವಾಹನಗಳ ನಿಲುಗಡೆ, ಗಣ್ಯರ ಊಟೋಪಾಚಾರಕ್ಕೆ ಕೈಗೊಂಡಿರುವ ವ್ಯವಸ್ಥೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ವೀಕ್ಷಿಸಿ ಸೂಕ್ತ ಮಾರ್ಗದರ್ಶನ ಮಾಡಿದರು.
ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಸಹಕಾರ ಸಪ್ತಾಹ ಸಮಾರೋಪ ಸಮಾರಂಭಕ್ಕೆ ಅಂದಾಜು 30 ರಿಂದ 40 ಸಾವಿರ ಜನರು ಬರುವ ನಿರೀಕ್ಷೆಯಿದೆ. ಈಗಾಗಲೇ 25 ಸಾವಿರ ಆಸನಗಳನ್ನು ಹಾಕಲಾಗಿದೆ. ಇನ್ನೂ 10 ಸಾವಿರ ಜನರಿಗೆ ಆಗುವಷ್ಟು ಹೆಚ್ಚುವರಿ ಆಸನಗಳನ್ನು ಇಟ್ಟುಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮಕ್ಕೆ ಬರುವ ಜನರಿಗೆ ಯಾವುದೇ ಕೊರತೆಯಾಗದಂತೆ ಎಲ್ಲ ವ್ಯವಸ್ಥೆಗಳನ್ನು ಅಧಿಕಾರಿಗಳು ಮಾಡಿದ್ದಾರೆ. ಬರುವ ಜನರಿಗೆ ಉಪಹಾರ, ಕುಡಿಯುವ ನೀರು, ಹಾಲು ಒಕ್ಕೂಟದಿಂದ ಮಜ್ಜಿಗೆ ವಿತರಣೆ ಮಾಡಲಾಗುತ್ತಿದೆ. ಒಟ್ಟಾರೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು ಅಧಿಕಾರಿಗಳು ಆಸಕ್ತಿಯಿಂದ ಕೆಲಸ ಮಾಡಿದ್ದಾರೆ. ಸಿದ್ದತೆಗಳನ್ನು ವೀಕ್ಷಿಸಿದ್ದೇನೆ. ಎಲ್ಲ ವ್ಯವಸ್ಥೆಯನ್ನು ಕೈಗೊಳ್ಳÀಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಹೇಳಿದರು.
ಕ್ರೀಡಾಂಗಣದ ಭೇಟಿಯ ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳೊಂದಿಗೆ ಕಾರ್ಯಕ್ರಮ ಸಂಬಂಧ ಸಮಾಲೋಚನೆ ನಡೆಸಿದರು.
ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ, ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷರಾದ ಹೆಚ್.ಎಸ್. ನಂಜುಂಡಪ್ರಸಾದ್, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ತಹಶೀಲ್ದಾರರಾದ ಗಿರಿಜಾ, ಇತರರು ಇದ್ದರು.
Like this:
Like Loading...
Related