ಮುಖ್ಯಮಂತ್ರಿಗಳ ಗುಂಡ್ಲುಪೇಟೆ ಭೇಟಿ ಕಾರ್ಯಕ್ರಮ ಹಿನ್ನೆಲೆ : ಸಮರ್ಪಕ ಸಿದ್ದತಾ ಕಾರ್ಯನಿರ್ವಹಣೆಗೆ ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿಗೆ ಸಂಬಂಧಿಸಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಏಪ್ರಿಲ್ 21ರಂದು ಗುಂಡ್ಲುಪೇಟೆ ಪಟ್ಟಣಕ್ಕೆ ಮುಖ್ಯಮಂತ್ರಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯನಿರ್ವಹಣೆಗೆ ರಚಿಸಲಾಗಿರುವ ವಿವಿಧ ಸಮಿತಿಗಳ ಅಧಿಕಾರಿಗಳು ಸಮರ್ಪಕವಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಸೂಚನೆ ನೀಡಿದರು.

  ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಮುಖ್ಯಮಂತ್ರಿಗಳ ಭೇಟಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

  ಮುಖ್ಯಮಂತ್ರಿಗಳು ಗುಂಡ್ಲುಪೇಟೆ ಪಟ್ಟಣದಲ್ಲಿ ಗುಂಡ್ಲುಪೇಟೆ ತಾಲೂಕಿಗೆ ಸಂಬಂಧಿಸಿದ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ಬೃಹತ್ ಕಾರ್ಯಕ್ರಮ ಸುಗಮ ನಿರ್ವಹಣೆಗೆ ಅಧಿಕಾರಿಗಳನ್ನೊಳಗೊಂಡ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿಯಲ್ಲಿರುವ ಅಧಿಕಾರಿಗಳು ತ್ವರಿತವಾಗಿ ಎಲ್ಲ ಸಿದ್ದತೆಗಳನ್ನು ಕೈಗೊಳ್ಳಬೇಕೆಂದು ಎಂದರು. 

  ಸುಸಜ್ಜಿತವಾಗಿ ವೇದಿಕೆ ನಿರ್ಮಾಣ, ಗಣ್ಯರಿಗೆ ಶಿಷ್ಟಾಚಾರ ಅನುಸಾರ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ತಾತ್ಕಾಲಿಕ ಶೌಚಾಲಯಗಳ ನಿರ್ಮಾಣ, ವಿದ್ಯುತ್ ಪೂರೈಕೆ, ಇನ್ನಿತರ ವ್ಯವಸ್ಥೆಗಳನ್ನು ಕೈಗೊಳ್ಳಬೇಕು. ಹಸಿರು ತೋರಣಗಳಿಂದ ಅಲಂಕಾರ ಮಾಡಬೇಕು. ರಸ್ತೆ, ಕಾರ್ಯಕ್ರಮ ನಡೆಯುವ ಕ್ರೀಡಾಂಗಣ, ಆಹಾರ ವಿತರಣೆ ಸ್ಥಳ, ಮತ್ತಿತ್ತರೆಡೆ ಸ್ವಚ್ಚತೆ ಕಾಪಾಡಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

  ಆಹ್ವಾನ ಪತ್ರಿಕೆ ಮುದ್ರಣ, ವಿತರಣೆ, ಸ್ವಾಗತ, ಇನ್ನಿತರ ಅಗತ್ಯ ಸಿದ್ದತೆಗೆ ಮುಂದಾಗಬೇಕು. ಈಗಾಗಲೇ ನಿಗದಿ ಪಡಿಸಿರುವ ಸ್ಥಳದಲ್ಲಿ ಸುಸಜ್ಜಿತವಾದ ಹೆಲಿಪ್ಯಾಡ್ ನಿರ್ಮಾಣಕ್ಕೆ ಕ್ರಮವಹಿಸಬೇಕು. ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೊಳ್ಳಲಿರುವ ಕಾಮಗಾರಿ ವ್ಯಾಪ್ತಿಗೆ ಒಳಪಡುವ ಇಲಾಖೆ ಅಧಿಕಾರಿಗಳು ಶೀಘ್ರವೇ ಉದ್ಘಾಟನೆ ಪ್ರಕ್ರಿಯೆಗೆ ಪೂರಕವಾಗಿರುವ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.

  ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ನೇಮಕವಾಗಿರುವ ಇನ್ನಿತರ ಆರೋಗ್ಯ ಸಮಿತಿ, ಆಹಾರ ಮತ್ತು ಕುಡಿಯುವ ನೀರಿನ ಸಮಿತಿ ಸೇರಿದಂತೆ ಎಲ್ಲ ಸಮಿತಿಗಳು ನಿಯೋಜಿತವಾಗಿರುವ ಕರ್ತವ್ಯವನ್ನು ಹೊಣೆಗಾರಿಕೆಯಿಂದ ನಿರ್ವಹಿಸಬೇಕು. ಯಾವುದೇ ಲೋಪಗಳಿಗೆ ಅವಕಾಶವಾಗದಂತೆ ಎಲ್ಲ ಸಿದ್ದತೆಗಳನ್ನು ಪೂರೈಸಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ಸೂಚನೆ ನೀಡಿದರು. 

   ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಡಿವೈಎಸ್‍ಪಿ ಸ್ನೇಹ ರಾಜ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶೃತಿ, ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ತಹಶೀಲ್ದಾರ್ ತನ್ಮಯ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಕಿರಣ್, ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಹೇಶ್, ಚಾಮರಾಜನಗರ ವೈದ್ಯಕೀಯ ಕಾಲೇಜಿನ ಡೀನ್ ಮತ್ತು ನಿರ್ದೇಶಕರಾದ ಡಾ. ಮಂಜುನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ವೆಂಕಟೇಶ್,ಜಂಟಿ ಕೃಷಿ ನಿರ್ದೇಶಕರಾದ ಸುಷ್ಮಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ರಾಜು, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *