ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನಲ್ಲಿ 475 ಕೋಟಿ ರೂ. ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿಗೆ ಚಾಲನೆ ಸೇರಿದಂತೆ ಇನ್ನೂ ಹಲವು ಅಭಿವೃದ್ದಿ ಕಾರ್ಯಗಳ ಉದ್ಘಾಟನೆಯನ್ನು ಇದೇ ಏಪ್ರಿಲ್ 21ರಂದು ಗುಂಡ್ಲುಪೇಟೆ ಪಟ್ಟಣದಲ್ಲಿ ಮುಖ್ಯಮಂತ್ರಿಯವರು ನೆರವೇರಿಸಲಿರುವ ಹಿನ್ನೆಲೆಯಲ್ಲಿ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಶಾಸಕರಾದ ಹೆಚ್.ಎಂ. ಗಣೇಶ್ ಪ್ರಸಾದ್ ಹಾಗೂ ಜಿಲ್ಲಾಧಿಕಾರಿ ಶ್ರೀರೂಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುಂಡ್ಲುಪೇಟೆ ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿಂದು ಮುಖ್ಯಮಂತ್ರಿಗಳು ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗುಂಡ್ಲುಪೇಟೆ ಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ, ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ, ವಾಲ್ಮೀಕಿ ಭವನ, ಬೇಗೂರು ಎ.ಪಿ.ಎಂ.ಸಿ ಹತ್ತಿ ಮಾರುಕಟ್ಟೆ, ತೆರಕಣಾಂಬಿ ಆಸ್ಪತ್ರೆ ಉದ್ಘಾಟನೆ ಸೇರಿದಂತೆ ಇನ್ನಿತರ ಹಲವು ಅಭಿವೃದ್ದಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಲಿದ್ದು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಸಂಪುಟದ ಇನ್ನಿತರ ಮಂತ್ರಿಗಳು, ಗಣ್ಯರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಅಧಿಕಾರಿಗಳು ಯಾವುದೇ ಲೋಪಕ್ಕೆ ಅವಕಾಶವಾಗದಂತೆ ಸಮರ್ಪಕವಾಗಿ ಸಿದ್ದತೆ ಮಾಡಬೇಕೆಂದು ತಿಳಿಸಿದರು.
ಗುಂಡ್ಲುಪೇಟೆ ಪಟ್ಟಣದ ಡಿ. ದೇವರಾಜ ಅರಸು ಕ್ರೀಡಾಂಗಣದಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಕ್ರೀಡಾಂಗಣವನ್ನು ಸಜ್ಜುಗೊಳಿಸಬೇಕು, ವೇದಿಕೆ, ಸಾರ್ವಜನಿಕರ ಆಸನ, ಶಾಮಿಯಾನ, ಉಪಹಾರ, ಕುಡಿಯುವ ನೀರು, ಸ್ವಚ್ಚತೆ, ವಾಹನಗಳ ನಿಲುಗಡೆ, ಸಂಚಾರ ದಟ್ಟಣೆ ನಿರ್ವಹಣೆ ಸೇರಿದಂತೆ ಕಾರ್ಯಕ್ರಮಕ್ಕೆ ಪೂರಕವಾಗಿರುವ ಎಲ್ಲ ಏರ್ಪಾಡುಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಶಾಸಕರು ಹಾಗೂ ಜಿಲ್ಲಾಧಿಕಾರಿಯವರು ಸೂಚಿಸಿದರು.
ಇಲಾಖೆ, ನಿಗಮಗಳು ತಮ್ಮ ವ್ಯಾಪ್ತಿಯಲ್ಲಿ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡುವುದಿದ್ದಲ್ಲಿ ಮುಂಚಿತವಾಗಿಯೇ ಮಾಹಿತಿ ನೀಡಿ ಕಾರ್ಯಕ್ರಮದಂದು ವಿತರಣೆಗೆ ಸಿದ್ದತೆ ಮಾಡಿಕೊಳ್ಳಬೇಕು. ಈಗಾಗಲೇ ಪಟ್ಟಿ ಮಾಡಿಕೊಂಡಿರುವ ಅಭಿವೃದ್ದಿ ಕಾಮಗಾರಿ ಹೊರತುಪಡಿಸಿ ಇಲಾಖೆ ವ್ಯಾಪ್ತಿಗೆ ಸೇರಿದ ಕಟ್ಟಡಗಳು ಪೂರ್ಣಗೊಂಡಿದ್ದಲ್ಲಿ, ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಬೇಕಿದ್ದಲ್ಲಿ ವಿವರವನ್ನು ಸಲ್ಲಿಸಬೇಕು ಎಂದು ಶಾಸಕರಾದ ಹೆಚ್.ಎಂ. ಗಣೇಶ್ ಪ್ರಸಾದ್ ಹಾಗೂ ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಶ್ರೀರೂಪ ಅವರು ಮಾತನಾಡಿ ಮುಖ್ಯಮಂತ್ರಿಗಳ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಮಿತಿ ರಚಿಸಿ ಹೊಣೆಗಾರಿಕೆ ನೀಡಲಾಗುವುದು. ಆ ಪ್ರಕಾರ ಅಧಿಕಾರಿಗಳು ಕಾರ್ಯೋನ್ಮುಖರಾಗಿ ಸಿದ್ದತೆಗಳ ಬಗ್ಗೆ ಉಸ್ತುವಾರಿ ವಹಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮ ಯಶಸ್ವಿಗೊಳಸಬೇಕು. ಫಲಾನುಭವಿಗಳಿಗೆ ಸೌಲಭ್ಯ ವಿತರಿಸುವ ಕಾರ್ಯಕ್ರಮವಿದ್ದಲ್ಲಿ ಪೂರ್ಣಪಟ್ಟಿಯನ್ನು ಕಳುಹಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ತಹಶೀಲ್ದಾರ್ ತನ್ಮಯ್, ಡಿವೈಎಸ್‍ಪಿ ಸ್ನೇಹ ರಾಜ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಕಿರಣ್, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯಪಾಲಕ ಎಂಜಿನಿಯರ್ ಪ್ರದೀಪ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರಾದ ಸುರೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮುನಿರಾಜು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೆಚ್.ಎಸ್. ಬಿಂದ್ಯಾ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ವೆಂಕಟೇಶ್, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಗುರುಪ್ರಸಾದ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಹೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಸುರೇಶ್, ಇನ್ನಿತರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯ ಬಳಿಕ ಶಾಸಕರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಕಾರ್ಯಕ್ರಮ ನಡೆಯುವ ಡಿ. ದೇವರಾಜ ಅರಸು ಕ್ರೀಡಾಂಗಣಕ್ಕೆ ಭೇಟಿ ನೀಡಿ ಅಲ್ಲಿ ನಿರ್ಮಾಣ ಮಾಡಲಿರುವ ವೇದಿಕೆ, ಸಭಿಕರ ಆಸನ, ಉಪಹಾರ ಕೌಂಟರ್, ಶೌಚಾಲಯಗಳ ನಿರ್ಮಾಣ, ವಾಹನಗಳ ನಿಲುಗಡೆ ಸಂಬಂಧ ಸೂಚನೆ ನೀಡಿದರು.
ಹೆಲಿಪ್ಯಾಡ್ ನಿರ್ಮಾಣ ಸ್ಥಳ, ಉದ್ಘಾಟನೆಗೆ ಸಿದ್ದವಾಗಿರುವ ವಾಲ್ಮೀಕಿ ಭವನ, ಇನ್ನಿತರ ಕಡೆ ಭೇಟಿ ನೀಡಿ ಪರಿಶೀಲಿಸಿದರು.
Like this:
Like Loading...
Related