ವಿದ್ಯಾಗಣಪತಿ ಮಂಡಳಿಯ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮ ಹಿನ್ನೆಲೆ : ಪೂರ್ವಭಾವಿ ಸಭೆ

ಚಾಮರಾಜನಗರ: ಚಾಮರಾಜನಗರ ಪಟ್ಟಣದ ರಥದ ಬೀದಿಯಲ್ಲಿ ಶ್ರೀ ವಿದ್ಯಾಗಣಪತಿ ಮಂಡಳಿಯವರಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯ ವಿಸರ್ಜನೆ ಕಾರ್ಯಕ್ರಮವು ಇದೇ ಅಕ್ಟೋಬರ್ 13ರಂದು ನೆರವೇರಲಿದ್ದು, ಇದಕ್ಕೆ ಪೂರಕವಾದ ಮುಂಜಾಗ್ರತೆ ಹಾಗೂ ಸಿದ್ದತೆಗಳ ಸಂಬಂಧ ಇಂದು ಸಭೆ ನಡೆಯಿತು.

  ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರ ಅಧ್ಯಕ್ಷತೆಯಲ್ಲಿ ವಿವಿಧ ಕೋಮಿನ ಮುಖಂಡರು, ಪ್ರತಿನಿಧಿಗಳು, ಅಧಿಕಾರಿಗಳ ಸಭೆ ನಡೆಯಿತು.  

  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಅವರು ಮಾತನಾಡಿ ಕಳೆದ ವರ್ಷ ಗಣಪತಿ ವಿಸರ್ಜನಾ ಮೆರವಣಿಗೆಯು ಎಲ್ಲ ಕೋಮಿನವರ ಸಹಕಾರದಿಂದ ಶಾಂತಿಯುತವಾಗಿ ನಡೆಯಿತು. ಈ ಬಾರಿಯೂ ಇದೇ ಸಹಕಾರ ನೀಡಬೇಕು. ಸಾಮರಸ್ಯದಿಂದ ನಡೆದುಕೊಂಡು ಬಂದಿರುವ ವಿಸರ್ಜನಾ ಕಾರ್ಯಕ್ರಮ ಮುಂದುವರೆಯಬೇಕು ಎಂದರು. 

   ಗಣಪತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಬಂದೋ ಬಸ್ತ್‍ಗಾಗಿ ಸಕಲ ಸಿದ್ದತೆ ಮಾಡಲಾಗಿದೆ. ಸಿಸಿ ಕ್ಯಾಮರಾಗಳನ್ನು ವಿವಿಧೆಡೆ ಅಳವಡಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಲಾಗುತ್ತಿದೆ. ಮುನ್ನೆಚ್ಚರಿಕೆಯಾಗಿ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆಂಬುಲೆನ್ಸ್, ಅಗ್ನಿಶಾಮಕ ದಳ, ಇನ್ನಿತರ ಇಲಾಖೆಗಳ ಅಗತ್ಯ ಸೇವೆಗಳು ನಿಯೋಜನೆಯಾಗಲಿವೆ ಎಂದು ಡಾ. ಬಿ.ಟಿ. ಕವಿತಾ ಅವರು ತಿಳಿಸಿದರು.

  ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಮಾತನಾಡಿ ಗಣೇಶ ವಿಸರ್ಜನಾ ಮೆರವಣಿಗೆಯಂದು ಸ್ವಚ್ಚತೆಗೆ ನಗರಸಭೆ ಹೆಚ್ಚು ಗಮನಹರಿಸಬೇಕು. ಕುಡಿಯುವ ನೀರು ಸರಬರಾಜು ಸಮರ್ಪಕವಾಗಿ ಆಗಬೇಕು. ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಗುಂಡಿ ಮುಚ್ಚುವ ಕಾರ್ಯ ಶೀಘ್ರವಾಗಿ ಮುಗಿಸಬೇಕು. ಗಣಪತಿ ವಿಸರ್ಜನೆ ಮಾಡುವ ದೊಡ್ಡರಸನ ಕೊಳದಲ್ಲಿ ಬಾಕಿ ಇರುವ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಿದ್ದಗೊಳಿಸಬೇಕು ಎಂದರು. 

  ಗಣಪತಿ ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ವಿದ್ಯುತ್ ತಂತಿಗಳು ಅಡಚಣೆಯಾಗದಂತೆ ನೋಡಿಕೊಳ್ಳಲು ವಿದ್ಯುತ್ ಸರಬರಾಜು ನಿಗಮದ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು. ಕಾನೂನು ಸುವ್ಯವಸ್ಥೆಗಾಗಿ ಜಿಲ್ಲೆಯ ತಹಶೀಲ್ದಾರರನ್ನು ಸೆಕ್ಟರ್ ಮ್ಯಾಜಿಸ್ಟೇಟ್ ಗಳಾಗಿ ನಿಯೋಜಿಸಲಾಗುತ್ತದೆ. ಸಂಭ್ರಮ ಶಾಂತಿಯುತವಾಗಿ ಈ ಹಿಂದಿನಂತೆ ಈ ಬಾರಿಯೂ ಸೌಹಾರ್ದತಯುತವಾಗಿ ಮೆರವಣಿಗೆ ವಿಸರ್ಜನಾ ಕಾರ್ಯಕ್ರಮ ನಡೆಯಲು ಎಲ್ಲರು ಸಹಕರಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಮನವಿ ಮಾಡಿದರು.

   ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ ಅವರು ಮಾತನಾಡಿ ಮೆರವಣಿಗೆಯು ಹಬ್ಬದ ಸಂಭ್ರಮವಾಗಿದ್ದು ನಗರದ ಜನತೆಗೆ ನಗರಸಭೆಯು ಕುಡಿಯುವ ನೀರು, ಸ್ವಚ್ಚತೆ ಕೈಗೊಳ್ಳÀಬೇಕು. ಎಲ್ಲ ಜನರು ಅಣ್ಣ ತಮ್ಮಂದಿರಂತೆ ಇದ್ದೇವೆ. ಸೌಹಾರ್ದತೆ, ನೆಮ್ಮದಿ, ಶಾಂತಿಯಿಂದ ಗಣಪತಿ ವಿಸರ್ಜನಾ ಕಾರ್ಯ ನೆರವೇರಲಿ. ಇದಕ್ಕೆ ಎಲ್ಲರ ಸಹಕಾರ ಇರಲಿದೆ ಎಂದರು. 

  ಮುಖಂಡರಾದ ಶಿವು, ಅಯೂಬ್ ಖಾನ್, ಬಂಗಾರು, ಚಾ.ರಂ. ಶ್ರೀನಿವಾಸಗೌಡ, ಅಬ್ರಾರ್ ಅಹಮ್ಮದ್ ಅವರು ಮಾತನಾಡಿದರು. 

   ಶ್ರೀ ವಿದ್ಯಾಗಣಪತಿ ಮಂಡಳಿಯ ಮುಖ್ಯಸ್ಥರಾದ ಶಿವಣ್ಣ, ಇನ್ನಿತರ ಪದಾಧಿಕಾರಿಗಳು, ವಿವಿಧ ಕೋಮಿನ ಮುಖಂಡರು, ಡಿವೈಎಸ್‍ಪಿ ಸ್ನೇಹ, ಧಮೇಂದ್ರ, ತಹಶೀಲ್ದಾರ್ ಗಿರಿಜಾ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಸುಧಾ, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಶಿವಾಜಿರಾವ್ ಪವಾರ್, ಪರಿಸರ ಇಂಜಿನಿಯರ್ ರೂಪಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್. ಚಿದಂಬರ, ಇನ್ನಿತರ ಅಧಿಕಾರಿಗಳು ಸಬೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *