ಅರಳಬೇಕಾದ ಹೂಬನ ನರಳಿ ಬಾಡಿ ಮುರುಟಿತೆ?!,
ಬದುಕು ಬರಡಾಯಿತೇ?!, ಹಸಿರಾಗಬೇಕಿದ್ದ ವನಸಿರಿಯ ಜೀವನ ಉಸಿರಿಲ್ಲದೆ ಒಣಗಿತೆ?!,
ಕಣ್ಣ ಹನಿ ತೊರೆಯಾಗಿದೆ-ತೊರೆಯುವುದಾರೂ ಹೇಗೆ ಹೆತ್ತೊಡಲ ಆಕ್ರಂದನ ಮುಗಿಲು ಸೇರಿದೆ, ಜೀವ ನೊಂದಿದೆ-ಒಡಲು ಬೆಂದಿದೆ, ಹೆತ್ತ ಕರುಳು ದಿಕ್ಕು ಕಾಣದೆ ಕಂಗಾಲಾಗಿದೆ.
ವಿಷದ ಕಣ್ಣುಗಳಿಗೆ ಆಹಾರವಾಗಬೇಕಿತ್ತೇ ಹೆಣ್ಣು ಜೀವ, ಪ್ರಾಣಪಕ್ಷಿ ಹಾರುವಾಗ ಎಷ್ಟು ಅನುಭವಿಸಿತೋ ಭೂಮಿ ತೂಕದ ನೋವ, ಬೆಳಕು ಕೊಡುವ ಅಕ್ಷರಾಲಯದಲ್ಲಿ ಅವಿತು ಕುಳಿತಿದ್ದನೇ ಮೃತ್ಯು ಮೋಸಗಾರ, ಕರುಣೆ ಇಲ್ಲದ ಹಂತಕ ಚೋರ, ಇರಿದ ರಭಸಕೆ
ಹರಿದ ನೆತ್ತರು-ಹೀರಿದನೇ ಜೀವದ ಉಸಿರು,
ಇರಿಯುವ ಆಯುಧಕ್ಕಾದರೂ ದಯೆ-ಧರ್ಮವನ್ನು ಅರಿಯದಾಯಿತೇ, ವಿಧಿಯೇ ನೀನು ಬಲು ಕ್ರೂರಿ, ಜೀವದ್ರವ್ಯ ಹೀರಲು ಆಗಿರುವೆಯ ಚಾಕು-ಚೂರಿ.
ಹತ್ಯೆ ಮಾಡುವಷ್ಟು ಕ್ರೂರಿಯಾಯಿತೇ ನರನ ಮನಸು, ಹರನು ಕಾಯದೆ; ಕಾರುಣ್ಯದ ಮೂರನೇ ಕಣ್ಣ ತೆರೆಯದೆ ಯಾಕೆ ಈ ಬಗೆಯ ಮುನಿಸು, ಕಾಣುತ್ತಿದ್ದ ಕನಸುಗಳೆಲ್ಲ ನೀರಿನಲ್ಲಿ ಹೋಮ, ಬೆನ್ನತ್ತದೆ ಬಿಡುವುದೇ-ಉಳಿಸುವುದೇ ಮಾಡಿದ ಪಾಪ-ಕರ್ಮ.
ಮಣ್ಣಾಯಿತು ಬದುಕು-ಮಸಿಯಾಯಿತು ಬೆಳಕು, ವಿಕೃತ ಮನಸ್ಸಿನ ಜೀವಕೆ, ಪ್ರೀತಿಯೆಂಬ ಪಾಶದ ಕುಣಿಕೆ, ಬಲಿಯಾಗಬೇಕಾಯಿತೆ ವಿಧಿಕೋಪಕೆ-ಅಯ್ಯೋ ಕರುಣೆ ಇಲ್ಲವೇ ಕಾಯುವ ದೈವಕೆ, ಶಾಂತಿ ಕೋರಲು ನಿನ್ನ ಆತ್ಮಕೆ, ಕಣ್ಣ ಹನಿಗಳೇ ಕಾಣಿಕೆ, ಅಂತಃಕರಣ ಬಗೆದು ಪ್ರೀತಿಯ ರಸ ಕುಡಿಯಲಾಗುದು-ಜೀವ ಎಲ್ಲರದು ಜೀವವೇ, ನೋವು ಎಲ್ಲರಿಗೂ ಒಂದೇ-ಕಣ್ಣೀರು ಭಾವನೆಗಳು ಬಗೆದಾಗ ಉಕ್ಕಿ ಬರುವ ಜೀವನದಿ.
ಹೆಣ್ಣು ಸಮಾಜದ ಕಣ್ಣು ಕೇಡಾದರೆ ಗಾಯದ ಹುಣ್ಣು, ಸೇರುವುದು ಜಗತ್ತು ಮಣ್ಣು ಎಂದಳು ನನ್ನವ್ವ ಸಾಕವ್ವನೇಹ ಹಿರೇಮಠ ಅವರಿಗೆ ಭಾವಪೂರ್ಣ ನಮನಗಳು-ಬಾಂಧವ್ಯಪೂರ್ಣ ಶ್ರದ್ಧಾಂಜಲಿ.

-ಪರಮೇಶ ಕೆ.ಉತ್ತನಹಳ್ಳಿ,
ಕನ್ನಡ ಉಪನ್ಯಾಸಕ,
ಹವ್ಯಾಸಿ ಬರಹಗಾರ, ಮೈಸೂರು.