- ರಾಜ್ಯ ಬಜೆಟ್‌ನಲ್ಲಿ ಉಡುತೊರೆ ಹಳ್ಳ ಯೋಜನೆಗೆ 490 ಕೋಟಿ ಘೋಷಣೆ : ಮುಖ್ಯಮಂತ್ರಿಗಳಿಗೆ ಅಭಿನಂದನೆ
ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರ ಬಹುಕಾಲದ ಬೇಡಿಕೆಯಾದ ಉಡುತೊರೆ ಹಳ್ಳ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚೆಗೆ ಸದನದಲ್ಲಿ ಮಂಡಿಸಿದ ಬಜೆಟ್‌ನಲ್ಲಿ 490 ಕೋಟಿ ರೂ.ಘೋಷಣೆ ಮಾಡಿರುವುದಕ್ಕೆ ಮಾರ್ಟಳ್ಳಿ ಭಾಗದ ಸರ್ವ ಜನರ ಪರವಾಗಿ ಮುಖಂಡ ಕೆ.ಜಾನ್‌ಡಾನ್ ಬೋಸ್ಕೊ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹನೂರು ತಾಲೂಕಿನ ರಾಮಾಪುರ ಹೋಬಳಿ ಜನತೆಗೆ ಅನುಕೂಲವಾಗಲಿದೆ. ಈ ಯೋಜನೆಯಿಂದ ಮಾರ್ಟಳ್ಳಿ ಭಾಗದ ಕೆಲ ಕಟ್ಟೆಗಳಿಗೆ ಕಾವೇರಿ ನೀರು ತುಂಬುವ ಮೂಲಕ ಈ ಭಾಗದ ಅಂತರ್ಜಲ ವೃದ್ಧಿಯಾಗುತ್ತದೆ. ಆಗಾಗಿ ಈ ಯೋಜನೆಗೆ ಬಜೆಟ್‌ನಲ್ಲಿ 490 ಕೋಟಿ ರೂ. ಘೋಷಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ, ಸಂಸದ ಸುನಿಲ್‌ಬೋಸ್, ಕ್ಷೇತ್ರದ ಶಾಸಕ ಎಂ.ಆರ್. ಮಂಜುನಾಥ್, ಮಾಜಿ ಶಾಸಕರಾದ ಆರ್.ನರೇಂದ್ರ, ಪರಿಮಳನಾಗಪ್ಪ, ಹಾಗೂ ಅಧಿಕಾರಿಗಳಿಗೆ ಈ ಮೂಲಕ ಮಾರ್ಟಳ್ಳಿ ಭಾಗದ ಸರ್ವ ಜನರ ಪರವಾಗಿ ತುಂಬು ಹೃದಯ ಕೃತಜ್ಞತೆಯನ್ನು ಈ ಮೂಲಕ ಸಲ್ಲಿಸಲಾಗುವುದು ಎಂದರು.
ಅಲ್ಲದೇ ಈ ಯೋಜನೆ ಜಾರಿಯಾಗಲು ಕೆಂಪಯ್ಯನಹಟ್ಟಿ ಗ್ರಾಮದ 5ನೇ ತರಗತಿ ವಿದ್ಯಾರ್ಥಿನಿ ವರ್ಣಿಕಾ ಕಳೆದ ಜುಲೈನಲ್ಲಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು ಈ ಪತ್ರವು ಕೂಡ ಯೋಜನೆಯನ್ನು ಕೈಗೆತ್ತಿಕೊಳ್ಳಲು ಕಾರಣವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಗಸ್ಟೀನ್, ರಾಮಲಿಂಗಂ, ಅಂತೋಣಿ, ಪಾಕಿಯಂ, ಜೆಪಮಲೈ, ಸಮ್ಮನಹುನಾದನ್, ಇನ್ನಾಸಿಮುತ್ತು, ಪೌಲ್‌ರಾಜ್ ಹಾಜರಿದ್ದರು.