- ಭಕ್ತಾಧಿಗಳಿಗೆ ಸಮರ್ಪಕ ಮೂಲ ಸೌಲಭ್ಯ ಕಲ್ಪಿಸಲು ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಸೂಚನೆ
ಚಾಮರಾಜನಗರ: ಯಳಂದೂರು ತಾಲೂಕಿನ ಪ್ರಸಿದ್ದ ಯಾತ್ರಾ ಕ್ಷೇತ್ರ ಬಿಳಿಗಿರಿರಂಗನಬೆಟ್ಟದಲ್ಲಿ ಜನವರಿ 16ರಂದು ನಡೆಯಲಿರುವ ಸಂಕ್ರಾಂತಿ ರಥೋತ್ಸವ ಚಿಕ್ಕಜಾತ್ರೆಗೆ ಬರುವ ಭಕ್ತಾಧಿಗಳಿಗೆ ಸಮರ್ಪಕವಾಗಿ ಮೂಲ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಸೂಚನೆ ನೀಡಿದರು.
ಬಿಳಿಗಿರಿರಂಗನಬೆಟ್ಟದ ಅತಿಗಣ್ಯರ ಪ್ರವಾಸಿ ಮಂದಿರದಲ್ಲಿಂದು ನಡೆದ ಸಂಕ್ರಾಂತಿ ರಥೋತ್ಸವ (ಚಿಕ್ಕ ಜಾತ್ರೆ) ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಕ್ರಾಂತಿ ಹಬ್ಬದ ಮರುದಿನವೇ ಸಂಕ್ರಾಂತಿ ರಥೋತ್ಸವ ನೆರವೇರಲಿದೆ. ಜನವರಿ 16ರಂದು ಸಂಕ್ರಾಂತಿ ರಥೋತ್ಸವ ನಡೆಯುವುದರಿಂದ ಜನವರಿ 13 ರಿಂದ 18ರವರೆಗೆ ಭಕ್ತಾಧಿಗಳು ಹೆಚ್ಚು ಸಂಖ್ಯೆಯಲ್ಲಿ ದೇವಾಲಯಕ್ಕೆ ಬರಲಿದ್ದಾರೆ. ಹೀಗಾಗಿ ಈ ಸಂದರ್ಭದಲ್ಲಿ ಬಿಳಿಗಿರಿರಂಗನಾಥ ಕ್ಷೇತ್ರದಲ್ಲಿ ಮೂಲ ಸೌಕರ್ಯಗಳಿಗೆ ಯಾವುದೇ ಕೊರತೆÉಯಾಗಬಾರದು. ಈಗಿನಿಂದಲೇ ಜಾತ್ರಾ ಮಹೋತ್ಸವಕ್ಕೆ ಅವಶ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಶುದ್ದ ಕುಡಿಯುವ ನೀರು ಪೂರೈಸಬೇಕು. ಈಗಾಗಲೇ ಇರುವ ತೊಂಬೆ, ಕೊಳವೆಬಾವಿಯಂತಹ ಇನ್ನಿತರ ನೀರಿನ ಮೂಲಗಳನ್ನು ಪರೀಕ್ಷಿಸಿ ಶುದ್ದತೆಯ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಚಾಮುಲ್ ನಿಂದ ಶುದ್ದ ಕುಡಿಯುವ ನೀರಿನ ಟ್ಯಾಂಕರ್ ಗಳನ್ನು ತರಿಸಿಕೊಳ್ಳಲು ಸೂಕ್ತ ಕ್ರಮವಹಿಸಬೇಕು. ತಾತ್ಕಾಲಿಕವಾಗಿ ಇತರೆ ವಾಟರ್ ಟ್ಯಾಂಕ್‍ಗಳನ್ನು ಇರಿಸಿಕೊಳ್ಳಬೇಕು. ನೀರಿಗೆ ಎಲ್ಲಿಯೂ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕೆಂದು ಶಾಸಕರು ನಿರ್ದೇಶನ ನೀಡಿದರು.
ಕ್ಷೇತ್ರದಲ್ಲಿ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗುವುದರಿಂದ ಶುಚಿತ್ವದ ಕಡೆ ಆದ್ಯ ಗಮನಹರಿಸಬೇಕಿದೆ. ಈಗಿರುವ ಶೌಚಾಲಯಗಳ ನಿರ್ವಹಣೆ ಜೊತೆಗೆ ನಗರಸಭೆಗಳಲ್ಲಿ ಲಭ್ಯವಿರುವ ತಾತ್ಕಾಲಿಕ ಮೊಬೈಲ್ ಶೌಚಾಲಯಗಳನ್ನು ಅಳವಡಿಸಬೇಕು. ಹೆಚ್ಚುವರಿಯಾಗಿ ಪೌರಕಾರ್ಮಿಕರನ್ನು ಜಾತ್ರಾ ಸಂದರ್ಭದಲ್ಲಿ ನಿಯೋಜಿಸಬೇಕು. ಕಸ ವಿಲೇವಾರಿಗೆ ಅಗತ್ಯವಿರುವಷ್ಟು ವಾಹನಗಳನ್ನು ನಿಯೋಜನೆ ಮಾಡಬೇಕು. ಕ್ಷೇತ್ರದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು ಎಂದರು.
ಜಾತ್ರೆ ವೇಳೆ ವಾಹನಗಳ ಸಂಖ್ಯೆಯು ಹೆಚ್ಚಾಗಲಿದೆ. ಕ್ಷೇತ್ರಕ್ಕೆ ಬರುವ ರಸ್ತೆಯ ಎಡ ಹಾಗೂ ಬಲ ಭಾಗದಲ್ಲಿ ಇರುವ ಹಳ್ಳ ಕೊಳ್ಳಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಲೋಕೋಪಯೋಗಿ ಇಲಾಖೆ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಿ ಜಾತ್ರೆ ವೇಳೆಗೆ ಪೂರ್ಣಗೊಳಿಸಬೇಕು. ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿಕೊಡಬೇಕು ಎಂದು ಶಾಸಕರು ತಿಳಿಸಿದರು.
ಚಿಕ್ಕಜಾತ್ರೆಗೆ ಹೆಚ್ಚುವರಿ ಬಸ್ಸುಗಳು ಕಾರ್ಯಾಚರಣೆಯಾಗಬೇಕು. ಕ್ಷೇತ್ರದಲ್ಲಿ ನಿರಂತರ ವಿದ್ಯುತ್ ಪೂರೈಕೆಯಾಗಬೇಕು. ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಬೇಕು. ರೇಷ್ಮೆ ಇಲಾಖೆ ಆವರಣ, ಇನ್ನಿತರ ಕಡೆ ವಾಹನಗಳ ನಿಲುಗಡೆಗೆ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಬೇಕು. ಜಾತ್ರೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ತಾತ್ಕಾಲಿಕ ಆರೋಗ್ಯ ಶಿಬಿರ ತೆರೆದು ಅಗತ್ಯ ಸಿಬ್ಬಂದಿ, ಔಷದೋಪಚಾರಗಳಿಗೂ ಕ್ರಮವಹಿಸಬೇಕು ಎಂದು ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರು ಸೂಚನೆ ನೀಡಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಎಚ್.ವಿ. ಚಂದ್ರು, ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಗುರುಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಡಿವೈಎಸ್‍ಪಿ ಎಂ. ಧರ್ಮೇಂದ್ರ, ತಹಶೀಲ್ದಾರ್ ನಯನ, ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜೆ. ಶ್ರೀನಿವಾಸ್, ಸದಸ್ಯರಾದ ಕೇತಮ್ಮ, ಸ್ಪೂರ್ತಿ ನಾಗೇಶ್, ಎಂ. ಸುರೇಶ್, ರಾಜಣ್ಣ, ವೆಂಕಟರಾಮು, ಸಿದ್ದರಾಜು, ವಿ. ನಾರಾಯಣಸ್ವಾಮಿ, ಇನ್ನಿತರ ಮುಖಂಡರು, ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಪ್ರಾದೇಶಿಕ ಸಾರಿಗೆ ಅಧಿಕಾರಿ ಗಾಯತ್ರಿ, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿಯರ್ ಪುರುಷೋತ್ತಮ್, ಇನ್ನಿತರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Like this:
Like Loading...
Related