ಚಾಮರಾಜನಗರ: ಚಾಮರಾಜನಗರ ತಾಲ್ಲೂಕಿನ ಗ್ರಾಮವೊಂದರಲ್ಲಿ ಬಹಿಷ್ಕಾರ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಇಂದು ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆ ನಡೆಸಿ ತಿಳಿವಳಿಕೆ ನೀಡಿದ್ದಾರೆ.
ಕರ್ನಾಟಕ ಮಾನವ ಹಕ್ಕುಗಳ ಆಯೋಗ ಫೆಬ್ರವರಿ 1 ರಂದು ರಂದು ಚಾಮರಾಜನಗರದಲ್ಲಿ ನಡೆಸಿದ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ವಿಲೇವಾರಿ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗಿನ ಸಂವಾದ ಸಭೆಯಲ್ಲಿ ದೂರುದಾರರೊಬ್ಬರು ತಮಗೆ ಬಹಿಷ್ಕಾರ ಹಾಕಿದ್ದಾರೆಂದು ನೀಡಿದ ದೂರಿನ ಹಿನ್ನೆಲೆಯಲ್ಲಿ ಆಯೋಗವು ಈ ಬಗ್ಗೆ ಪರಿಶೀಲಿಸಲು ಸೂಚಿಸಿತ್ತು. ಈ ಕಾರಣದಿಂದ ಗ್ರಾಮಕ್ಕೆ ಭೇಟಿ ನೀಡಲಾಗಿತ್ತು.
ಸಭೆಯಲ್ಲಿ ದೂರುದಾರರು ಹಾಗೂ ಗ್ರಾಮದ ಮುಖಂಡರು, ಹಿರಿಯರೊಂದಿಗೆ ಸಮಾಲೋಚಿಸಲಾಯಿತು.
ಸಾಮಾಜಿಕ ಬಹಿಷ್ಕಾರ ಸಂವಿಧಾನತ್ಮಾಕವಾಗಿ ನಿಷೇಧವಾಗಿದ್ದು, ಇಂತಹ ಆಚರಣೆಗಳು ನಡೆಯಬಾರದು. ವೈಮನಸ್ಸು ಉಂಟಾಗಿದ್ದರೆ ಅವುಗಳನ್ನು ಕಾನೂನಾತ್ಮಕವಾಗಿ ಪರಿಹರಿಸಿಕೊಳ್ಳಬೇಕು ಎಂದು ಸಲಹೆ ನೀಡಲಾಯಿತು.
ಗ್ರಾಮ ಠಾಣೆಗಳು, ರಸ್ತೆ, ನಿವೇಶನಗಳು, ವಸತಿ ಸಂಬಂಧಿತ ಸಮಸ್ಯೆಗಳಿದ್ದರೆ ಸಂಬಂಧಪಟ್ಟ ಇಲಾಖೆಗಳಿಂದ ಅಧಿಕಾರಿಗಳ ಗಮನಕ್ಕೆ ತಂದು ಇತ್ಯರ್ಥಪಡಿಸಿಕೊಳ್ಳಬೇಕು. ವ್ಯಕ್ತಿ, ಕುಟುಂಬಗಳಿಗೆ ಸಾಮಾಜಿಕ ಭಾವನೆಗಳಿಗೆ ಧಕ್ಕೆ ತರುವಂತಹ ಚಟುವಟಿಕೆಗಳಿಗೆ ಅವಕಾಶ ನೀಡಬಾರದೆಂದು ತಿಳಿವಳಿಕೆ ನೀಡಲಾಯಿತು.
ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಉದೇಶ, ತಹಶೀಲ್ದಾರ್ ಬಸವರಾಜು, ಕೊಳ್ಳೇಗಾಲ ಡಿವೈಎಸ್‍ಪಿ ಎಂ. ಧರ್ಮೇಂದ್ರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮಲ್ಲಿಕಾರ್ಜುನ್ ಸಭೆಯಲ್ಲಿ ಇದ್ದರು.