ಸೆ. 27ರಂದು ಕೊಳ್ಳೇಗಾಲ ತಾಲ್ಲೂಕಿನ ಅರೆಪಾಳ್ಯ ಗ್ರಾಮದಲ್ಲಿ ಬಿಎಸ್‍ಎನ್‍ಎಲ್ 4ಜಿ ಸ್ಯಾಚುರೇಶನ್ ಟವರ್ ಉದ್ಘಾಟನೆ

ಚಾಮರಾಜನಗರ: ಪ್ರಧಾನಮಂತ್ರಿ ನರೇಂದ್ರ ಮೋದೀಜಿಯವರು ಸೆಪ್ಟೆಂಬರ್ 27ರಂದು ಬೆಳಿಗ್ಗೆ 10 ರಿಂದ 12 ಗಂಟೆಯೊಳಗೆ ಒಡಿಶಾದ ಬೆಹಾರ್ಂಪುರದಲ್ಲಿ ಬಿಎಸ್‍ಎನ್‍ಎಲ್ 4ಜಿ ಸ್ಯಾಚುರೇಶನ್ ಸೈಟ್‍ಗಳು ಮತ್ತು 4ಜಿ ಸೇವೆಯನ್ನು ರಾಷ್ಟ್ರವ್ಯಾಪಿ ಉದ್ಘಾಟಿಸಲಿದ್ದು, ಇದರಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಅರೆಪಾಳ್ಯ ಗ್ರಾಮದ 4ಜಿ ಟವರ್ ಸಹ ಸೇರಿದೆ. 

  ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಅರೆಪಾಳ್ಯ ಗ್ರಾಮದಲ್ಲಿ ಉದ್ಘಾಟನೆಯಾಗುತ್ತಿರುವ 4ಜಿ ಟವರ್ ಜಿಲ್ಲೆಯ ಪ್ರಮುಖ ಸ್ಯಾಚುರೇಶನ್ ತಾಣಗಳಲ್ಲಿ ಒಂದಾಗಿದೆ. ವರ್ಚುವಲ್ ಮೂಲಕ ನಡೆಯಲಿರುವ ಕಾರ್ಯಕ್ರಮವು ದೇಶದ ಸುಮಾರು 150 ಸ್ಥಳಗಳಲ್ಲಿ ನೇರ ಪ್ರಸಾರವಾಗಲಿದೆ. ವರ್ಚುವಲ್ ಪ್ರಸಾರದ ಮೂಲಕ ಅರೆಪಾಳ್ಯದಲ್ಲಿಯೂ ನಡೆಯಲಿದ್ದು, ಈ ಸ್ಥಳೀಯ ಕಾರ್ಯಕ್ರಮದಲ್ಲಿ ಜನ ಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

  ಡಿಜಿಟಲ್ ಭಾರತ್ ನಿಧಿ (ಡಿಬಿಎನ್) ಅಡಿಯಲ್ಲಿ 92,000ಕ್ಕೂ ಹೆಚ್ಚು ಹೊಸ 4ಜಿ ಕೇಂದ್ರಗಳನ್ನು ರಾಷ್ಟ್ರವ್ಯಾಪಿ ಸ್ಥಾಪಿಸಲಾಗುತ್ತಿದ್ದು, ಇದರ ಮೂಲಕ 24,680 ಹಳ್ಳಿಗಳಿಗೆ ಮೊಟ್ಟಮೊದಲ ಬಾರಿಗೆ ವೇಗವಾದ ಇಂಟರ್ನೆಟ್ ಸೇವೆ ಲಭ್ಯವಾಗಲಿದೆ.

  ಚಾಮರಾಜನಗರ ಜಿಲ್ಲೆಯಾದ್ಯಂತ 100ಕ್ಕೂ ಹೆಚ್ಚು ತಾಣಗಳನ್ನು 4ಜಿ ಗೆ ಅಪ್‍ಗ್ರೇಡ್ ಮಾಡಲಾಗಿದೆ. ಈಗಾಗಲೇ ಕುಂಭೇಶ್ವರ ಕಾಲೋನಿ, ಮುರಟಿಪಾಳ್ಯ, ಸೊತ್ತನಹುಂಡಿ, ಬಂಡೀಪುರ, ಕೊಳ್ಳೇಗಾಲ ತಾಲ್ಲೂಕಿನ ಅರೆಪಾಳ್ಯ ಸೇರಿದಂತೆ ಹಲವು ಕಡೆಗಳಲ್ಲಿ ಟವರ್‍ಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಐದು ತಾಣಗಳು ನಿರ್ಮಾಣ ಹಂತದಲ್ಲಿವೆ.

  ಅರೆಪಾಳ್ಯದಲ್ಲಿ ಹೊಸ ಸಂಪರ್ಕದಿಂದ ಸ್ಥಳೀಯರಿಗೆ ಶಿಕ್ಷಣ, ಆರೋಗ್ಯ ತುರ್ತು ಸೇವೆಗಳು ಹಾಗೂ ಆರ್ಥಿಕ ಅವಕಾಶಗಳಲ್ಲಿ ಹೆಚ್ಚಿನ ಸಹಾಯ ದೊರೆಯಲಿದೆ. ನಗರ-ಗ್ರಾಮ ಅಂತರವನ್ನು ಕಡಿಮೆ ಮಾಡುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ.

  ಸ್ಮದೇಶಿ 4ಜಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಅತಿ ವೇಗವಾಗಿ ನಿಯೋಜಿಸಿರುವ ಭಾರತ ಈಗ ವಿಶ್ವದ ಮುಂಚೂಣಿಯ ದೇಶಗಳ ಪೈಕಿ ಒಂದಾಗಿದೆ. ಪರಿಸರ ಸ್ನೇಹಿ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ಈ ಟವರ್ ಗಳು ಸುಸ್ಥಿರ ಡಿಜಿಟಲ್ ಭವಿಷ್ಯಕ್ಕಾಗಿ ಭಾರತದ ಬದ್ಧತೆಯನ್ನು ತೋರಿಸುತ್ತವೆ.

  ಅರೆಪಾಳ್ಯದಲ್ಲಿ ಬಿ.ಎಸ್.ಎನ್.ಎಲ್ 4ಜಿ ಟವರ್ ಉದ್ಘಾಟನೆ ಕೇವಲ ತಾಂತ್ರಿಕ ನವೀಕರಣವಲ್ಲ, ಇದು ಗ್ರಾಮೀಣ ಭಾರತವನ್ನು ಡಿಜಿಟಲ್ ಇಂಡಿಯಾದ ಮುಖ್ಯವಾಹಿನಿಗೆ ತರುವ ಮಹತ್ವದ ಹೆಜ್ಜೆಯಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *