ಸಚಿವ ಸಂಪುಟ ಹಿನ್ನೆಲೆ : ಮೈಸೂರು ಪ್ರಾದೇಶಿಕ ಆಯುಕ್ತ ಡಿ.ಎಸ್. ರಮೇಶ್ ರಿಂದ ಪೂರ್ವ ಸಿದ್ದತಾ ಸಭೆ

ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರಬೆಟ್ಟದಲ್ಲಿ ಏಪ್ರಿಲ್ 24ರಂದು ನಡೆಯಲಿರುವ ಸಚಿವ ಸಂಪುಟ ಸಭೆಗೆ ಸಂಬಂಧಿಸಿದಂತೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಡಿ.ಎಸ್. ರಮೇಶ್ ಅವರು ಪೂರ್ವ ಸಿದ್ದತಾ ಕಾರ್ಯಗಳನ್ನು ಪರಿಶೀಲಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಸಚಿವ ಸಂಪುಟ ಸಭೆಗೆ ಸಂಬಂಧಿಸಿದಂತೆ ಕೆಲಸ ಕಾರ್ಯಗಳ ನಿರ್ವಹಣೆಗಾಗಿ ನೇಮಕ ಮಾಡಲಾಗಿರುವ ಅಧಿಕಾರಿಗಳನ್ನೊಳಗೊಂಡ ವಿವಿಧ ಸಮಿತಿಗಳ ಜೊತೆ ಪೂರ್ವಭಾವಿ ಸಭೆ ನಡೆಸಿದರು. 

ಸಚಿವ ಸಂಪುಟ ಸಂಬಂಧ ಕಾರ್ಯ ನಿರ್ವಹಣೆಗಾಗಿ ರಚಿಸಲಾಗಿರುವ ಅಧಿಕಾರಿಗಳನ್ನು ಒಳಗೊಂಡ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿಗಳಿಂದ ಕೈಗೊಳ್ಳಲಾಗಿರುವ ಸಿದ್ದತೆಗಳ ಕುರಿತು ಪ್ರಾದೇಶಿಕ ಆಯುಕ್ತರು ವಿವರ ಪಡೆದರು. 

ಸಚಿವ ಸಂಪುಟ ನಡೆಯುವ ಮಲೆ ಮಹದೇಶ್ವರ ಬೆಟ್ಟದ ದೀಪದಗಿರಿ ವಡ್ಡುವಿನಲ್ಲಿ ಎಲ್ಲ ಸಿದ್ದತಾ ಕಾರ್ಯಗಳನ್ನು ಖುದ್ದು ಪರಿಶೀಲಿಸಿ ಕೆಲಸಗಳು ತ್ವರಿತವಾಗಿ ಪೂರ್ಣಗೊಳಿಸಬೇಕು. ಆಯಾ ಸಮಿತಿಗಳು ನಿರ್ವಹಿಸಬೇಕಿರುವ ಕೆಲಸಗಳು ಹಾಗೂ ಪೂರ್ವ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಕೈಗೊಳ್ಳಬೇಕೆಂದು ತಿಳಿಸಿದರು.

ಶಿಷ್ಟಾಚಾರ, ಸ್ವಾಗತ, ವಸತಿ, ಸಾರಿಗೆ ಸಂಪರ್ಕ, ಇನ್ನಿತರ ಎಲ್ಲ ಕಾರ್ಯಗಳನ್ನು ಯಾವುದೇ ಲೋಪವಿಲ್ಲದಂತೆ ನಿರ್ವಹಿಸಬೇಕು. ಸ್ವಚ್ಚತೆಗೆ ವಿಶೇಷ ಗಮನ ನೀಡಬೇಕು. ಸಚಿವ ಸಂಪುಟ ಸಭೆ ನಡೆಯಲು ಜಿಲ್ಲೆಗೆ ಅವಕಾಶ ದೊರೆತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಶ್ರದ್ದೆ ಮುತುವರ್ಜಿಯಿಂದ ನಿಯೋಜಿಸಲಾಗಿರುವ ಕರ್ತವ್ಯವನ್ನು ಸಮರ್ಪಕವಾಗಿ ಪೂರೈಸಬೇಕು ಎಂದು ಪ್ರಾದೇಶಿಕ ಆಯುಕ್ತರಾದ ಡಿ.ಎಸ್. ರಮೇಶ್ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ ಈಗಾಗಲೇ ಸಮಿತಿಯ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಅಗತ್ಯ ಮಾರ್ಗದರ್ಶನ ಮಾಡಲಾಗಿದೆ. ಕಾರ್ಯನಿರ್ವಹಣೆ ಸಂಬಂಧ ವಿವರ ಪಡೆಯಲಾಗುತ್ತಿದೆ. ಸಿದ್ದತಾ ಕಾರ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.  

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಮಹೇಶ್, ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ದೀಪಾ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *