ವೃತ್ತಿ ಜೀವನ, ಶಿಕ್ಷಣಕ್ಕೆ ಕೆರಿಯರ್ ಮೇಳ ಸಹಕಾರಿ : ಜಿ.ಪಂ. ಸಿಇಒ ಮೋನಾ ರೋತ್

ಚಾಮರಾಜನಗರ: ವೃತ್ತಿ ಜೀವನಕ್ಕೆ ಅಗತ್ಯವಿರುವ ಶಿಕ್ಷಣ, ಕೋರ್ಸ್ ಹಾಗೂ  ಪರೀಕ್ಷಾ ಸಿದ್ದತೆ ಬಗ್ಗೆ ಮಾರ್ಗದರ್ಶನ ಮಾಡುವ ವೃತ್ತಿ ಶಿಕ್ಷಣ ಪ್ರದರ್ಶನ ಮತ್ತು ಕೆರಿಯರ್ ಮೇಳದಂತಹ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಸಲಹೆ ಮಾಡಿದರು.

  ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), ಜಿಲ್ಲಾ ವೃತ್ತಿಪರ ಮತ್ತು ವೃತ್ತಿ ಮಾರ್ಗದರ್ಶನ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ವೃತ್ತಿ ಶಿಕ್ಷಣ ಪ್ರದರ್ಶನ ಮತ್ತು ಕೆರಿಯರ್ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

  ವಿದ್ಯಾರ್ಥಿಗಳು ತಮಗೆ ಇಷ್ಟವಾದ ವೃತ್ತಿ, ಉದ್ಯೋಗ ಪಡೆಯಲು ಯಾವ ರೀತಿ ಶಿಕ್ಷಣವನ್ನು ಪಡೆಯಬೇಕು, ಯಾವ ಬಗೆಯ ಕೋರ್ಸ್‍ಗಳನ್ನು ಆಯ್ಕೆ ಮಾಡಿಕೊಳ್ಳಬೇಕು, ಪರೀಕ್ಷೆಗೆ ಹೇಗೆ ಸಿದ್ದರಾಗಬೇಕೆಂದು ತಿಳಿದುಕೊಳ್ಳಬೇಕು. ನಿಮ್ಮ ಭವಿಷ್ಯ ಹಾಗೂ ಕನಸುಗಳನ್ನು ನನಸಾಗಿಸಿಕೊಳ್ಳಲು ಕೆರಿಯರ್ ಮೇಳಗಳು ಸಹಕಾರಿಯಾಗಲಿವೆ. ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಸೂಕ್ತ ಮಾರ್ಗದರ್ಶನ ಪಡೆಯಲು ಕೆರಿಯರ್ ಮೇಳಗಳು ಉಪಯುಕ್ತವಾಗುತ್ತವೆ ಎಂದು ಜಿ.ಪಂ. ಸಿಇಒ ಮೋನಾ ರೋತ್ ಅವರು ತಿಳಿಸಿದರು. 

   ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಂದ್ರ ಪಾಟೀಲ್ ಅವರು ಮಾತನಾಡಿ ವಿದ್ಯಾರ್ಥಿಗಳು ಸಣ್ಣ ಸಣ್ಣ ಕನಸುಗಳನ್ನು ಕಾಣಬೇಡಿ, ದೊಡ್ಡ ಕನಸುಗಳನ್ನು ಕಂಡು ಆ ಕನಸುಗಳನ್ನು ಈಡೇರಿಸಿಕೊಳ್ಳಲು ಇರುವ ಅವಕಾಶ ಮತ್ತು ಮಾರ್ಗಗಳನ್ನು ಹುಡುಕಿಕೊಳ್ಳಬೇಕು ಎಂದು ಹೇಳಿದರು.

   ಉನ್ನತ ಹಾಗೂ ಕೌಶಲ್ಯ ಶಿಕ್ಷಣ ಪಡೆಯುವ ಮೂಲಕ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ವೃತ್ತಿ ಮಾರ್ಗದರ್ಶನ ಮೇಳಗಳು ಮಾಹಿತಿ ನೀಡಲಿವೆ. ವಿವಿಧ ಇಲಾಖೆಗಳಲ್ಲಿ ದೊರೆಯುವ ವೃತ್ತಿ ಅವಕಾಶಗಳ ಬಗ್ಗೆ ತಿಳಿದುಕೊಂಡು ಅದಕ್ಕೆ ಅಗತ್ಯವಾದ ಶಿಕ್ಷಣ ಮತ್ತು ಮಾರ್ಗದರ್ಶನ ಪಡೆಯಲು ಇಂತಹ ಕೇರಿಯರ್ ಮೇಳಗಳು ತುಂಬಾ ಸಹಕಾರಿಯಾಗಿವೆ ಎಂದು ಚಂದ್ರ ಪಾಟೀಲ್ ಅವರು ತಿಳಿಸಿದರು. 

   ಕೆರಿಯರ್ ಮೇಳದ ಉಪನ್ಯಾಸಕರಾದ ಪೃಥ್ವಿರಾಜ್ ಹಾಲಹಳ್ಳಿ ಅವರು ವಿವಿಧ ಕೋರ್ಸ್‍ಗಳು, ನೌಕರಿ ಪಡೆಯಲು ಬೇಕಾಗಿರುವ ಶಿಕ್ಷಣ, ಬದ್ಧತೆ ಮತ್ತು ಶಿಸ್ತು, ಜ್ಞಾನ, ಪರೀಕ್ಷೆ ತಯಾರಿ ಬಗ್ಗೆ ವಿಸೃತವಾಗಿ ತಿಳಿಸಿದರು. 

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಯಟ್ ಪ್ರಾಂಶುಪಾಲರಾದ ಕಾಶೀನಾಥ್ ರವರು ವಹಿಸಿದ್ದರು. 

  ಮೇಳದಲ್ಲಿ ಜಿಲ್ಲೆಯ ವಿವಿಧ ಇಲಾಖೆಯ 20 ಮಳಿಗೆಗಳಲ್ಲಿ ವೃತ್ತಿ ಮಾರ್ಗದರ್ಶನ ಹಾಗೂ ಇಲಾಖೆಯಲ್ಲಿ ವೃತ್ತಿ ಮತ್ತು ಅವಕಾಶಗಳ ಬಗ್ಗೆ ಹಾಗೂ ವಿವಿಧ ಶಿಕ್ಷಣ ಕೋರ್ಸ್ ಗಳ ಬಗ್ಗೆ ಮಾಹಿತಿ ನೀಡಲಾಯಿತು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಮಳಿಗೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

  ವಯಸ್ಕರ ಶಿಕ್ಷಣದ ಶಿಕ್ಷಣಾಧಿಕಾರಿ ಕಾಂತರಾಜ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೇಶವಾನಂದನ್, ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಕಿರಣ್ ರಾಜ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *