ನಗರದಲ್ಲಿ ಹುತಾತ್ಮರ ದಿನದ ಅರ್ಥಪೂರ್ಣ ಆಚರಣೆ : ಜಿಲ್ಲಾ ನ್ಯಾಯಾಧೀಶರಿಂದ ಗೌರವ ಸಮರ್ಪಣೆ

ಚಾಮರಾಜನಗರ: ಸಾರ್ವಜನಿಕ ಆಸ್ತಿ-ಪಾಸ್ತಿ ಸಂರಕ್ಷಣೆಯ ಕರ್ತವ್ಯದ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸರ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಣೆ ಮೂಲಕ ನಗರದಲ್ಲಿಂದು ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

  ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ನೂತನವಾಗಿ ನಿರ್ಮಿಸಿರುವ ರಾಜ್ಯದಲ್ಲಿಯೇ ಅತೀ ಎತ್ತರದ (೨೭ ಅಡಿ) ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಜಿಲ್ಲಾ ಪ್ರಧಾನ ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ. ಪ್ರಭಾವತಿ ಅವರು ಪುಷ್ಪಗುಚ್ಛವಿರಿಸಿ ಗೌರವ ಸಲ್ಲಿಸಿದರು.       

   ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪ್ರಧಾನ ಸೆಷೆನ್ಸ್ ನ್ಯಾಯಾಧೀಶರಾದ ಜಿ. ಪ್ರಭಾವತಿ ಅವರು ಇದೊಂದು ಮಹತ್ವದ ದಿನವಾಗಿದೆ. ಕರ್ತವ್ಯದ ಸಂದರ್ಭದಲ್ಲಿ ಹುತಾತ್ಮರಾಗಿ, ಕುಟುಂಬದಿಂದ ದೂರವಾದ ಸ್ಮರಣೀಯ ದಿನವೂ ಆಗಿದೆ. ಕಾಡಿನ ರಕ್ಷಣೆ ಅರಣ್ಯ ಪಾಲಕರ ಕರ್ತವ್ಯವಾದರೆ, ನಾಡಿನ ಜನರ ರಕ್ಷಣೆಗೆ ಟೊಂಕಕಟ್ಟಿ ನಿಲ್ಲುವ ಪೊಲೀಸರ ಸೇವಾ ಕಾರ್ಯ ಅವೀಸ್ಮರಣೀಯ ಹಾಗೂ ಶ್ಲಾಘನೀಯವಾದದ್ದು. ಸಮಾಜದಲ್ಲಿ ಜನರು ಶಾಂತಿ, ಸಾಮರಸ್ಯ ಹಾಗೂ ಸಹಬಾಳ್ವೆ ನಡೆಸುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ ಎಂದರು.

  ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ ಜನತೆ ಶಾಂತಿ, ನೆಮ್ಮದಿಯಿಂದ ಜೀವನ ನಡೆಸಲು ಪೊಲೀಸರ ದಕ್ಷತೆ ಹಾಗೂ ಪ್ರಾಮಾಣಿಕತೆಯೇ ಕಾರಣವಾಗಿದೆ. ಕರ್ತವ್ಯದ ಸಮಯದಲ್ಲಿ ಸಾಕಷ್ಟು ಮಂದಿ ಪೊಲೀಸರು ಹುತಾತ್ಮರಾಗಿದ್ದಾರೆ, ಅವರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಕಾನೂನು ಪಾಲನೆ ಹಾಗೂ ಪೊಲೀಸರ ಕರ್ತವ್ಯಗಳ ಬಗ್ಗೆ ಶಿಕ್ಷಕರು ತಿಳಿಹೇಳಬೇಕು. ಆಗಮಾತ್ರ ದೇಶಕ್ಕೆ ಉತ್ತಮ ನಾಯಕನನ್ನು ಸೃಷ್ಠಿಸಲು ಸಾಧ್ಯವಾಗಲಿದೆ ಎಂದು ಜಿಲ್ಲಾ ನ್ಯಾಯಾಧೀಶರಾದ ಪ್ರಭಾವತಿ ಅವರು ತಿಳಿಸಿದರು. 

  ಪ್ರಾಸ್ತಾವಿಕವಾಗಿ ಮಾತನಾಡಿ, ಹುತಾತ್ಮ ಪೊಲೀಸರ ನಾಮವಾಚನ ಮಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಅವರು ೧೯೫೯ರ ಇದೇ ದಿನದಂದು ಲಡಾಕ್‌ನ ಅಕ್ಸಾಯ್ ಪ್ರದೇಶದಲ್ಲಿ ಗಡಿಪಹರೆಯಲ್ಲಿದ್ದ ನಮ್ಮ ಸೈನಿಕರ ಮೇಲೆ ಚೀನಾ ಸೈನಿಕರು ಏಕಾಏಕಿ ದಾಳಿ ನಡೆಸಿದರು. ನಿಶಸ್ತ್ರರಾಗಿದ್ದ ನಮ್ಮ ಸೈನಿಕರು ಎದೆಗುಂದದೇ ಹೋರಾಡಿದರು. ಹೋರಾಟದಲ್ಲಿ ನಮ್ಮ ೧೦ ಮಂದಿ ಸೈನಿಕರು ವೀರಮರಣ ಹೊಂದಿದ ಸ್ಮರಾಣಾರ್ಥ ಭಾರತ ಸರ್ಕಾರವು ೧೬ ಸಾವಿರ ಅಡಿ ಎತ್ತರದ ಲಡಾಕ್‌ನ ಅಕ್ಸಾಯ್ ಸ್ಥಳದಲ್ಲಿ ಸ್ಮಾರಕ ನಿರ್ಮಿಸಿದೆ. ಅಂದಿನಿಂದ ಪ್ರತಿವರ್ಷ ಅಕ್ಟೋಬರ್ ೨೧ರಂದು ಹುತಾತ್ಮರ ದಿನವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ ಎಂದರು.

  ಈ ಬಾರಿ ಕರ್ತವ್ಯದ ಸಂದರ್ಭದಲ್ಲಿ ಕರ್ನಾಟಕದ ೮ ಮಂದಿ ಪೊಲೀಸರು ಸೇರಿದಂತೆ ದೇಶದಲ್ಲಿ ೧೯೧ ಮಂದಿ ಪೊಲೀಸರು ಹುತಾತ್ಮರಾಗಿದ್ದಾರೆ. ಅವರೆಲ್ಲರಿಗೂ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಬಾರಿ ಜಿಲ್ಲೆಯಲ್ಲಿ ಹುತಾತ್ಮರ ದಿನವನ್ನು ವಿಶೇಷವಾಗಿ ಆಚರಿಸುವ ಸಲುವಾಗಿ ರಾಜ್ಯದಲ್ಲಿಯೇ ಅತಿ ಎತ್ತರದ (ದೇಶದಲ್ಲಿ ೨ನೇಯದು) ಪೊಲೀಸ್ ಸ್ಮಾರಕವನ್ನು ಚಾಮರಾಜನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ಖ್ಯಾತ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಒಡೆತನದ ಕ್ಯಾಂಪಾ ಕೋಲಾ ಬೇವರೇಜ್ ಕಂಪನಿ ನೆರವಿನೊಂದಿಗೆ ನೂತನವಾಗಿ ನಿರ್ಮಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಅವರು ಹೇಳಿದರು.       

 ಆರಂಭದಲ್ಲಿ ಪೊಲೀಸ್ ತುಕಡಿಗಳಿಂದ ಜಿಲ್ಲಾ ಪ್ರಧಾನ ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ. ಪ್ರಭಾವತಿ ಅವರು ಗೌರವ ವಂದನೆ ಸ್ವೀಕರಿಸಿದರು.

 ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕ್ಷೇತ್ರ ನಿರ್ದೇಶಕರಾದ ಬಿ. ಭಾಸ್ಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಪೊಲೀಸ್ ಅಧಿಕಾರಿಗಳು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 ಹುತಾತ್ಮರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಗಾಳಿಯಲ್ಲಿ ೩ ಸುತ್ತು ಗುಂಡು ಹಾರಿಸಲಾಯಿತು. ೨ ನಿಮಿಷಗಳ ಕಾಲ ಮೌನ ಆಚರಿಸಲಾಯಿತು. ಬಳಿಕ ಪೊಲೀಸ್ ಬ್ಯಾಂಡ್‌ನಿಂದ ಶತಶತಮಾನಗಳ ಚಿರನೂತನ ‘ಅಬಾಯ್ಡ್ ವಿತ್ ಮಿ’ ಗೀತೆ ನುಡಿಸಲಾಯಿತು.

Leave a Reply

Your email address will not be published. Required fields are marked *