ಜನಗಣತಿ-2027 : ನಿಖರ, ಪಾರದರ್ಶಕ ಜನಗಣತಿಯಿಂದ ಸರ್ಕಾರಿ ಸೌಲಭ್ಯಗಳ ಸಮರ್ಪಕ ವಿತರಣೆ- ಜಿಲ್ಲಾಧಿಕಾರಿ ಶ್ರೀರೂಪ

ಚಾಮರಾಜನಗರ: ಜಿಲ್ಲೆಯಲ್ಲಿ ಜನಗಣತಿ-2027 ಪ್ರಕ್ರಿಯೆಯ ಪೂರ್ವ ಸಿದ್ದತೆಗಳು ಆರಂಭಗೊಳ್ಳುತ್ತಿದ್ದು, ನಿಖರ ಜನಗಣತಿಯಿಂದ ಸರ್ಕಾರಿ ಸೌಲಭ್ಯಗಳನ್ನು ಸಮರ್ಪಕವಾಗಿ ಜನಸಾಮಾನ್ಯರಿಗೆ ತಲುಪಿಸಲು ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.

  ನಗರದ ಹಳೇ ಕೆ.ಡಿ.ಪಿ. ಸಭಾಂಗಣದಲ್ಲಿಂದು ಭಾರತ ಜನಗಣತಿ 2027ರ ಸಂಬಂಧ ಜಿಲ್ಲಾ ಹಂತದ ಅಧಿಕಾರಿಗಳು, ನಗರ, ಸ್ಥಳೀಯ ಸಂಸ್ಥೆ ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗೆ ಆಯೋಜಿಸಲಾಗಿದ್ದ ಮೂರು ದಿನಗಳ ಪೂರ್ವಭಾವಿ ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.

  ಕಳೆದ ಬಾರಿ 2011ರಲ್ಲಿ ಜನಗಣತಿಯು ಹಳೆಯ ಮ್ಯಾನುವೆಲ್ ಪದ್ಧತಿಯಲ್ಲಿ ನಡೆದಿತ್ತು. ಆದರೆ ಈ ಬಾರಿ ಅಂದರೆ 2027ರ ಜನಗಣತಿಯು ಸಂಪೂರ್ಣವಾಗಿ ಮೊಬೈಲ್ ಆ್ಯಪ್ ಮೂಲಕ ಡಿಜಿಟಲ್ ಮೋಡ್‍ನಲ್ಲಿ ನಡೆಯಲಿದೆ. ಡಿಜಿಟಲ್ ಮೋಡ್‍ನಲ್ಲಿ ನಡೆಯುವ ಜನಗಣತಿಯು ನಿಖರತೆ ಹಾಗೂ ಪಾರದರ್ಶಕತೆಯಿಂದ ಕೂಡಿರಲಿದೆ. ಇದರಿಂದ ಸರ್ಕಾರಿ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಲು ಸಾಧ್ಯವಾಗಲಿದೆ ಎಂದರು.

  2027ರ ಜನಗಣತಿಯು ಎರಡು ಹಂತಗಳಲ್ಲಿ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಮೊದಲ ಹಂತದಲ್ಲಿ ಕರ್ನಾಟಕದಲ್ಲಿ ಮನೆಪಟ್ಟಿ ಕಾರ್ಯಚರಣೆಯು ದಿನಾಂಕ: 16-04-2026 ರಿಂದ 15-05-2026 ರವರೆಗೆ ಒಂದು ತಿಂಗಳ ಕಾಲ ನಡೆಯಲಿದೆ. ಈ ಮೂವತ್ತು ದಿನಗಳ ಮನೆಪಟ್ಟಿ ಕಾರ್ಯ ಪ್ರಾರಂಭವಾಗುವ ಹದಿನೈದು ದಿನಗಳ ಮೊದಲು ಸ್ವಯಂ ಗಣತಿಯ ಆಯ್ಕೆ ಲಭ್ಯವಿರುತ್ತದೆ. ಎರಡನೇ ಹಂತದ ಜನಗಣತಿಯು 2027ರ ಜನವರಿಯಿಂದ ಆರಂಭವಾಗಲಿದೆ ಎಂದು ಹೇಳಿದರು. 

  ಡಿಜಿಟಲ್ ಮೋಡ್‍ನಲ್ಲಿ ನಡೆಯುವ ಜನಗಣತಿಗೆ ತರಬೇತಿ ಅತ್ಯಾವಶ್ಯಕವಾಗಿದೆ. ಜನಗಣತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳು ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ಯಾವುದೇ ಅನುಮಾನಗಳಿದ್ದರೂ ತರಬೇತಿ ಕಾರ್ಯಾಗಾರದಲ್ಲಿ ಪರಿಹರಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜನಗಣತಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದ್ದು, ಕಾರ್ಯಾಗಾರವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.        

  ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಸಂಪನ್ಮೂಲ ವ್ಯಕ್ತಿಗಳಾದ ಬೆಂಗಳೂರು ಜನಗಣತಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕರಾದ ಧನ್ಯ ಹಾಗೂ ಜನಗಣತಿ ನೋಡೆಲ್ ಅಧಿಕಾರಿ ರಮೇಶ್ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.

  ಬಳಿಕ ಸಂಪನ್ಮೂಲ ವ್ಯಕ್ತಿಗಳು ಪವರ್ ಪಾಯಿಂಟ್ ಮೂಲಕ ಜನಗಣತಿ 2027ರ ಬಗ್ಗೆ ತರಬೇತಿ ನೀಡಿದರು. ಕಾರ್ಯಾಗಾರದಲ್ಲಿ ತಹಶೀಲ್ದಾರ್‍ಗಳು, ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳು, ಸಿಬ್ಬಂದಿ, ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *