ಜನಗಣತಿ-2027 : ಸ್ವಯಂ ಗಣತಿಯಲ್ಲಿ ಸಾರ್ವಜನಿಕರು ನಿಖರ ಮಾಹಿತಿ ನಮೂದಿಸುವಂತೆ ಜಿಲ್ಲಾಧಿಕಾರಿ ಮನವಿ

ಚಾಮರಾಜನಗರ: ಭಾರತದ ಜನಗಣತಿ 2027 ಅನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತಿದ್ದು, ಮೊದಲನೇ ಹಂತ ಕರ್ನಾಟಕದಲ್ಲಿ ಏಪ್ರಿಲ್ 16 ರಿಂದ ಮೇ 15 ರವರೆಗೆ ಮನೆಪಟ್ಟಿ, ಮನೆಗಣತಿ ಹಾಗೂ 2027ರ ಫೆಬ್ರವರಿ ಮತ್ತು ಮಾರ್ಚ್ ಮಾಹೆಯಲ್ಲಿ ಜನಸಂಖ್ಯಾ ಗಣತಿ ನಡೆಸಲಾಗುತ್ತಿದ್ದು, ಸಾರ್ವಜನಿಕರು ಸ್ವಯಂ ಗಣತಿಗೆ ನಿಖರ ಮಾಹಿತಿ ನಮೂದಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದ್ದಾರೆ.

  ಮನೆಪಟ್ಟಿ ಮತ್ತು ಮನೆಗಣತಿ ಹಂತದಲ್ಲಿ ಕಟ್ಟಡಗಳು, ಜನಗಣತಿ ಮನೆಗಳು ಮತ್ತು ಕುಟುಂಬಗಳನ್ನು ಗುರುತಿಸಲಾಗುವುದು, ಮಾನವ ವಸಾಹತುಗಳ ಸ್ಥಿತಿ, ವಸತಿ ಕೊರತೆ ಇತ್ಯಾದಿಗಳನ್ನು ನಿರ್ಣಯಿಸಲು ಕುಟುಂಬಗಳಿಗೆ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಕೆಲವು ಉಪಯುಕ್ತ ಮಾಹಿತಿಗಳನ್ನು ಸಹ ಸಂಗ್ರಹಿಸಲಾಗುತ್ತದೆ.

  ಇದೇ ಮೊದಲ ಬಾರಿಗೆ ಸ್ವಯಂ ಗಣತಿಗಾಗಿ ಕೇಂದ್ರ ಸರ್ಕಾರ ಅಭಿವೃದ್ದಿಪಡಿಸಿರುವ ವೆಬ್ ಪೊರ್ಟಲ್ (https://se.census.gov.in)  ಮೂಲಕ ಯಾವುದೇ ಒಂದು ಮನೆಯ ಸದಸ್ಯರು ಸುಮಾರು 20 ನಿಮಿಷಗಳಲ್ಲಿ ತಮ್ಮ ಮನೆಯ ಸಂಪೂರ್ಣ ವಿವರಗಳನ್ನು ಭರ್ತಿ ಮಾಡಬಹುದಾಗಿದೆ. ಏಪ್ರಿಲ್ 1 ರಿಂದ 15 ರವರೆಗೆ ಎಲ್ಲಾ ನಾಗರಿಕರು ಅಧಿಕೃತ ವೆಬ್‍ಸೈಟ್ (https://se.census.gov.in) ನಲ್ಲಿ ತಮ್ಮ ಹಾಗೂ ಕುಟುಂಬದ ವಿವರಗಳನ್ನು ಸರಳ ಮತ್ತು ಸುರಕ್ಷಿತವಾಗಿ ಭರ್ತಿ ಮಾಡಬಹುದು.

  ಸ್ವಯಂ ಗಣತಿ ಮಾಡಲು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಒಟಿಪಿ ಮೂಲಕ ಲಾಗಿನ್ ಆಗಬೇಕು, ಕುಟುಂಬದ ಎಲ್ಲಾ ಸದಸ್ಯರ ವಿವರಗಳನ್ನು ದಾಖಲಿಸಬೇಕು, ವಾಸಸ್ಥಳ ಹಾಗೂ ಸಂಬಂಧಿತ ಮಾಹಿತಿಯನ್ನು ಸರಿಯಾಗಿ ನಮೂದಿಸಬೇಕು, ವಿವರಗಳನ್ನು ಸಲ್ಲಿಸಿದ ನಂತರ ಎಸ್‍ಇ ರೆಫರೆನ್ಸ್ ಐಡಿ ಪಡೆಯಬೇಕು, ಸ್ವಯಂ ಗಣತಿ ಪೂರ್ಣಗೊಳಿಸಿದ ನಂತರ ಪಡೆದಿರುವ ಎಸ್‍ಇ ರೆಫರೆನ್ಸ್ ಐಡಿ ಅನ್ನು ಗಣತಿದಾರರಿಗೆ ಕಡ್ಡಾಯವಾಗಿ ನೀಡಬೇಕು. ಕ್ಷೇತ್ರ ಪರಿಶೀಲನೆ ಅವಧಿಯಲ್ಲಿ ಗಣತಿದಾರರು ಮನೆಮನೆಗೆ ಭೇಟಿ ನೀಡಿ ನಾಗರಿಕರು ಭರ್ತಿ ಮಾಡಿದ ಮಾಹಿತಿಯನ್ನು ಪರಿಶೀಲಿಸಲಿದ್ದಾರೆ. ಸ್ವಯಂ ಗಣತಿ ಪೂರ್ಣಗೊಳಿಸದಿದ್ದರೆ ಗಣತಿದಾರರಿಗೆ ಮಾಹಿತಿಯನ್ನು ನೀಡಬೇಕು. 

  ಗಣತಿದಾರರು ಜನಗಣತಿಗಾಗಿ ಮನೆ ಮನೆಗೆ ಬಂದಾಗ ಗಣತಿದಾರರು ಕೇಳುವ 33 ಮಾಹಿತಿಗಳಿಗೆ (ಪ್ರಶ್ನೆಗಳಿಗೆ) ಸಾರ್ವಜನಿಕರು ನಿಖರ ಮಾಹಿತಿಯನ್ನು ನೀಡಬೇಕು. 

  ಕಟ್ಟಡದ ಸಂಖ್ಯೆ, ಜನಗಣತಿ ಮನೆ ಸಂಖ್ಯೆ, ಜನಗಣತಿ ಮನೆಯ ನೆಲಕ್ಕೆ ಬಳಸಲಾದ ಪ್ರಧಾನ ಸಾಮಾಗ್ರಿ, ಜನಗಣತಿ ಮನೆಯ ಗೋಡೆಗೆ ಬಳಸಲಾದ ಪ್ರಧಾನ ಸಾಮಾಗ್ರಿ, ಜನಗಣತಿ ಮನೆಯ ಮೇಲ್ಛಾವಣೆಗೆ ಬಳಸಲಾದ ಪ್ರಧಾನ ಸಾಮಾಗ್ರಿ, ಜನಗಣತಿ ಮನೆಯನ್ನು ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ, ಜನಗಣತಿ ಮನೆಯ ಸ್ಥಿತಿ, ಕುಟುಂಬದ ಸಂಖ್ಯೆ, ಕುಟುಂಬದಲ್ಲಿ ಸಾಮಾನ್ಯವಾಗಿ ವಾಸಿಸುತ್ತಿರುವ ವ್ಯಕ್ತಿಗಳ ಒಟ್ಟು ಸಂಖ್ಯೆ, ಕುಟುಂಬದ ಮುಖ್ಯಸ್ಥರ ಹೆಸರು, ಕುಟುಂಬದ ಮುಖ್ಯಸ್ಥರ ಲಿಂಗ, ಕುಟುಂಬದ ಮುಖ್ಯಸ್ಥರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ವರ್ಗಕ್ಕೆ ಸೇರಿದವರೆ, ಜನಗಣತಿ ಮನೆಯ ಮಾಲೀಕತ್ವದ ಸ್ಥಾನ ಮಾನ, ಕುಟುಂಬದ ಅಧೀನದಲ್ಲಿರುವ ವಾಸದ ಕೊಠಡಿಗಳ ಸಂಖ್ಯೆ, ಕುಟುಂಬದಲ್ಲಿ ವಾಸಿಸುತ್ತಿರುವ ವಿವಾಹಿತ ದಂಪತಿಗಳ ಸಂಖ್ಯೆ, ಕುಡಿಯುವ ನೀರಿನ ಪ್ರಧಾನ ಮೂಲ, ಕುಡಿಯುವ ನೀರಿನ ಮೂಲದ ಲಭ್ಯತೆ, ಬೆಳಕಿನ ಪ್ರಧಾನ ಮೂಲ, ಶೌಚಾಲಯದ ಲಭ್ಯತೆ, ಶೌಚಾಲಯದ ಬಗೆ, ವಿಧ, ತ್ಯಾಜ್ಯ ನೀರನ್ನು ಹೊರಸಾಗಿಸುವ ವ್ಯವಸ್ಥೆ, ಸ್ನಾನ ಗೃಹದ ಲಭ್ಯತೆ, ಅಡುಗೆ ಮನೆಯ ಮತ್ತು ಎಲ್.ಪಿ.ಜಿ/ಪಿ.ಎನ್.ಜಿ ಸಂಪರ್ಕದ ಲಭ್ಯತೆ, ಅಡುಗೆಗೆ ಬಳಸುವ ಪ್ರಮುಖ ಇಂಧನ, ರೇಡಿಯೋ/ಟ್ರಾನ್ಸಿಸ್ಟರ್, ಟೆಲಿವಿಷನ್, ಇಂಟರ್‍ನೆಟ್ ಸಂಪರ್ಕ, ಲ್ಯಾಪ್‍ಟಾಪ್/ ಕಂಪ್ಯೂಟರ್, ಟೆಲಿ ಫೋನ್ / ಮೊಬೈಲ್ ಫೋನ್ / ಸ್ಮಾರ್ಟ್ ಫೋನ್ ಬೈಸಿಕಲ್ /ಸ್ಕೂಟರ್ / ಮೋಟರ್ ಸೈಕಲ್ /ಮೊಪೈಡ್, ಕಾರ್ /ಜೀಪ್ /ವ್ಯಾನ್,  ಕುಟುಂಬವು ಸೇವಿಸುವ ಪ್ರಮುಖ ಧಾನ್ಯಗಳು, ಮೊಬೈಲ್ ಸಂಖ್ಯೆಯ (ಜನ ಗಣತಿಗೆ ಸಂಬಂಧಿಸಿದ ವಿಷಯ ಸಂಪರ್ಕಕ್ಕೆ ಮಾತ್ರ) ನಿಖರವಾದ ಮಾಹಿತಿಯನ್ನು ಸಾರ್ವಜನಿಕರು ಒದಗಿಸಬೇಕು. 

  ಗಣತಿ ಪ್ರಕ್ರಿಯೆ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ನಾಗರಿಕರ ಮಾಹಿತಿಯನ್ನು ಶೇ. 100ರಷ್ಟು ಸಂಪೂರ್ಣವಾಗಿ ಗೌಪ್ಯತೆ ಕಾಯ್ದುಕೊಳ್ಳಲಾಗುತ್ತದೆ.

  ಜಿಲ್ಲೆಯ ಎಲ್ಲಾ ನಾಗರಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಜನಗಣತಿ ವಿವರಗಳನ್ನು ಸಮಯಕ್ಕೆ ಸರಿಯಾಗಿ ಭರ್ತಿ ಮಾಡಿ ಸರ್ಕಾರದ ಮಹತ್ವದ ಕಾರ್ಯವನ್ನು ಯಶಸ್ವಿಗೊಳಿಸಲು ಸಹಕರಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *