ಹಳೆಯ ಮೀಸಲಾತಿ ಮುಂದುವರಿಸುವಂತೆ  ಛಲವಾದಿ ಮಹಾಸಭಾದಿಂದ ಸಿಎಂಗೆ ‌ಮನವಿ

ಚಾಮರಾಜನಗರ; ಒಳಮೀಸಲಾತಿಯಲ್ಲಿ ಲೋಪದೋಷಗಳನ್ನು ಸರಿಪಡಿಸುವವರೆಗೆ ಹಳೇ ಮೀಸಲಾತಿಯನ್ನು ಮುಂದುವರೆಸುವಂತೆ  ಒತ್ತಾಯಿಸಿ ಛಲವಾದಿ ಮಹಾಸಭಾದ ಜಿಲ್ಲಾ ಸಮಿತಿ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಅವರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ‌ಮನವಿ ಸಲ್ಲಿಸಲಾಯಿತು.
  ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯ 101 ಜಾತಿಗಳ ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಾಮೂರ್ತಿ ನಾಗಮೋಹನ್‌ದಾಸ್ ಅವರು ಸಿದ್ಧಪಡಿಸಿರುವ ಒಳ ಮೀಸಲಾತಿ ಸಮೀಕ್ಷೆ ವರದಿಯು ಅವೈಜ್ಞಾನಿಕತೆಯಿಂದ ಅಸಮರ್ಪಕವಾಗಿ ಸರ್ಕಾರಕ್ಕೆ ಸಲ್ಲಿಸಿರುವುದರಿಂದ ಮೂಲ ನಿವಾಸಿಗಳಾದ ಆದಿದ್ರಾವಿಡ, ಆದಿಕರ್ನಾಟಕ ಮತ್ತು ಆದಿಆಂದ್ರ ಪಂಗಡಗಳಿಗೆ ಸೇರಿದ ಬಲಗೈ 19 ಸಮುದಾಯಗಳಿಗೆ ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಅನ್ಯಾಯವಾಗಿರುತ್ತದೆ. ಈ ನಡುವೆ ಕರ್ನಾಟಕ ಸರ್ಕಾರವು ಮೀಸಲಾತಿ ಪ್ರಮಾಣವನ್ನು ಶೇಕಡಾ 56 ಕ್ಕೆ ಹೆಚ್ಚಿಸಿರುವುದನ್ನು ಪ್ರಶ್ನಿಸಿ, ಘನ ಉಚ್ಚನ್ಯಾಯಾಲಯವು ಸಂವಿಧಾನದ ಅನುಚ್ಛೇದದನ್ವಯ ಶೇಕಡಾ 50 ಮೀರಬಾರದೆಂದು ತಡೆಯಾಜ್ಞೆ ನೀಡಲಾಗಿರುತ್ತದೆ.
ಸರ್ಕಾರವು ಒಳ ಮೀಸಲಾತಿ ಮಸೂದೆಗೆ ಘನವೆತ್ತ ರಾಜ್ಯಪಾಲರ ಅಂಕಿತ ಹಾಕುವ ಮುನ್ನವೆ ಹಾಗೂ ವರದಿಯಲ್ಲಿನ ಅಂಶಗಳನ್ನು ಕಾಯ್ದೆಯಾಗಿ ರೂಪಿಸುವ ಮೊದಲೇ ಹಲವು ಇಲಾಖಾಧಿಕಾರಿಗಳು ಸರ್ಕಾರಿ ಸಂಸ್ಥೆಗಳಲ್ಲಿ ಒಳ ಮಿಸಲಾತಿ ಅನ್ವಯ ಪರಿಶಿಷ್ಟ ಜಾತಿಯ ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಗಳಡಿ ಮೀಸಲಾತಿಯನ್ನು ವರ್ಗೀಕರಿಸಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರವರ್ಗ-ಎ (ಮಾದಿಗ ಸಮುದಾಯಕ್ಕೆ) ಅವಕಾಶ ಕಲ್ಪಿಸಿರುವ ಪ್ರಕ್ರಿಯೆಯನ್ನು ಸೃಷ್ಟಿಸಿ ರೋಸ್ಟರ್ ಬಿಂದುವಿನಲ್ಲಿ ಗೊಂದಲ ಸೃಷ್ಟಿಯಾಗಿರುವುದು ಸಂವಿಧಾನದ ಮೂಲ ಆಶಯಕ್ಕೆ ಸಾಮಾಜಿಕ ಹಾಗೂ ಔದ್ಯೋಗಿಕವಾಗಿ ಘನಘೋರ ಅಪಚಾರವಾಗಿರುವುದು ಕಂಡು ಬಂದಿರುತ್ತದೆ.ಮುಂದುವರೆದು ಒಳಮೀಸಲಾತಿ ಪ್ರಕ್ರಿಯೆಗೆ ಸಂಬಂದಿಸಿದಂತೆ ಕಾನೂನು ರೂಪಿಸಿ ಜಾರಿಯಾಗುವವರೆಗೆ ಸರ್ಕಾರದ ಯಾವುದೇ ಇಲಾಖೆ, ಸಂಸ್ಥೆಗಳು ಹಾಗೂ ಶೈಕ್ಷಣಿಕ ವಿಶ್ವವಿದ್ಯಾಲಯಗಳಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯಲು ಕ್ರಮವಹಿಸುವುದು ಮತ್ತು ಒಳ ಮೀಸಲಾತಿ ಗೊಂದಲಗಳು ಪರಿಷ್ಕರಿಸುವ ತನಕ ಈ ಹಿಂದಿನಂತೆ ಮೀಸಲಾತಿ ನಿಯಮವನ್ನು ಆಳವಡಿಸಿಕೊಂಡು ಮುಂದುವರಿಸಬೇಕು.
ಪೋಷಕರುಗಳಿಗೆ ತುಂಬಾ ತೊಂದರೆ ಈಗಾಗಲೇ ಮುಂದಿನ ಸಾಲಿನ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ಒಳಮೀಸಲಾತಿ ಅನ್ವಯ ಜಾತಿ ಪ್ರಮಾಣಪತ್ರವನ್ನು ಕಂದಾಯ ಇಲಾಖೆಯಿಂದ ಪಡೆದು ಪ್ರವೇಶಾತಿ ಪಡೆಯುವಂತೆ ಶಿಕ್ಷಣ ಸಂಸ್ಥೆಯ ಅಧಿಕಾರಿಗಳು ಒತ್ತಾಯ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಮತ್ತು ಅನುಭವಿಸುತ್ತಿರುವುದರಿಂದ ತಡೆಹಿಡಿಯಲು ಸೂಕ್ತ ಕ್ರಮ ವಹಿಸುವುದು, ಅಲ್ಲದೆ ಒಳಮೀಸಲಾತಿಯ ಎಲ್ಲಾ ಆಯಮಗಳನ್ನು ಪರಿಶೀಲಿಸಿ ಪರಿಷ್ಕರಿಸುವವರೆಗೂ ಈ ಹಿಂದೆ ಕಂದಾಯ ಇಲಾಖೆಯಲ್ಲಿ ಆರ್‌ಡಿ ನಂಬರ್‌ನೊಂದಿಗೆ ನೀಡಿರುವ ಜಾತಿ ಪ್ರಮಾಣಪತ್ರವನ್ನೆ ಮುಂದುವರಿಸಬೇಕು ಎಂದು ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಎನ್.ಕುಮಾರ್ ಒತ್ತಾಯಿಸಿದ್ದಾರೆ.
  ಈ ಸಂದರ್ಭದಲ್ಲಿ   ಮಾಜಿ ಅಧ್ಯಕ್ಷ ಕೆ.ಆರ್.ನಾರಾಯಣ್,  ಜಿಲ್ಲಾ ಗೌರವಾಧ್ಯಕ್ಷ ಶಿವನಂಜಯ್ಯ, ಎಲ್.ಮಹದೇವಯ್ಯ, ಶಂಕರ್, ವಾರ್ಡ್ ನ ಮಹಾದೇವಸ್ವಾಮಿ, ಹನೂರು ತಾಲೂಕು ಅಧ್ಯಕ್ಷ ಬಸವರಾಜು, ಪ್ರಧಾನ ಕಾರ್ಯದರ್ಶಿ ಶ್ರೀಕಂಠಮೂರ್ತಿ, ಮಾಲಂಗಿ ಮಲ್ಲೇಶ್, ಚಿದಾನಂದಮೂರ್ತಿ, ವೆಂಕಟೇಶ್, ಗುಂಡ್ಲುಪೇಟೆ ದೇವರಾಜು, ಅಶೋಕ, ಪರಮೇಶ್, ದಡದಹಳ್ಳಿ ಶಂಕರ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *