ಚಾಮರಾಜನಗರ: ಜಿಲ್ಲೆಯ ಮಹಿಳೆಯರ ಜೀವನೋಪಾಯ ಮತ್ತು ಆರ್ಥಿಕ ಸಬಲೀಕರಣ ಉತ್ತೇಜಿಸುವ ಉದ್ದೇಶದೊಂದಿಗೆ ಸ್ಥಳೀಯ ಕರಕುಶಲ ವಸ್ತುಗಳನ್ನು ಚಾಮರಾಸಿ ಬ್ರಾಂಡ್ ಅಡಿಯಲ್ಲಿ ಪರಿಚಯಿಸಿ ಮಾರುಕಟ್ಟೆ ಒದಗಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.
ಉಡಿಗಾಲದ ಸಂಪೂರ್ಣ ನಯನ ಫೌಂಡೇಶನ್ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಇನ್ನರ್ ವೀಲ್ ಕ್ಲಬ್ ಆಫ್ ಉದ್ಯೋಗ್, ಜಿಲ್ಲೆಯ ಕ್ಲಬ್ ಗಳು, ಸಂಪೂರ್ಣ ನಯನ ಫೌಂಡೇಶನ್, ಸ್ನೇಹ ಜ್ಯೋತಿ ಮಹಿಳಾ ಸಂಘ, ಮಹಿಳಾ ಸೌಹಾರ್ದ ಸಹಕಾರಿ ಸಂಘದ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕರಕುಶಲತೆಯ ಮೂಲಕ ಮಹಿಳಾ ಸಬಲೀಕರಣ ಸಾಧಿಸುವ ಚಾಮರಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಹಾಗೂ ಮಹಿಳಾ ಸ್ವ ಸಹಾಯ ಗುಂಪುಗಳ ಮೂಲಕ ಸ್ಥಳೀಯವಾಗಿ ಸಿಗುವ ಪರಿಸರ ಸ್ನೇಹಿ ಹಾಗೂ ನೈಸರ್ಗಿಕ ವಸ್ತುಗಳನ್ನು ಬಳಸಿ ಕರಕುಶಲ ಉತ್ಪನ್ನಗಳನ್ನು ತಯಾರಿಸಲು ತರಬೇತಿ ನೀಡಲಾಗುತ್ತದೆ. ಇಂತಹ ತರಬೇತಿಗಳಿಗೆ ಸ್ಥಳೀಯ ಸೇವಾ ಸಂಸ್ಥೆಗಳು ಬೆಂಬಲ ನೀಡಲಿದ್ದು, ತಯಾರಿಸಿದ ಉತ್ಪನ್ನಗಳಿಗೆ ಸ್ಥಳೀಯದಿಂದ ಹಿಡಿದು ಎಲ್ಲೆಡೆ ವ್ಯಾಪಕವಾಗಿ ಮಾರುಕಟ್ಟೆ ಕಲ್ಪಿಸುವ ಉದ್ದೇಶ ಚಾಮರಸಿ ಕಾರ್ಯಕ್ರಮದ್ದಾಗಿದೆ ಎಂದರು.
ಬಾಳೆನಾರು ಮತ್ತು ರೇಷ್ಮೆಗೂಡಿನಿಂದ ಅಲಂಕಾರಿಕ ಹೂ ಗಳು, ಹೂ ಮಾಲೆಗಳು, ಅಲಂಕಾರಿಕ ವಸ್ತುಗಳು ತಯಾರಿಸಬಹುದಾಗಿದೆ. ಉತ್ತರ ಕರ್ನಾಟಕ ಭಾಗದ ಆನೆಗುಂದಿ ಯಿಂದ ಇಬ್ಬರು ಮಹಿಳೆಯರು ಬಾಳೆ ನಾರಿನಿಂದ ಅನೇಕ ಉತ್ಪನ್ನಗಳನ್ನು ತಯಾರಿಸುವ ತರಬೇತಿ ನೀಡಲಿದ್ದಾರೆ. ಕರಕುಶಲ ವಸ್ತುಗಳಿಂದ ತಯಾರಿಸಿದ ಉತ್ಪನ್ನಗಳನ್ನು ಸಭೆ, ಸಮ್ಮೇಳನ, ಸಮಾರಂಭಗಳಲ್ಲಿ ಉಡುಗೊರೆಯಾಗಿ ನೀಡಲು ಬಳಸಿಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಚಾಮರಸಿ ಬ್ರಾಂಡ್ ಮೂಲಕ ತಯಾರಾದ ಕರಕುಶಲ ವಸ್ತುಗಳಿಗೆ ಅಮೆಜಾನ್ ನಂತಹ ಆನ್ ಲೈನ್ ಶಾಪಿಂಗ್ ಮೂಲಕವೂ ಮಾರುಕಟ್ಟೆ ಒದಗಿಸಲು ಚಿಂತನೆ ನಡೆಸಿದ್ದು, ಮಹಿಳೆಯರು, ಸ್ವ ಸಹಾಯ ಗುಂಪುಗಳು ಸುಸ್ಥಿರ ಜೀವನೋಪಾಯಕ್ಕಾಗಿ ಇಂತಹ ಅವಕಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ಸಲಹೆ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಮಾತನಾಡಿ ಕರಕುಶಲ ವಸ್ತುಗಳ ಉತ್ಪನ್ನಗಳನ್ನು ಹೆಚ್ಚು ಪ್ರಮಾಣದಲ್ಲಿ ತಯಾರಿಸಿ ಸರಬರಾಜು ಮಾಡಿದರೆ ಅದಕ್ಕೆ ತಕ್ಕಂತೆ ಮಾರುಕಟ್ಟೆಯು ಸಿಗಲಿದೆ. ಮಹಿಳೆಯರು ಹೆಚ್ಚು ಆಸಕ್ತಿಯಿಂದ ತರಬೇತಿ ಪಡೆದು ಸ್ಥಳೀಯ ಕರಕುಶಲ ವಸ್ತುಗಳ ತಯಾರಿಕೆಗೆ ಮುಂದೆ ಬರಬೇಕು. ನಿಮ್ಮ ಸಹಾಯಕ್ಕೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಎಲ್ಲ ನೆರವು ನೀಡಲಿದೆ. ಮಹಿಳೆಯರ ಆರ್ಥಿಕ ಅಭಿವೃದ್ದಿಗೆ ಅನುಕೂಲವಾಗುವ ಚಾಮರಸಿ ಕರ್ಯಕ್ರಮ ಯಶಸ್ಸುಗೊಳ್ಳಲು ಹಾರೈಸುವುದಾಗಿ ತಿಳಿಸಿದರು.
ಇನ್ನರ್ ವೀಲ್ ಕ್ಲಬ್ ಉದ್ಯೋಗ್ ಅಧ್ಯಕ್ಷರು ಹಾÀಗೂ ಸಂಪೂರ್ಣ ನಯನ ಫೌಂಡೇಶನ್ ಸಂಸ್ಥಾಪಕರಾದ ರಜನಿ ಕೆ. ತಿವಾರಿ ಅವರು ಮಾತನಾಡಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಚಾಮರಸಿ ಅಡಿ ಮಹಿಳೆಯರನ್ನು ಸಬಲೀಕರಣಗೊಳಿಸುವ ತರಬೇತಿಗೆ ನಮ್ಮ ಸಂಸ್ಥೆ ಮುಂದಾಗಿದೆ. ನಿರುಪಯುಕ್ತ ಬಾಳೆ ನಾರಿನಿಂದ ಬ್ಯಾಗ್, ಬುಟ್ಟಿ, ಪರ್ಸ್, ಮುಂತಾದ ವಸ್ತುಗಳನ್ನು ತಯಾರಿಸುವ ತರಬೇತಿ ನೀಡಲು ವಿಜಯನಗರ ಜಿಲ್ಲೆಯ ಆನೆಗುಂದಿ ಯಿಂದ ಇಬ್ಬರು ಮಹಿಳೆಯರನ್ನು ಕರೆಯಿಸಲಾಗಿದೆ. ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವುದು ಚಾಮರಸಿಯ ಉದ್ದೇಶವಾಗಿದೆ ಎಂದರು.
ಸಿ.ಎಸ್.ಆರ್. ಸಂಯೋಜಕರು ಹಾಗೂ ಪಾಲಿಸಿ ಅಡ್ವೈಜರ್ ರಕ್ಷಿತ, ಸ್ನೇಹ ಜ್ಯೋತಿ ಮಹಿಳಾ ಸಂಘದ ಅಧ್ಯಕ್ಷರಾದ ರಾಜಮ್ಮ, ರಾಜ್ಯ ತಾಂತ್ರಿಕ ಸಲಹೆಗಾರರಾದ ಕೆ. ಶಶಿಧರನ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಹೆಚ್. ಪಾಟಿಲ್, ಮಂಜುಳಾ, ಶ್ರೀನಿವಾಸ್ ತಿವಾರಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Like this:
Like Loading...
Related