
ಚಾಮರಾಜನಗರ: ಸಾಮಾಜಿಕ ಪಿಡುಗಾಗಿ ಪರಿಣಮಿಸಿರುವ ಬಾಲ್ಯವಿವಾಹ ಪದ್ದತಿಯನ್ನು ಪರಿಣಾಮಕಾರಿ ಚಟುವಟಿಕೆಗಳ ಮೂಲಕ ತಡೆಯುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಬಾಲ್ಯವಿವಾಹ ಮುಕ್ತ ಚಾಮರಾಜನಗರ ಜಿಲ್ಲೆ ಅಭಿಯಾನದ ‘ಪ್ರತಿಜ್ಞಾವಿಧಿ ಸ್ವೀಕಾರ’ ಕಾರ್ಯಕ್ರಮ ಜಿಲ್ಲೆಯಾದ್ಯಂತ ಇಂದು ಯಶಸ್ವಿಯಾಗಿ ನಡೆಯಿತು.
ಜಿಲ್ಲಾಡಳಿತದ ಮೂಲಕ ಬಾಲ್ಯವಿವಾಹ ಮುಕ್ತ ಜಿಲ್ಲೆ ಘೋಷಣೆಗೆ ರಾಜ್ಯದಲ್ಲಿಯೇ ಮಾದರಿಯಾಗುವಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಇದರ ಭಾಗವಾಗಿ ನಗರದ ಜಿಲ್ಲಾಡಳಿತ ಭವನದ ಮುಂಭಾಗ, ತಾಲೂಕು ಮಟ್ಟದಲ್ಲಿ ತಾಲೂಕು ಆಡಳಿತ ಕಚೇರಿಗಳ ಮುಂಭಾಗ, ಶಾಲಾ ಕಾಲೇಜು, ಪೊಲೀಸ್ ಠಾಣೆ, ಗ್ರಾಮ ಪಂಚಾಯಿತಿ, ತಾಲೂಕು ಕಚೇರಿಗಳಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ಗಮನ ಸೆಳೆಯಿತು.
ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೆÇಲೀಸ್ ಇಲಾಖೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿಂದು ಆಯೋಜಿತವಾಗಿದ್ದ ಬಾಲ್ಯವಿವಾಹ ಮುಕ್ತ ಜಿಲ್ಲೆ ಅಭಿಯಾನ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ ಅವರು ಬಾಲ್ಯವಿವಾಹ ಪದ್ದತಿ ತಡೆ ಕುರಿತ ಪ್ರತಿಜ್ಞಾವಿಧಿ ಬೋಧಿಸಿದರು.
ಬಳಿಕ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಬಾಲ್ಯವಿವಾಹ ತಡೆಯಲು ಪ್ರತಿಯೊಬ್ಬರು ತಮ್ಮ ಮನಸ್ಸು, ಹೃದಯದಿಂದ ಪ್ರತಿಜ್ಞಾವಿಧಿ ಸ್ವೀಕರಿಸಬೇಕು. ಆಗಮಾತ್ರ ನಾವು ಇತರರನ್ನು ಪ್ರೇರೇಪಿಸಲು ಸಾಧ್ಯವಾಗಲಿದೆ. ಮನುಷ್ಯ, ಅರಣ್ಯದಲ್ಲಿರುವ ಪ್ರಾಣಿ, ಪಕ್ಷಿಗಳಿಗೂ ಹಕ್ಕುಗಳಿದ್ದು, ಅದೇ ರೀತಿ ಮಕ್ಕಳಿಗೂ ಹಕ್ಕುಗಳಿವೆ. ಅವುಗಳನ್ನು ರಕ್ಷಿಸಲು ಸಾಕಷ್ಟು ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಆದರೂ ಆಗಾಗ್ಗೆ ಜಿಲ್ಲೆಯಲ್ಲಿ ಬಾಲ್ಯವಿವಾಹಗಳು ನಡೆಯುತ್ತಿರುವುದು ಅತಂಕಕಾರಿ ಬೆಳವಣಿಗೆಯಾಗಿದ್ದು, ಇದನ್ನು ತಡೆಯಲು ತಳಮಟ್ಟದಿಂದ ಪರಿಣಾಮಕಾರಿ ಅರಿವು ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.
ಕೆಲವು ಸಮುದಾಯಗಳಲ್ಲಿ ಬಾಲ್ಯವಿವಾಹಗಳಾಗುತ್ತಿದ್ದು, ಆಸ್ಪತ್ರೆಗೆ ಹೆರಿಗೆಗಾಗಿ ಬರುವವರನ್ನು ಗಮನಿಸಿದಾಗ 18 ವರ್ಷ ತುಂಬಿರದಿರುವುದು ಕಂಡು ಬಂದಿದೆ. ಹೆಣ್ಣುಮಕ್ಕಳು ಶಾಲೆ ಬಿಡುವುದು, ಭದ್ರತೆಗಾಗಿ ಮದುವೆ ಮಾಡುವುದರಿಂದ ಹೆಣ್ಣುಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ. ಚಿಕ್ಕವಯಸ್ಸಿನಲ್ಲೇ ಗರ್ಭಿಣಿಯಾಗುವುದರಿಂದ ರಕ್ತಹೀನತೆ, ಕಡಿಮೆ ತೂಕದ ಮಗು ಜನನ ಸೇರಿದಂತೆ ಎದುರಾಗಲಿರುವ ಸಮಸ್ಯೆಗಳನ್ನು ಮನಗಂಡು ಜಿಲ್ಲಾಡಳಿತ ವಿವಿಧ ಇಲಾಖೆಗಳೊಂದಿಗೆ ಬಾಲ್ಯವಿವಾಹ ತಡೆಗೆ ಕಟ್ಟುನಿಟ್ಟಿನ ಕ್ರಮ ವಹಿಸಿದೆ. ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಗಾಗಿ ಅಧಿಕಾರಿಗಳು ಸಾರ್ವಜನಿಕರು ಹಾಗೂ ವಿವಿಧ ಸಂಘಸಂಸ್ಥೆಗಳ ಸಹಕಾರ ಪಡೆದು ಸಾಕಷ್ಟು ಪರಿಶ್ರಮ ಹಾಕುತ್ತಿದ್ದಾರೆ. ಕಳೆದ ಬಾರಿ 97 ಬಾಲ್ಯವಿವಾಹ ಪ್ರಕರಣಗಳನ್ನು ತಡೆದಿರುವುದು ಗಮನಾರ್ಹ ಸಂಗತಿಯಾಗಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಜಿಲ್ಲೆಯ ಯಾವುದೇ ಭಾಗದಲ್ಲಿ ಒಂದೂ ಬಾಲ್ಯವಿವಾಹವು ಜರುಗದೇ ನವೆಂಬರ್ 14ರೊಳಗೆ ಶೂನ್ಯಕ್ಕೆ ತರುವುದನ್ನು ಗಂಭೀರವಾಗಿ ಪರಿಗಣಿಸುವಂತೆ ಎಲ್ಲಾ ಬಾಲ್ಯವಿವಾಹ ನಿಷೇಧಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಏನಾಗುತ್ತಿದೆ ಎಂಬುದು ಅಲ್ಲಿನ ಅಧಿಕಾರಿಗಳಿಗೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಅರಿವಾಗಲಿದೆ. ಸ್ಥಳೀಯವಾಗಿ ತಡೆಯಲು ಸಾಧ್ಯವಾಗದಿದ್ದರೆ ಜಿಲ್ಲಾಡಳಿತ, ಮಕ್ಕಳ ಸಹಾಯವಾಣಿ, ಕಂಟ್ರೋಲ್ ರೂಂ ಗೆ ಮಾಹಿತಿ ನೀಡಬೇಕು. ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಸೇರಿ ದೃಢಸಂಕಲ್ಪ ಮಾಡೋಣ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಹೇಳಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ವೆಂಕಟೇಶ್ ಅವರು ಮಾತನಾಡಿ ವಿಶ್ವಸಂಸ್ಥೆ ಮಕ್ಕಳ ಹಕ್ಕುಗಳನ್ನು ಜಾರಿಗೊಳಿಸಿ 35 ವರ್ಷಗಳಾಗಿದ್ದು, ಸುಸ್ಥಿರ ಅಭಿವೃದ್ಧಿಯ ಮಾನದಂಡಗಳನ್ನು ನಾವು 2035ರೊಳಗೆ ತಲುಪಬೇಕಾಗಿದೆ. ಬಾಲ್ಯವಿವಾಹ ತಡೆಗೆ ಹಲವು ಯೋಜನೆ, ಕಾರ್ಯಕ್ರಮಗಳು, ಸರ್ಕಾರದ ಸುತ್ತೋಲೆ, ಕಾನೂನುಗಳಿದ್ದರೂ ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗುತ್ತಿದೆ. ಸರ್ಕಾರ ಸ್ವಾತಂತ್ರ್ಯಪೂರ್ವದಲ್ಲಿಯೇ ಬಾಲ್ಯವಿವಾಹ ನಿಷೇಧ ಕಾಯ್ದೆ ಜಾರಿಗೊಳಿಸಿದೆ. ಕಾಯ್ದೆಯ ಕಲಂ 16ರಲ್ಲಿ ಬಾಲ್ಯವಿವಾಹ ತಡೆಗಾಗಿ 16 ಸಾವಿರ ನಿಯೋಜಿತ ಅಧಿಕಾರಿಗಳಿದ್ದರೂ ಪದ್ದತಿ ಇನ್ನೂ ಜೀವಂತವಾಗಿರುವುದು ವಿಪರ್ಯಾಸವಾಗಿದೆ. ಬಾಲ್ಯವಿವಾಹ ತಡೆಗೆ ಕಠಿಣ, ನಿರ್ದಾಕ್ಷೀಣ್ಯ, ನಿಷ್ಪಕ್ಷಪಾತ, ಪ್ರಾಮಾಣಿಕ ಪ್ರಯತ್ನ, ಸಾಮಾಜಿಕ ಕಳಕಳಿಯನ್ನು ಅಧಿಕಾರಿಗಳು ಹೊಂದಬೇಕು ಎಂದರು.
ಬಾಲ್ಯವಿವಾಹ ತಡೆಗೆ ಇಡೀ ರಾಜ್ಯದಲ್ಲಿಯೇ ಮಾದರಿಯಾಗಿ ಜಿಲ್ಲಾಡಳಿತ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಇದಕ್ಕೆ ಪೂರಕವಾಗಿ ಜಿಲ್ಲೆಯ ಎಲ್ಲಾ 130 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಎಲ್ಲಾ ಶಾಲೆಗಳಲ್ಲಿ ಮಕ್ಕಳು ತಮ್ಮ ಸಮಸ್ಯೆ ಹೇಳಿಕೊಳ್ಳಲು ಪೊಲೀಸ್ ಇಲಾಖೆ (ಅಪ್ತಗೆಳತಿ) ಪಿಂಕ್ ಬೂಥ್‍ಗಳನ್ನಿಟ್ಟು ಉತ್ತಮ ಸಹಕಾರ ನೀಡುತ್ತಿದೆ. ಬಾಲ್ಯವಿವಾಹ ತಡೆಯನ್ನು ಸಾಕ್ಷರತಾ ಆಂದೋಲನದ ಮಾದರಿಯಲ್ಲಿ ಅಧಿಕಾರಿಗಳು ಹಮ್ಮಿಕೊಳ್ಳಬೇಕು. ಉತ್ತಮ ಕಾರ್ಯನಿರ್ವಹಿಸುವ ಅಧಿಕಾರಿಗಳನ್ನು ನವೆಂಬರ್ 14ರಂದು ಗೌರವಿಸುವ ಮೂಲಕ ಈ ಕಾರ್ಯದಲ್ಲಿ ಸಕ್ರಿಯಗೊಳಿಸಬೇಕಾಗಿದೆ. ಈ ಅನಿಷ್ಠ ಪದ್ದತಿ ತಡೆಗೆ ಎಲ್ಲಾ ಅಧಿಕಾರಿಗಳು, ಸಾರ್ವಜನಿಕರು, ಸ್ವಯಂಸೇವಾ ಸಂಸ್ಥೆಗಳು ಒಟ್ಟಾಗಿ ಸೇರಿ ಜಿಲ್ಲಾಡಳಿತಕ್ಕೆ ಶಕ್ತಿ ತುಂಬೋಣ ಎಂದು ವೆಂಕಟೇಶ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಡಾ. ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಹೆಚ್ಚುವರಿ ಪೆÇಲೀಸ್ ವರಿμÁ್ಠಧಿಕಾರಿ ಶಶಿಧರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶೃತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಹೆಚ್.ಆರ್. ಸುರೇಶ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಿ. ಮಂಜುಳಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಎ. ರಮೇಶ, ಜಿಲ್ಲಾ ಬಾಲನ್ಯಾಯ ಮಂಡಳಿ ಸದಸ್ಯರಾದ ಗಂಗಾಧರ್, ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಇದ್ದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ವೆಂಕಟೇಶ್, ಜಿಲ್ಲಾ ಬಾಲನ್ಯಾಯ ಮಂಡಳಿ ಸದಸ್ಯರಾದ ಗಂಗಾಧರ್ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಪ್ರತಿಜ್ಞಾ ವಿಧಿ ಸ್ವೀಕಾರ ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.