ಚಾಮರಾಜನಗರ: ಯಡಬೆಟ್ಟದ ಮಹದೇಶ್ವರ ದೇವಸ್ಥಾನದ ಹತ್ತಿರದಲ್ಲಿರುವ ಅಮೃತ ಸರೋವರ ಸುತ್ತುಕಟ್ಟೆಯಲ್ಲಿಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಅವರು ಸ್ವಚ್ಚತಾ ಶ್ರಮದಾನ ನಡೆಸಿ ಜಲಮೂಲವನ್ನು ಸ್ವಚ್ಚತೆಗೊಳಿಸಿದರು.
ಸ್ವಚ್ಚತೆಯ ಆಶಯಗಳನ್ನು ಬಲಪಡಿಸುವ ಸ್ವಚ್ಚತಾ ಹೀ ಸೇವಾ ಪಾಕ್ಷಿಕ ಅಭಿಯಾನದ ಅಂಗವಾಗಿ ಚಾಮರಾಜನಗರ ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡಬೆಟ್ಟದ ಮಹದೇಶ್ವರಸ್ವಾಮಿ ದೇವಸ್ಥಾನದ ಬಳಿ ಇರುವ ಅಮೃತ ಸರೋವರ ಸುತ್ತುಕಟ್ಟೆ (ಖಾಲಿ ಕೊಳ)ಯಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸಹಯೋಗದಲ್ಲಿ ‘ಒಂದು ದಿನ ಒಂದು ಗಂಟೆ ಎಲ್ಲರೂ ಒಟ್ಟಿಗೆ ಶ್ರಮದಾನ’ ಘೋಷವಾಕ್ಯದಡಿ ನಡೆದ ಸ್ವಚ್ಚತಾ ಶ್ರಮದಾನದಲ್ಲಿ ಜನಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿ ಪಾಲ್ಗೊಂಡಿದ್ದರು.
ಆರಂಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಸ್ವಚ್ಚತಾ ಪ್ರತಿಜ್ಞಾವಿಧಿ ಬೋಧಿಸಿದರು. ಬಳಿಕ ಸ್ವತಹ ತಾವೇ ಸ್ವಚ್ಚತಾ ಶ್ರಮದಾನ ಕಾರ್ಯದಲ್ಲಿ ಭಾಗವಹಿಸುವ ಮೂಲಕ ಅಧಿಕಾರಿಗಳು, ಸಿಬ್ಬಂದಿಗಳಲ್ಲಿ ಹುರುಪು, ಉತ್ಸಾಹ ತುಂಬಿದರು. ಬಳಿಕ ಸುತ್ತುಕಟ್ಟೆಯ ಕೊಳದ ತುಂಬಾ ಹಾಗೂ ಸುತ್ತಲಿನ ಪ್ರದೇಶದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸುವ ಶ್ರಮದಾನ ಕಾರ್ಯ ಯಶಸ್ವಿಗೆ ಮುನ್ನುಡಿ ಬರೆದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಗ್ರಾಮೀಣ ಹಾಗೂ ನಗರ ಪ್ರದೇಶಗಳ ಜನರಿಗೆ ಶುಚಿತ್ವ ಹಾಗೂ ನೈರ್ಮಲ್ಯ ಕುರಿತು ಜಾಗೃತಿ ಮೂಡಿಸಲು 2017ರಿಂದ ಪ್ರತಿವರ್ಷ ಸ್ವಚ್ಚತಾ ಹೀ ಸೇವಾ ಪಾಕ್ಷಕಿ ಅಭಿಯಾನವನ್ನು ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರ ಗಾಂಧಿ ಜಯಂತಿ ದಿನದವರೆಗೆ ಹಮ್ಮಿಕೊಳ್ಳಲಾಗುತ್ತಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರಿಗೆ ಗೌರವ ಸಲ್ಲಿಸಲು ಅಕ್ಟೋಬರ್ 2 ಅನ್ನು ಸ್ವಚ್ಚ ಭಾರತ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.
ಸ್ವಚ್ಚತಾ ಹೀ ಸೇವಾ ಪಾಕ್ಷಿಕ ಅಭಿಯಾನ ಅಂಗವಾಗಿ ದೇಶಾದ್ಯಂತ ಸ್ವಚ್ಚತಾ ಕಾರ್ಯಕ್ರಮಗಳು ಆಯೋಜಿತವಾಗಿದ್ದು, ಈ ಪ್ರಯುಕ್ತ ಜಿಲ್ಲೆಯಲ್ಲಿಯೂ ಸ್ವಚ್ಚತಾ ಪಾಕ್ಷಿಕ ಅಭಿಯಾನವನ್ನು ಏರ್ಪಡಿಸಲಾಗಿದೆ. ಜಿಲ್ಲೆಯ ಎಲ್ಲಾ 130 ಗ್ರಾಮ ಪಂಚಾಯಿತಿಗಳಲ್ಲಿ ಇಂದು ಸ್ವಚ್ಚತಾ ಶ್ರಮದಾನ ಕಾರ್ಯ ಹಮ್ಮಿಕೊಳ್ಳಲಾಗಿದೆ. ಈ ಅಮೃತ ಸರೋವರ ಸುತ್ತುಕಟ್ಟೆಯ ಸ್ವಚ್ಚತೆಯಿಂದ ಮಳೆನೀರು ಸಂಗ್ರಹವಾಗಲಿದೆ. ಇದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸ್ವಚ್ಚತಾ ಶ್ರಮದಾನ ನಡೆಸಲಾಗುತ್ತಿದೆ. ಇದರಿಂದ ಜನರಿಗೆ ಸ್ವಚ್ಚತೆಯ ಮಹತ್ವದ ಅರಿವು ಮೂಡಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಬಿ.ಟಿ. ಕವಿತಾ ಅವರು ಮಾತನಾಡಿ ಸ್ವಚ್ಚತೆ ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ. ಮಹಾತ್ಮ ಗಾಂಧಿಜೀಯವರು ಪ್ರತಿಯೊಬ್ಬರು ಸ್ವಚ್ಚತೆಗೆ ಆದ್ಯತೆ ನೀಡುವಂತೆ ಕರೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲರೂ ಸ್ವಚ್ಚತೆಯನ್ನು ಪರಿಪಾಲಿಸುವ ಮೂಲಕ ಸ್ವಚ್ಚಭಾರತ ನಿರ್ಮಾಣಕ್ಕೆ ಮುಂದಾಗಬೇಕಿದೆ. ಅಭಿಯಾನದ ಅಂಗವಾಗಿ ಇಂದು ಎಲ್ಲರೂ ಸ್ವಚ್ಚತಾ ಪ್ರತಿಜ್ಞೆ ಸ್ವೀಕರಿಸಿದ್ದೇವೆ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಹಾಕಬಾರದು. ರಸ್ತೆಯಲ್ಲಿ ಉಗುಳಬಾರದು. ಹಸಿಕಸ, ಒಣಕಸ ವಿಂಗಡಿಸಿ ಸೂಕ್ತ ವಿಲೇವಾರಿ ಮಾಡಬೇಕು. ಆ ಮೂಲಕ ಸ್ವಚ್ಚ ಪರಿಸರ ನಿರ್ಮಿಸುವಲ್ಲಿ ಎಲ್ಲರ ಸಹಾಕಾರ ಅವಶ್ಯವಾಗಿದೆ ಎಂದರು.
ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಹದೇವಮ್ಮ, ಸದಸ್ಯರಾದ ಮಹದೇವಸ್ವಾಮಿ, ಜಯಮ್ಮ, ರಂಗಸ್ವಾಮಿ, ಎಸ್.ಎನ್. ಶಿವಕುಮಾರ್, ಕುಮಾರಸ್ವಾಮಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಿ.ಸಿ. ಶೃತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜಗದೀಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಿರಿಧರ್, ಸಹಾಯಕ ನಿರ್ದೇಶಕರಾದ ಪ್ರಕಾಶ್‍ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ, ಅರಣ್ಯ ಇಲಾಖೆ ಅಧಿಕಾರಿಗಳು, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಶ್ರಮದಾನ ಕಾರ್ಯದಲ್ಲಿ ಭಾಗವಹಿಸಿದ್ದರು.