ಚಾಮರಾಜನಗರ: ಮಾಜಿ ಸಂಸದ ದಿ. ಆರ್ . ದ್ರುವನಾರಾಯಣ್ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆಯನ್ನು ರಾಮಸಮುದ್ರದಲ್ಲಿ ದ್ರುವನಾರಾಯಣ ಅಭಿಮಾನಿಗಳ ಬಳಗ ಹಾಗೂ ಚೇತನ ಕಲಾವಾಹಿನಿ ಸಂಸ್ಥೆಯ ವತಿಯಿಂದ ಆಚರಣೆ ಮಾಡಲಾಯಿತು.
ರಾಮಸಮುದ್ರದ ಮುಖ್ಯರಸ್ತೆಯ ಬದಿಯಲ್ಲಿ ಶಾಮಿಯಾನ ಹಾಕಿ ಧ್ರುವನಾರಾಯಣ ಅವರ ಭಾವಚಿತ್ರ ವಿಟ್ಟು ವಿವಿಧ ಪುಷ್ಪಗಳಿಂದ ಶೃಂಗರಿಸಿ, ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಿತು. ಶಾಸಕ ಸಿ. ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ಧ್ರುವನಾರಾಯಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಶಾಸಕ ಸಿ. ಪುಟ್ಟರಂಗಶೆಟ್ಟಿ, ಅತ್ಯಂತ ಕ್ರಿಯಾಶೀಲ ಸಂಸದರಾಗಿ ನಮ್ಮೆಲ್ಲರ ನೆಚ್ಚಿನ ರಾಜಕಾರಣಿ ಆರ್. ಧ್ರುವನಾರಾಯಣ ಅವರು ನಿಧನರಾಗಿ ಇಂದಿಗೆ ಒಂದು ವರ್ಷ ಕಳೆದಿದೆ. ಅವರು ಭೌತಿಕ ವಾಗಿ ನಮ್ಮೊಂದಿಗಿಲ್ಲ. ಆದರೆ ಅವರು ಮಾಡಿರುವ ಸೇವಾ ಕಾರ್ಯಗಳು ಶಾಶ್ವತವಾಗಿ ನಮ್ಮುಂದೆ ಇದೆ. ಎರಡು ಬಾರಿ ಸಂಸದರಾಗಿ, ಎರಡು ಬಾರಿ ಶಾಸಕರಾಗಿ, ದೇಶವೇ ಮೆಚ್ಚುವಂತಹ ಉತ್ತಮ ಸೇವೆ ಸಲ್ಲಿಸಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಅವರ ಶ್ರಮ ಬಹಳಷ್ಟು ಇದೆ ಎಂದು ಗುಣಗಾನ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ, ಆರ್. ಧ್ರುವನಾರಾಯಣ್ ಎಂದರೆ ಪಾದರಸದಂತೆ ಸಾರ್ವಜನಿಕರ ಕೆಲಸ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಪಕ್ಷ ಹಾಗೂ ಸಾರ್ವಜನಿಕರ ಸೇವೆಯಲ್ಲಿ ತಮ್ಮ ಜೀವನವನ್ನು ಮುಡಾಗಿಟ್ಟಿದ್ದರು. ಲೋಕಸಭಾ ಚುನಾವಣೆಯಲ್ಲಿ ಸೋತ ಮಾರನೇ ದಿನವೇ ಕ್ಷೇತ್ರ ಪ್ರವಾಸ ಮಾಡಿ, ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸಿದರು. . ಯಳಂದೂರು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು ಎಂದು ಅವರ ಸೇವೆಯನ್ನು ಸ್ಮರಿಸಿಕೊಂಡರು.
ಕಾರ್ಯಕ್ರಮದಲ್ಲಿ ಯಜಮಾನರಾದ ನಾಗರಾಜು, ಪಾಪಯ್ಯ, ಆಂಜನೇಯ, ಶಿವರಾಜು, ಬಸವರಾಜು, ಚೇತನ ಕಲಾವಾಹಿನಿ ಅಧ್ಯಕ್ಷ ಜಿ. ರಾಜಪ್ಪ, ನಗರಸಭಾ ಸದಸ್ಯ ಆರ್.ಪಿ. ನಂಜುಂಡಸ್ವಾಮಿ, ಮುಖಂಡರಾದ ಚನ್ನಂಜಯ್ಯ, ಎನ್‍ಎಸ್‍ಯುಐನ ಜಿಲ್ಲಾಧ್ಯಕ್ಷ ಮೋಹನ್ ನಗು, ಸ್ವಾಮಿ, ಅಕ್ಷಯ್, ಕಾರಯ್ಯ, ನಾಗಶ್ರೀ ಮೊದಲಾದವರು ಇದ್ದರು.