ಚಾಮರಾಜನಗರ, ಸೆಪ್ಟೆಂಬರ್ 12 (ಕರ್ನಾಟಕ ವಾರ್ತೆ):- ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತಾಧಿಗಳ ಅನುಕೂಲಕ್ಕಾಗಿ ಶ್ರೀ ಮಲೈಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ಕೈಗೆತ್ತಿಕೊಂಡಿರುವ ಅಭಿವೃದ್ದಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮಲೈಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಉಪಾಧ್ಯಕ್ಷರಾದ ಕೆ. ವೆಂಕಟೇಶ್ ಅವರು ಸೂಚಿಸಿದರು.
ಬೆಂಗಳೂರಿನ ವಿಕಾಸಸೌಧದ ಮೂರನೇ ಮಹಡಿಯ ಸಭಾಂಗಣದಲ್ಲಿಂದು ಶ್ರೀ ಮಲೆಮಹದೇಶ್ವರ ಬೆಟ್ಟ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾಮಗಾರಿಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶ್ರೀ ಮಲೆಮಹದೇಶ್ವರಸ್ವಾಮಿ ದೇವಸ್ಥಾನದ ಮಾಸ್ಟರ್ ಪ್ಲಾನ್ ಆವರಣದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಕೈಗೊಂಡಿರುವ ಆಭಿವೃದ್ದಿ ಕಾಮಗಾರಿಗಳ ವಿವರ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು 4585 ಲಕ್ಷ ರೂ. ವೆಚ್ಚದಲ್ಲಿ ಮಹದೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಕೈಗೊಂಡಿರುವ ಸರತಿ ಸಾಲಿನ ಸಂಕಿರ್ಣ ನಿರ್ಮಾಣದ ಬಾಕಿ ಕೆಲಸವನ್ನು ಬೇಗನೆ ಮುಗಿಸಬೇಕು. ಕಟ್ಟಡಕ್ಕೆ ಬಣ್ಣ ಬಳಿಯುವ, ಕಾರಿಡಾರ್ ಗಳಿಗೆ ಗ್ರಾನೈಟ್ ಫ್ಲೋರಿಂಗ್ ಇತರೆ ಬಾಕಿ ಕೆಲಸಗಳನ್ನು ವಿಳಂಬ ಮಾಡದೇ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಶ್ರೀ ಕ್ಷೇತ್ರದ ಆವರಣದ ವ್ಯಾಪ್ತಿಯಲ್ಲಿ 935 ಲಕ್ಷ ರೂ. ವೆಚ್ಚದಲ್ಲಿ 6 ವಿವಿಧ ಕೂಡು ರಸ್ತೆಗಳನ್ನು ಅಭಿವೃದ್ದಿಪಡಿಸುವ ಕಾಮಗಾರಿಯನ್ನು ಶೀಘ್ರವೇ ಪೂರ್ಣ ಮಾಡಬೇಕು. ದಾಸೋಹ ಭವನದ ಎದುರು ಭಾಗದಲ್ಲಿ ನಿರ್ಮಿಸಲಾಗುತ್ತಿರುವ ಶೌಚಾಲಯ ಹಾಗೂ ಸ್ನಾನ ಗೃಹ ಕಾಮಗಾರಿಯ ಪ್ರಗತಿಯು ವೇಗದಿಂದ ಆಗಬೇಕು. ಬಸ್ ನಿಲ್ದಾಣದ ಹತ್ತಿರದಲ್ಲಿ ಕೈಗೆತ್ತಿಕೊಂಡಿರುವ ಸ್ನಾನಗೃಹ, ಶೌಚಾಲಯ ನಿರ್ಮಾಣ ಕಾಮಗಾರಿಯನ್ನೂ ಸಹ ತ್ವರಿತವಾಗಿ ಮುಗಿಸಬೇಕು ಎಂದು ಸಚಿವರು ತಿಳಿಸಿದರು.
ಭಕ್ತಾಧಿಗಳ ವಾಸ್ತವ್ಯಕ್ಕಾಗಿ ನಿರ್ಮಾಣ ಹಂತದಲ್ಲಿರುವ ಡಾರ್ಮೆಟರಿ ಕಟ್ಟಡದ ನಿರ್ಮಾಣ ಕಾರ್ಯ ಪ್ರಗತಿಯು ವೇಗವಾಗಿ ಸಾಗಬೇಕು. ಕಾಲಮಿತಿಯೊಳಗೆ ಕೆಲಸ ಪೂರ್ಣಗೊಳಿಸಿ ಭಕ್ತಾಧಿಗಳ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡಬೇಕು. ದೀಪದಗಿರಿ ಒಡ್ಡುವಿನಲ್ಲಿ ಮಲೆಮಹದೇಶ್ವರಸ್ವಾಮಿ ಪ್ರತಿಮೆಯ ಹೊರ ಆವರಣದ ಸುತ್ತಲು ತಡೆಗೋಡೆ ನಿರ್ಮಾಣದ ಕೆಲಸವು ಆದಷ್ಟು ಶೀಘ್ರ ಆಗಬೇಕು. ತಾಳಬೆಟ್ಟದಿಂದ ಮಲೆಮಹದೇಶ್ವರಸ್ವಾಮಿ ದೇವಸ್ಥಾನದವರೆಗಿನ ಕಾಲ್ನಡಿಗೆ ಮಾರ್ಗದಲ್ಲಿ ಮೆಟ್ಟಿಲು ನಿರ್ಮಾಣ ಹಾಗೂ ಮೂಲಸೌಕರ್ಯ ಕಲ್ಪಿಸುವ ಬಾಕಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದರು.
ಅತ್ಯಂತ ಪ್ರಮುಖವಾದ ಅತ್ಯಾಧುನಿಕ ಸುಸಜ್ಜಿತ ದಾಸೋಹ ಭವನ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಳ್ಳುವ ಸಂಬಂಧ ವಿಸ್ತೃತವಾಗಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವರು ಪ್ರಸ್ತುತ ವಿನ್ಯಾಸಗೊಳಿಸಿರುವ ಯೋಜನೆಯ ಸಂಬಂಧ ಕೆಲ ಉತ್ತಮ ಮಾರ್ಪಾಡುಗಳಿಗೆ ಸೂಚಿಸಿದರು. ಹೆಚ್ಚು ಸಂಖ್ಯೆಯ ಭಕ್ತಾಧಿಗಳು ಒಮ್ಮೆಲೆ ಪ್ರಸಾದ ಸೇವನೆಗೆ ಅನುಕೂಲವಾಗುವಂತಹ ಎಲ್ಲಾ ಸೌಲಭ್ಯಗಳನ್ನು ದಾಸೋಹ ಭವನ ಒಳಗೊಂಡಿರಬೇಕು. ಭಕ್ತಾದಿಗಳು ದಾಸೋಹ ಭವನ ಪ್ರವೇಶಿಸುವ ಮೊದಲು ಕುಳಿತುಕೊಳ್ಳಲು ವಿಶಾಲವಾದ ಸ್ಥಳಾವಕಾಶ ಇರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಸೂಚಿಸಿದರು.
ಶಾಸಕರಾದ ಎಂ.ಆರ್. ಮಂಜುನಾಥ್ ಅವರು ಮಾತನಾಡಿ ಮಹದೇಶ್ವರಸ್ವಾಮಿಯ ಕ್ಷೇತ್ರದಲ್ಲಿನ ದಾಸೋಹಕ್ಕೆ ದಾನಿಗಳಿಂದ ಹೆಚ್ಚು ಪ್ರಮಾಣದಲ್ಲಿ ತರಕಾರಿ, ಇತರೆ ಸಾಮಗ್ರಿಗಳು ಬರುತ್ತಿದೆ. ಈ ಎಲ್ಲವನ್ನು ಸಂಗ್ರಹಿಸಲು ವಿಶಾಲವಾದ ಕೊಠಡಿಗಳ ಅಗತ್ಯವಿದ್ದು, ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಉತ್ತಮವಾಗಿ ಕಟ್ಟಡವನ್ನು ಉಪಯೋಗಿ ಆಗುವಂತೆ ನಿರ್ಮಿಸಬೇಕಿದೆ .ಕ್ಷೇತ್ರದಲ್ಲಿ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ವೇಗವಾಗಿ ನಡೆಯಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು, ಹಿಂದು ಧಾರ್ಮಿಕ ಸಂಸ್ಥೆಗಳು, ಧರ್ಮದಾಯ ದತ್ತಿಗಳ ಇಲಾಖೆ ಆಯುಕ್ತರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ.ಎಂ.ವಿ. ವೆಂಕಟೇಶ್ ಅವರು ಮಾತನಾಡಿ ಉದ್ದೇಶಿತ ದಾಸೋಹ ಭವನದಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುವ ಘಟಕವೂ ಇರಬೇಕು. ಅಡುಗೆಗೆ ಬಳಸಿದ ನಂತರ ಉಳಿಯುವ ತ್ಯಾಜ್ಯಗಳನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು. ಜೈವಿಕ ಘಟಕವನ್ನು ನಿರ್ಮಾಣದಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು. ಈಗಾಗಲೇ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ನಿರ್ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ ಕ್ಷೇತ್ರದಲ್ಲಿ ನಿರಾಶ್ರಿತರು ಸಹ ಇದ್ದಾರೆ. ಇವರಿಗೆ ಪುನರ್ವಸತಿ ಕೇಂದ್ರ ತೆರೆಯುವ ಅವಶ್ಯಕತೆ ಇದೆ. ಸಮಾಜ ಕಲ್ಯಾಣ ಇಲಾಖೆಯ ಅನುದಾನದ ನೆರವೂ ಸಹ ಪಡೆದುಕೊಂಡು ಪುನರ್ವಸತಿ ಕೇಂದ್ರವನ್ನು ನಿರ್ಮಾಣ ಮಾಡಬೇಕಿದೆ. ಉದ್ದೇಶಿತ ಸುಸಜ್ಜಿತ ದಾಸೋಹ ಭವನಕ್ಕೆ ಪ್ರತ್ಯೇಕ ವಿದ್ಯುತ್ ಹಾಗೂ ಜನರೇಟರ್ ವ್ಯವಸ್ಥೆ ಸಹ ಇರಬೇಕಾಗುತ್ತದೆ ಎಂದರು.
ಸಾಲೂರು ಮಠದ ಶ್ರೀ ಗಳಾದ ಶಾಂತ ಮಲ್ಲಿಕಾರ್ಜುನ ಸ್ವಾಮಿಜಿಯವರು ಭಕ್ತಾಧಿಗಳ ಸೌಕರ್ಯ ಕಾಮಗಾರಿ ಸಂಬಂಧ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಡಾ. ಡಿ. ತಿಮ್ಮಯ್ಯ, ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಗಳಾದ ಸತ್ಯನಾರಾಯಣ, ಮಲೈಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ರಘು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಇಬ್ರಾಹಿಂ ಮೈಗೂರು, ಚಾಮರಾಜನಗರ ವಿಭಾಗೀಯ ನಿಯಂತ್ರಾಣಾಧಿಕಾರಿ ಅಶೋಕ್ ಕುಮಾರ್, ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಕೇಶವಪ್ರಸಾದ್, ಚಾಮರಾಜನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಕಿರಣ್ ಕುಮಾರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಗಾಯತ್ರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ್, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಎಂ.ವಿ. ಸುಧಾ, ತಹಶೀಲ್ದಾರ್ ಚೈತ್ರ, ತಾಲೂಕು ಪಂಚಾಯತ್ ಕಾಯರ್ನಿರ್ವಾಹಕ ಅಧಿಕಾರಿ ಉಮೇಶ್, ಮಲೈಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್ ಪ್ರಾಧಿಕಾರದ ಸದಸ್ಯರಾದ ಭಾಗ್ಯಮ್ಮ,ಗಂಗನ ತಿಮ್ಮಯ್ಯ,ಪಿ.ಮಹದೇವಪ್ಪ,ಮರಿಸ್ವಾಮಿ,ವಿಜಯ ಕುಮಾರ,ಅರ್ಚಕರಾದ ನಾಗಪ್ಪ,ಚೇಳ ಮಾದಪ್ಪ ತಂಬಡಿ,ಕುಮಾರ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.