ಬೆಳೆಹಾನಿ ಪರಿಹಾರ ಕುರಿತು 3 ದಿನಗಳೊಳಗೆ ಸಮೀಕ್ಷೆ ನಡೆಸಿ : ಜಿಲ್ಲಾಧಿಕಾರಿ ಸೂಚನೆ

ಚಾಮರಾಜನಗರ:  ಪ್ರಕೃತಿ ವಿಕೋಪ ವೈಪರಿತ್ಯದಿಂದ ಉಂಟಾಗಿರುವ ಬೆಳೆಹಾನಿಗೆ ಪರಿಹಾರ ನೀಡುವ ಸಂಬಂಧ ಮೂರು ದಿನಗಳೊಳಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚನೆ ನೀಡಿದರು. 

ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೇಸ್ವಾನ್ ಸಭಾಂಗಣದಲ್ಲಿಂದು ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿಗಳು ಸಭೆ ನಡಸಿ ಅತಿವೃಷ್ಟಿ, ಬೆಳೆಹಾನಿ ಸೇರಿದಂತೆ ಮುಂಗಾರು ಅವಧಿಯಲ್ಲಿನ ಇನ್ನಿತರ ನಷ್ಟ ಸಂಬಂಧ ವಿವರವಾಗಿ ಮಾಹಿತಿ ಪಡೆದು ಅಗತ್ಯ ಸೂಚನೆಗಳನ್ನು ನೀಡಿದ್ದಾರೆ. ಬೆಳೆ ಹಾನಿ ಪರಿಹಾರ ಸಂಬಂಧ ಶೀಘ್ರ ವರದಿ ಸಲ್ಲಿಸಬೇಕಿದೆ. ಹೀಗಾಗಿ ಜಿಲ್ಲೆಯಲ್ಲಿ ಯಾವುದೇ ಪ್ರದೇಶಗಳು ಬಿಟ್ಟುಹೋಗದಂತೆ ಪರಿಪೂರ್ಣವಾಗಿ ಮೂರು ದಿನಗಳೊಳಗೆ ಸಂಬಂಧಪಟ್ಟ ಅಧಿಕಾರಿಗಳು ಸಮೀಕ್ಷೆ ನಡೆಸಿ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು. 

ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ. ಹನೂರು ಹಾಗೂ ಚಾಮರಾಜನಗರ ಭಾಗಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ಸಮಸ್ಯೆಯಾಗದಿರಲು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ತಹಶೀಲ್ದಾರರು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಗ್ರಾಮೀಣ ಭಾಗದ ಅಧಿಕಾರಿಗಳು ಭೇಟಿ ನೀಡಿ ಕುಡಿಯುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡುವ ನಿಟ್ಟಿನಲ್ಲಿ ಮುಂದಾಗಬೇಕು ಎಂದರು. 

ನರೇಗಾ ಅಡಿ ಜಲ ಮರುಪೂರಣ ಸಂರಕ್ಷಣೆಯಂತಹ ಕಾಮಗಾರಿಯನ್ನು ಕೈಗೊಳ್ಳಬೇಕು. ಶಾಶ್ವತವಾಗಿ ನೀರು ಒದಗಿಸುವ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ಕುಡಿಯುವ ನೀರಿನ ತೊಂದರೆ ಎದುರಾಗಬಹುದಾದ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳಲು ಶೀಘ್ರವೇ ಮುಂದಾಗಬೇಕು. ಯಾವುದೇ ದೂರುಗಳು ಬರದಂತೆ ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ತೆಂಗು ಬೆಳೆಗೆ ಬಾಧಿಸುತ್ತಿರುವ ಕಪ್ಪುತಲೆ ಹುಳು ಹತೋಟಿ ಸಂಬಂಧ ನಡೆಸುತ್ತಿರುವ ಸಮೀಕ್ಷಾ ಕಾರ್ಯದ ವಿವರ ಪಡೆದ ಜಿಲ್ಲಾಧಿಕಾರಿಯವರು ಸಮೀಕ್ಷೆಯಲ್ಲಿ ಪ್ರತಿನಿತ್ಯದ ಮಾಹಿತಿಯನ್ನು ಪಡೆದುಕೊಳ್ಳಬೇಕು. ತಹಶೀಲ್ದಾರರು ಉಸ್ತುವಾರಿ ವಹಿಸಿ ಸಮೀಕ್ಷೆಯ ಪ್ರಗತಿಯನ್ನು ಪರಿಶೀಲಿಸಬೇಕು. ಅಗತ್ಯ ಮಾರ್ಗದರ್ಶನ ಮಾಡಿ ನಿಗದಿತ ಅವಧಿಯೊಳಗೆ ಸಮೀಕ್ಷಾ ಕಾರ್ಯ ಪೂರ್ಣವಾಗುವಂತೆ ಗಮನಹರಿಸಬೇಕು. ಕೃಷಿ ಚಟುವಟಿಕೆಗಳಿಗೆ ಅಗತ್ಯವಾಗಿರುವ ರಸಗೊಬ್ಬರ, ಬಿತ್ತನೆ ಬೀಜ, ಇನ್ನಿತರ ಪರಿಕರಗಳನ್ನು ಕೊರತೆಯಾಗದಂತೆ ಒದಗಿಸಬೇಕು ಎಂದರು. 

ಅಂಗನವಾಡಿ ಕಟ್ಟಡ ನಿರ್ಮಾಣ, ಸ್ಮಶಾನ ಇನ್ನಿತರ ಜಾಗಗಳಿಗೆ ಕೋರಿಕೆ ಇರುವ ಅರ್ಜಿಗಳಿಗೆ ಆದ್ಯತೆ ನೀಡಿ ಜಮೀನು ಮಂಜೂರು ಮಾಡಬೇಕು. ಸರ್ಕಾರಿ ಭೂಮಿ ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಭೂಮಿಯನ್ನು ಖರೀದಿಸಿ ನೀಡಲು ಅವಕಾಶವಿದೆ. ಹೀಗಾಗಿ ಶೀಘ್ರವೇ ಜಮೀನು ನೀಡುವ ಕಾರ್ಯವನ್ನು ತಹಶೀಲ್ದಾರರು ಮಾಡಬೇಕು. ನಂದಿನಿ ಮಿಲ್ಕ್ ಪಾರ್ಲರ್‍ಗಳ ಸ್ಥಾಪನೆಗೆ ಜಾಗ ಗುರುತಿಸಲು ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ ಈ ಸಂಬಂಧ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶೃತಿ, ತಹಶೀಲ್ದಾರರು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *