ಬದನಗುಪ್ಪೆಯಲ್ಲಿ ವಸ್ತು ಪ್ರದರ್ಶನದಲ್ಲಿ ಗಮನಸೆಳೆದ ಸಂವಿಧಾನ ಜಾಗೃತಿ : ಕೊಂಗರಹಳ್ಳಿ, ಕಾಮಗೆರೆ, ಮಂಗಲದಲ್ಲಿ ಸಂವಿಧಾನ ಅರಿವಿನ ಸ್ತಬ್ದ ಚಿತ್ರಕ್ಕೆ ಅದ್ದೂರಿ ಸ್ವಾಗತ


ಚಾಮರಾಜನಗರ: ಸಂವಿಧಾನ ದಿನಾಚರಣೆ ಪ್ರಯುಕ್ತ ಮುಂದುವರೆದಿರುವ ಸಂವಿಧಾನ ಜಾಗೃತಿ ಸ್ತಬ್ದ ಚಿತ್ರದ ಜಾಥಾ ಅಂಗವಾಗಿ ತಾಲೂಕಿನ ಬದನಗುಪ್ಪೆಯಲ್ಲಿ ಏರ್ಪಡಿಸಿದ್ದ ವಸ್ತು ಪ್ರದರ್ಶನದಲ್ಲಿ ಶಾಲಾ ಮಕ್ಕಳು ರಚಿಸಿದ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರ, ಸಂವಿಧಾನ, ಇನ್ನಿತರ ರಾಷ್ಟ್ರ ನಾಯಕರ ಭಾವಚಿತ್ರ, ಸಂಸತ್ ಭವನ, ಇನ್ನಿತರ ಮಾದರಿಗಳು ವಿಶೇಷ ಗಮನ ಸೆಳೆಯಿತು.

ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಬದನಗುಪ್ಪೆಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜನೆಯಾಗಿತ್ತು. ಇದರ ಪಕ್ಕದಲ್ಲೇ ಶಾಲಾ ವಿದ್ಯಾರ್ಥಿಗಳು ಆಕರ್ಷಕವಾಗಿ ರಚಿಸಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಇನ್ನಿತರ ರಾಷ್ಟ್ರನಾಯಕರ ಭಾವಚಿತ್ರಗಳು, ಸಂವಿಧಾನ, ದೆಹಲಿಯ ಸಂಸತ್ ಭವನ, ಚಂದ್ರಯಾನ, ರಾಕೆಟ್ ಮಾದರಿಗಳು ಇಂದಿನ ಕಾರ್ಯಕ್ರಮದ ಕೇಂದ್ರ ಬಿಂದು ಆಗಿದ್ದವು.

ಮಕ್ಕಳ ಕೈಚಳಕದಲ್ಲಿ ಅತ್ಯಾಕರ್ಷಕವಾಗಿ ಮೂಡಿಬಂದಿರುವ ಮಾದರಿಗಳನ್ನು ಸಾರ್ವಜನಿಕರು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು. ತಮ್ಮ ಮೊಬೈಲ್ ಗಳಲ್ಲಿ ವಸ್ತಪ್ರದರ್ಶನದಲ್ಲಿ ಇಡಲಾಗಿದ್ದ ಸಂವಿಧಾನ ಜಾಗೃತಿ ಕುರಿತ ಮಾದರಿಗಳನ್ನು ಸೆರೆ ಹಿಡಿದರು.

ಗ್ರಾಮಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾಗೆ ಶಾಲಾ ಮಕ್ಕಳು ಸಾಂಪ್ರದಾಯಿಕ ದಿರಿಸು ಧರಿಸಿ ಸ್ವಾಗತಿಸಿದರು. ವೇದಿಕೆ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕುಮಾರ್, ಉಪಾಧ್ಯಕ್ಷರಾದ ರಾಜಮ್ಮ, ಇತರೆ ಸದಸ್ಯರು, ಗಣ್ಯರು ಪಾಲ್ಗೊಂಡರು. ಪ್ರಗತಿಪರ ಸಂಘಟನೆಗಳ ಅಧ್ಯಕ್ಷರಾದ ಸಿ.ಎಂ. ಕೃಷ್ಣಮೂರ್ತಿ ಅವರು ಸಂವಿಧಾನ ಕುರಿತು ಉಪನ್ಯಾಸ ನೀಡಿದರು. ವಿಶೇಷಚೇತನ ಮಕ್ಕಳಿಗೆ ಕಾರ್ಯಕ್ರಮದಲ್ಲಿ ಕಲಿಕಾ ಕಿಟ್‍ಗಳನ್ನು ವಿತರಿಸಿದ್ದು ವಿಶೇಷವಾಗಿತ್ತು.

ಸಂವಿಧಾನ ಜಾಗೃತಿ ಜಾಥಾವು ಮರಿಯಾಲ, ಬೇಡರಪುರದಲ್ಲಿಯೂ ಸಂಚರಿಸಿತು. ಬೇಡರಪುರದಿಂದ ಯುವಕರು, ಮುಖಂಡರು ಬೈಕ್ ರ್ಯಾಲಿ ಮೂಲಕ ಸಂವಿಧಾನದ ಮಹತ್ವದ ಅರಿವು ಮೂಡಿಸಿದರು.

ಹೆಗ್ಗೋಠಾರದಲ್ಲಿಯೂ ನಡೆದ ಸಂವಿಧಾನ ಜಾಗೃತಿ ಜಾಥಾವನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಅಲ್ಲಿನ ಪ್ರೌಢಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆರ್. ಅಂಬಿಕ, ಉಪಾಧ್ಯಕ್ಷರಾದ ಗೌರಮ್ಮ ಸೇರಿದಂತೆ ಇನ್ನಿತರ ಗಣ್ಯರು ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಸಂಘಟನೆಯ ಮುಖಂಡರಾದ ಕೆ.ಎಂ. ನಾಗರಾಜು, ವಕೀಲರಾದ ಹೆಚ್. ಮಹೇಂದ್ರ, ಶಾಲಾ ಶಿಕ್ಷಕರಾದ ಮಹೇಶ್ ಆರಾಧ್ಯ ಸಂವಿಧಾನ ಕುರಿತು ಉಪನ್ಯಾಸ ನೀಡಿದರು. ಕಲಾವಿದರಾದ ಮಹೇಶ್ ಮತ್ತು ತಂಡದವರು ಜಾಗೃತಿ ಗೀತೆಗಳನ್ನು ಹಾಡಿದರು. ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕರಾದ ಚಿಕ್ಕಬಸವಯ್ಯ ಅವರು ಉಪಸ್ಥಿತರಿದ್ದರು.

ಕೊಳ್ಳೇಗಾಲ, ಹನೂರು ಭಾಗದಲ್ಲಿಯೂ ಸಂವಿಧಾನ ಜಾಗೃತಿ ಸ್ತಬ್ದ ಚಿತ್ರ ಮೆರವಣಿಗೆ ನಡೆಯಿತು. ಕೊಳ್ಳೇಗಾಲ ತಾಲೂಕಿನ ಕೊಂಗರಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಆವರಣದಿಂದ ಮಲೆ ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯ ಮೂಲಕ ಕಾಮಗೆರೆ ಗ್ರಾಮದ ಹೋಲಿಕ್ರಾಸ್ ಆಸ್ಪತ್ರೆವರೆಗೆ ಸಾಂಸ್ಕøತಿಕ ಕಲಾತಂಡಗಳೊಡನೆ ಮೆರವಣಿಗೆ ಸಾಗಿತು. ಮಾಜಿ ಶಾಸಕರಾದ ಪರಿಮಳನಾಗಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಿಕ್ಕಸ್ವಾಮಿ, ಉಪಾಧ್ಯಕ್ಷರಾದ ಮಮತ, ಮುಖಂಡರಾದ ಸಿದ್ದರಾಜು, ಮಲ್ಲಿಕಾರ್ಜುನಸ್ವಾಮಿ, ಅಂಬರೀಶ್, ಆನಂದ್ ರಾಜ್(ಶೆಟ್ಟಿ), ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಇನ್ನಿತರ ಮುಖಂಡರು ಇದ್ದರು.

ಜಾಗೃತಿ ಜಾಥಾವು ಕೊಳ್ಳೇಗಾಲ ತಾಲೂಕಿನ 16 ಗ್ರಾಮ ಪಂಚಾಯಿತಿಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿ ಮಧ್ಯಾಹ್ನದ ವೇಳೆಗೆ ಹನೂರು ತಾಲೂಕಿನ ಮಂಗಲ ಗ್ರಾಮ ಪಂಚಾಯಿತಿಗೆ ಆಗಮಿಸಿತು. ತಹಶೀಲ್ದಾರ್ ಗುರುಪ್ರಸಾದ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಕೇಶವಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮುಖಂಡರು, ಯುವಕರು, ಮಹಿಳಾ ಸಂಘಟನೆಯ ಪ್ರತಿನಿಧಿಗಳು ಸಂಭ್ರಮದಿಂದ ಜಾಥಾಗೆ ಸ್ವಾಗತಿಸಿದರು. ಶಾಲಾ ಮಕ್ಕಳು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.

Leave a Reply

Your email address will not be published. Required fields are marked *