ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ

ವಿವಿಧ ಸಮಿತಿಗಳ ಜವಾಬ್ದಾರಿ ಕಾರ್ಯನಿರ್ವಹಣೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಸೂಚನೆ

ಚಾಮರಾಜನಗರ: ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವು ಮಾರ್ಚ್ 12ರಂದು ನಡೆಯಲಿದ್ದು ಕಾರ್ಯಕ್ರಮದ ಆಯೋಜನೆಗಾಗಿ ವಿವಿಧ ಸಮಿತಿಗಳನ್ನು ರಚಿಸಿ, ವಹಿಸಲಾಗಿರುವ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ನಗರದಲ್ಲಿ ನಡೆಯಲಿರುವ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಸಂಬಂಧ ರಚಿಸಲಾಗಿರುವ ವಿವಿಧ ಸಮಿತಿ ಅಧಿಕಾರಿಗಳಿಂದ ಮಾಹಿತಿ ಪಡೆದು ಬಳಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. 

ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಯಶಸ್ವಿಗೊಳಿಸಲು ಸ್ವಾಗತ ಸಮಿತಿ, ವೇದಿಕೆ, ಆಹಾರ, ವೈದ್ಯಕೀಯ, ಆರೋಗ್ಯ, ಸ್ವಚ್ಚತೆ, ಭದ್ರತೆ, ಶಿಷ್ಠಾಚಾರ, ವಾಹನಗಳ ಸಮಿತಿ, ಹೆಲಿಪ್ಯಾಡ್ ನಿರ್ಮಾಣ, ಪ್ರಚಾರ, ಮಾಹಿತಿ ಸಮಿತಿ ಸೇರಿದಂತೆ ವಿವಿಧ ಸಮಿತಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಣೆ ಮಾಡಬೇಕು. ಕರ್ತವ್ಯದಲ್ಲಿ ಯಾವುದೇ ಲೋಪ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಸಮಾವೇಶದ ನಿರ್ವಹಣೆ ಸಂಬಂಧ ವಿವಿಧ ಸಮಿತಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಸಮಾವೇಶಕ್ಕೆ ಫಲಾನುಭವಿಗಳನ್ನು ಕರೆತಂದು ಮತ್ತೆ ವಾಪಸ್ಸು ಕರೆದುಕೊಂಡು ಹೋಗುವ ಕಾರ್ಯವನ್ನು ಸಮರ್ಪಕವಾಗಿ ಸಂಬಂಧಪಟ್ಟ ಅಧಿಕಾರಿಗಳು ನಿಭಾಯಿಸಬೇಕು. ಸಮಾವೇಶದಲ್ಲಿ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇರುವುದರಿಂದ ಬಸ್‍ಗಳ ವ್ಯವಸ್ಥೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಹೆಚ್ಚುವರಿಯಾಗಿ ಸರ್ಕಾರಿ ಹಾಗೂ ಖಾಸಗಿ ಬಸ್‍ಗಳನ್ನು ನಿಯೋಜಿಸಬೇಕು ಎಂದು ಸಚಿವರು ತಿಳಿಸಿದರು.

ಸಮಾವೇಶದಲ್ಲಿ ಪಾಲ್ಗೊಳ್ಳುವ ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ ಕಾರ್ಯವನ್ನು ವ್ಯವಸ್ಥಿತಗೊಳಿಸಬೇಕು.  ಕಾರ್ಯಕ್ರಮ ನಡೆಯುವ ಜಿಲ್ಲಾ ಕ್ರೀಡಾಂಗಣದಲ್ಲಿ ಆಸನಗಳ ವ್ಯವಸ್ಥೆ, ಕುಡಿಯುವ ನೀರು, ಸ್ವಚ್ಚತೆ, ಶೌಚಾಲಯ ವ್ಯವಸ್ಥೆ ಮಾಡಬೇಕು. ಸಮಾವೇಶಕ್ಕೆ ಜನರು ಹೆಚ್ಚಾಗಿ ಸೇರುವುದರಿಂದ ವೇದಿಕೆಯ ಕಾರ್ಯಚಟುವಟಿಕೆಗಳನ್ನು ಪ್ರತಿಯೊಬ್ಬರು ವೀಕ್ಷಿಸಲು ಅನುಕೂಲವಾಗುವಂತೆ ಬೃಹತ್ ಎಲ್.ಇ.ಡಿ. ಪರದೆ ಅಳವಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಶಾಸಕರು ಹಾಗೂ ಎಂ.ಎಸ್.ಐ.ಎಲ್. ಅಧ್ಯಕ್ಷರಾದ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪಿ. ಲಕ್ಷ್ಮೀ, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *