- ತೊಲಗಲಿ ತೊಲಗಲಿ ಕೇಂದ್ರ ಬಿಜೆಪಿ ಸರ್ಕಾರ ತೊಲಗಲಿ ಘೋಷಣೆ ಕೂಗಿ ಅಕ್ರೋಶ
ಚಾಮರಾಜನಗರ: ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಳ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಘಟಕದ ಕಾರ್ಯಕರ್ತರು,ಮುಖಂಡರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ. ಪಿ.ಮರಿಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆತಡೆ ನಡೆಸಿ ತೊಲಗಲಿ ತೊಲಗಲಿ ಕೇಂದ್ರ ಬಿಜೆಪಿ ಸರ್ಕಾರ ತೊಲಗಲಿ’ ಎಂದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಕಾಡಾ ಅಧ್ಯಕ್ಷರು,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಮರಿಸ್ವಾಮಿ ಮಾತನಾಡಿ, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ನಿರಂತರವಾಗಿ ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡುತ್ತಾ ಬಂದಿದ್ದು ಯುದ್ದದ ನೆಪದಲ್ಲಿ ಅಡುಗೆ ಅನಿಲ ಸಿಲಿಂಡರ್ ಗೆ 60 ರೂ. ವಾಣಿಜ್ಯ ಸಿಲಿಂಡರ್ ಬೆಲೆಯನ್ನು 114.50ಕ್ಕೆ ಹೆಚ್ಚಳ ಮಾಡುವ ಮೂಲಕ ಜನತೆಗೆ ತೊಂದರೆ ಮಾಡಿದ್ದಾರೆ ಎಂದು ಆರೋಪಿಸಿದರು.
‘ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಮಧ್ಯಮ ವರ್ಗದವರಿಗೆ ಬೆಲೆ ಹೆಚ್ಚಳದ ಬರೆ ಹಾಕುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲಿ ಬೆಲೆ ಹೆಚ್ಚಳ ಮಾಡುವ ಮೂಲಕ ಜನರನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಕೇವಲ 400 ಇದ್ದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಏಕಾಏಕಿ 1,100ಕ್ಕೆ ಹೆಚ್ಚಳ ಮಾಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನರ ವಿರೋಧಕ್ಕೆ ಬೆದರಿದ ಕೇಂದ್ರ ಸರ್ಕಾರವು ಸಿಲಿಂಡರ್ ಬೆಲೆಯಲ್ಲಿ 200 ಕಡಿಮೆ ಮಾಡುವ ನಾಟಕವಾಡಿತ್ತು. ಆದರೆ, ಈಗ ಮತ್ತೆ ವಿನಾಕಾರಣ ಒಮ್ಮೆಲೇ 60 ಹೆಚ್ಚಿಸಿ ಬಡಜನತೆಯ ಮೇಲೆ ಅನ್ಯಾಯದ ಆರ್ಥಿಕ ಹೊರೆ ಹೇರಿದೆ’ ಎಂದು ಆರೋಪಿಸಿದರು.
‘ಬೆಲೆ ಹೆಚ್ಚಳ ಖಂಡಿಸಿ ಜನಸಾಮಾನ್ಯರ ಪರವಾಗಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದು, ದೇಶದ ಉದ್ದಗಲದಲ್ಲಿಯೂ ವ್ಯಾಪಕವಾಗಿ ಖಂಡಿಸಲಾಗುತ್ತಿದೆ. ಇನ್ನಾದರೂ ಸಿಲಿಂಡರ್ ಬೆಲೆ ಕಡಿಮೆ ಮಾಡಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಚೂಡಾ ಅಧ್ಯಕ್ಷ ಮಹಮ್ಮದ್‌ಅಸ್ಕರ್, ಎಪಿಎಂಸಿ ಅಧ್ಯಕ್ಷ ಗುರುಸ್ವಾಮಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಮಧುಸೂದನ್, ಜಿಲ್ಲಾ ಸಾಮಾಜಿಕ ಜಾಲತಾಣ ಅಧ್ಯಕ್ಷ ನಾಗೇಂದ್ರ ಎಸ್, ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಯೋಗೇಂದ್ರ, ಪ್ರಧಾನ ಕಾರ್ಯದರ್ಶಿ ಸಚಿನ್, ಟೌನ್ ಅಧ್ಯಕ್ಷ ಅಕ್ಷಯ್ ಕುಮಾರ್, ಎನ್ಎಸ್ ಯುಐ ಉಪಾಧ್ಯಕ್ಷ ಮುತ್ತು,ಶಶಾಂಕ್, ಸಂಜು,ನವೀನ್, ದರ್ಶನ, ಪ್ರದೀಪ್, ಕುದೇರು ಲಿಂಗಣ್ಣ, ಸೊತ್ತನಹುಂಡಿ ಸೋಮಣ್ಣ, ನಗರಸಭಾ ಮಾಜಿ ಅಧ್ಯಕ್ಷೆ ಚಿನ್ನಮ್ಮ, ಚೂಡಾ ಮಾಜಿ ಅಧ್ಯಕ್ಷ ಸೈಯದ್‌ರಫೀ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರಕಲವಾಡಿ ಗುರುಸ್ವಾಮಿ, ತೋಟೇಶ್, ಕಾಗಲವಾಡಿ ಚಂದ್ರು, ನಲ್ಲೂರು ಸೋಮೇಶ್, ಓಬಿಸಿ ಜಿಲ್ಲಾಧ್ಯಕ್ಷ ಚೇತನ್, ನಾಗಯ್ಯ, ಪ್ರಕಾಶ್, ಬಸವರಾಜು ಗೂಳೀಪುರ ನಾಗೇಂದ್ರ, ಕೆರೆಹಳ್ಳಿ ರೇವಣ್ಣ,ಸೋಮೇಶ್, ನಾಗರಾಜು, ಪ್ರಸನ್ನ, ಕುಮಾರ್, ಸ್ವಾಮಿ, ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಗೌಡಹಳ್ಳಿ ರಾಜೇಶ್ ಇತರರು ಭಾಗವಹಿಸಿದ್ದರು.