ಚಾಮರಾಜನಗರ: ಚಾಮರಾಜನಗರದಲ್ಲಿ ಈ ತಿಂಗಳ 20ರಂದು 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ ನಡೆಯಲಿದ್ದು ಮುಖ್ಯ ಮಂತ್ರಿಯವರಾದ ಸಿದ್ದರಾಮಯ್ಯನವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆಂದು ಕೆ.ಎಂ.ಎಫ್‌ನ ವ್ಯವಸ್ಥಾಪಕ ನಿದೇಶಕ ಬಿ.ಶಿವಸ್ವಾಮಿ ತಿಳಿಸಿದರು.
ಚಾಮರಾಜನಗರ ತಾಲ್ಲೂಕು ಕುದೇರಿನಲ್ಲಿರುವ ಚಾಮುಲ್‌ನಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು 72ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ದಿನಾಂಕ 14-11-2025ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದು ಅದರ ಸಮಾರೋಪವನ್ನು ಚಾಮರಾಜನಗರದಲ್ಲಿ ಮಾಡಲು ನಿರ್ಧರಿಸಿದ್ದೇವೆ. ಮೈಸೂರು ವಿಭಾಗದಿಂದ ನಡೆಯುವ ಈ ಕಾರ್ಯಕ್ರಮಕ್ಕೆ ಸುಮಾರು 30 ಸಾವಿರ ಜನರು ಬರುವ ನಿರೀಕ್ಷೆ ಇದ್ದು ಸಿದ್ಧತೆಯನ್ನು ಮಾಡಲು 10 ಸಮಿತಿಗಳನ್ನು ರಚಿಸಲಾಗಿದ್ದು ಆಯಾಯಾ ಸಮಿತಿಯವರು ಅವರಿಗೆ ಕೊಟ್ಟಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ವಸ್ತು ಪ್ರದರ್ಶನದ ವ್ಯವಸ್ಥೆ, ವಿಷಯ ತಜ್ಞರಿಂದ ಉಪನ್ಯಾಸ ಕಾರ್ಯಕ್ರಮಗಳು ನಡೆಯುತ್ತವೆ. ಒಟ್ಟಾರೆಯಾಗಿ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಹಕರಿಸಬೆಕು ಎಂದರು.
ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ವೆಂಕಟೇಶ್, ಸಮಾಜ ಕಲ್ಯಾಣ ಸಚಿವರಾದ ಡಾ. ಹೆಚ್ ಸಿ ಮಹದೇವಪ್ಪ ಲೋಕಸಭಾ ಸದಸ್ಯರಾದ ಸುನಿಲ್ ಬೋಸ್ ಸೇರಿದಂತೆ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರುಗಳು, ನಿಗಮ ಮಂಡಳಿಯ ಅಧ್ಯಕ್ಷರುಗಳು ಆಗಮಿಸಲಿದ್ದಾರೆಂದು ತಿಳಿಸಿದರು.
ಸಭೆಯಲ್ಲಿ ರಾಜ್ಯ ಹಾಲು ಮಹಾಮಂಡಳ ಆಡಳಿತಾಧಿಕಾರಿ ಟಿ. ಹೆಚ್. ಎಂ. ಕುಮಾರ್, ಮೈಸೂರು ಚಾಮರಾಜನಗರ ಜಿಲ್ಲಾ ಸಹಕಾರ ಕೆಂದ್ರ ಬ್ಯಾಂಕ್ ಆಡಳಿತಾಧಿಕಾರಿ ಎಂ. ಆಶಾ, ಚಾಮುಲ್ ಅಧ್ಯಕ್ಷರಾದ ಎಂ ನಂಜುಂಡಸ್ವಾಮಿ, ಮೈಮುಲ್ ಅಧ್ಯಕ್ಷರಾದ ಈರೇಗೌಡ, ಹೆಚ್ ಎಸ್. ನಂಜುಂಡ ಪ್ರಸಾದ್, ಚಾಮುಲ್ ವ್ಯವಸ್ಥಾಪಕ ನಿರ್ದೇಶಕರಾದ ರಾಜಕುಮಾರ್, ಉಪಸ್ಥಿತರಿದ್ದರು.